Provident Fund: ಭವಿಷ್ಯ ನಿಧಿ ಖಾತೆದಾರರರಿಗೆ ಸಿಹಿಸುದ್ದಿ- 2 ಸಾವಿರ ಕೋಟಿ 'ಪಿಎಫ್' ಹಣ ಬಿಡುಗಡೆಗೆ ಸಂಪುಟ ಅನುಮೋದನೆ
ಬೆಂಗಳೂರು, ಜನವರಿ 03: ಸಚಿವ ಸಂಪುಟದಲ್ಲಿ ಬಸ್ ಟಿಕೆಟ್ ದರ ಶೇಕಡ 15 ರಷ್ಟು ಹೆಚ್ಚಿಗೆ ಮಾಡಿ ಸರ್ಕಾರ ನಿರ್ಧಾರ ಕೈಗೊಂಡಿದೆ. ಇದರ ಬೆನ್ನಲ್ಲೇ ಸಾರಿಗೆ ನೌಕರರಿಗೆ ಇದೀಗ ಸರ್ಕಾರ ಸಿಹಿ ಸುದ್ದಿ ಒಂದನ್ನು ನೀಡಿದ್ದು, ನೌಕರರ ಪಿಎಫ್ ಹಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡು ಸಾವಿರ ಕೋಟಿ ರೂಪಾಯಿ ನೀಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಕಳೆದ ವರ್ಷ ನವೆಂಬರ್‌ನಲ್ಲಿ KSRTC, KKRTC, BMTC ಹಾಗೂ NWKRTC ಎಲ್ಲ ನಾಲ್ಕು ಸಾರಿಗೆ ನಿಗಮಗಳು ನೌಕರರ ಸುಮಾರು 2972 ಕೋಟಿ ಹಣವನ್ನು ಪಿಎಫ್ ಟ್ರಸ್ಟ್ ಗೆ ಜಮೆ ಮಾಡದೇ ದುರ್ಬಳಕೆ ಮಾಡಿ ಕೊಂಡಿವೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ನೌಕರರ ಪಿಎಫ್ ಟ್ರಸ್ಟ್ ಗೆ 2000 ಕೋಟಿ ಕೋಟಿ ಹಣ ನೀಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ನಾಲ್ಕು ನಿಗಮಗಳು ಬ್ಯಾಂಕ್ನಿಂದ ಸಾಲ ಪಡೆದು, ಪಿಎಫ್ ಟ್ರಸ್ಟ್ಗೆ ಹಣ ನೀಡಲಿವೆ. ಮುಂದಿನ ಒಂದು ವಾರದಲ್ಲಿ ಯಾವುದಾದರೂ ಬ್ಯಾಂಕ್ಗಳಿಂದ ಸಾರಿಗೆ ಇಲಾಖೆ 2 ಸಾವಿರ ಕೋಟಿ ರೂ. ಸಾಲ ಪಡೆಯಲಿದೆ. ಇದಕ್ಕೆ ರಾಜ್ಯ ಸರ್ಕಾರ ಶೂರಿಟಿಯಾಗಲಿದೆ.

ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮಗಳ ಪ್ರಯಾಣದರ ಶೇ 15ರಷ್ಟು ಹೆಚ್ಚಿಸಿ ಪರಿಷ್ಕರಿಸಲು ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಈ ದರವು ಜನವರಿ 5 ರಿಂದ ಜಾರಿಗೆ ಬರಲಿದೆ.
ಪ್ರತಿ ಲೀಟರ್ ಡೀಸೆಲ್ ಗೆ 10-1-2015ರಲ್ಲಿ ಬಿಎಂಟಿಸಿ ಗೆ ಹತ್ತು ವರ್ಷಗಳ ಹಿಂದೆ ದರ ಪರಿಷ್ಕರಣೆ ಆಗಿತ್ತು. ಅಂದು ರೂ60.98 ಪೈಸೆ ಇತ್ತು. ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಅಂದಿನ ಡೀಸೆಲ್ ವೆಚ್ಚ 9 ಕೋಟಿ 16ಲಕ್ಷ ಇದ್ದ್ದು ಈಗ ಪ್ರಸ್ತುತ 13.21ಕೋಟಿ ಹೆಚ್ಚಳ ಆಗಿದೆ. ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಂದ ಸಿಬ್ಬಂದಿ ವೆಚ್ಚ 12.85ಕೋಟಿ ಇದ್ದದ್ದು ಪ್ರಸ್ತುತ 18.36 ಕೋಟಿ ಆಗಿದೆ ಪ್ರತಿ ದಿನ 9.56ಕೋಟಿ ಹೆಚ್ಚುವರಿ ಹೊರೆ ಉಂಟಾಗಿದೆ. ಆ ಹಿನ್ನೆಲೆಯಲ್ಲಿ ದರ ಪರಿಷ್ಕರಣೆ ಆಗಿದೆ.
ಎಲ್ಲಾ ಕಾರ್ಪೋರೇಷನ್ ಗಳು, ನಗರ ಬಸ್ಸುಗಳು, ಐಷಾರಾಮಿ ಬಸ್ಸುಗಳು ಸೇರಿದಂತೆ ಎಲ್ಲರಿಗೂ ಶೇ 15% ಪರಿಷ್ಕರಿಸಲಾಗಿದೆ. ಇದರಿಂದ ಪ್ರತಿ ತಿಂಗಳು 74.85 ಕೋಟಿಗಳಷ್ಟು ಆದಾಯ ಹೆಚ್ಚಾಗಲಿದೆ. ಶಕ್ತಿ ಯೋಜನೆಗಾಗಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ 5015 ಕೋಟಿಗಳನ್ನು ಮೀಸಲಿರಿಸಿದೆ. ಪ್ರತಿ ತಿಂಗಳು ನಾಲ್ಕೂ ನಿಗಮಗಳಿಗೆ 417.92 ಕೋಟಿ ಗಳ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊರೆಯಾಗುವುದಿಲ್ಲ. ಕರ್ನಾಟಕ ಅತ್ಯುತ್ತಮ ಆರ್ಥಿಕ ಹೊಣೆಗಾರಿಕೆಯನ್ನು ಅನುಷ್ಠಾನ ಮಾಡಿರುವ ರಾಜ್ಯ ಎಂದು ಸಚಿವರಾದ ಹೆಚ್ ಕೆ ಪಾಟೀಲ್ ಅವರು ತಿಳಿಸಿದರು.












Click it and Unblock the Notifications