ಕೈ ಹಿಡಿಯದ ಪ್ರೀತಿ; ಸ್ವಾಭಿಮಾನ ಬದುಕಿಗೆ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡ ಸಾಹಸಿ ತೃತೀಯ ಲಿಂಗಿ!
ಬೆಂಗಳೂರು, ಜ. 06: ಹುಟ್ಟಿದ್ದು ಗಂಡಾಗಿ. ಭಾವನೆಗಳು ಹೆಣ್ಣಾಗಿದ್ದವು. ನಮ್ಮ ಪ್ರೀತಿಯ ರಾಮು ಕೊನೆಗೂ ಒಂದು ದಿನ ಮೊನಿಷಾ ಆಗಿ ಬದಲಾದಳು. ಎಸ್ಎಸ್ಎಲ್ ಸಿಯಲ್ಲಿ ಫೇಲಾದ ಬಳಿಕ ಏಕಾಂಗಿಯಾಗಿ ಸೇರಿದ್ದು ಮುಂಬಯಿ ಮಂಗಳಮುಖಿಯರ ಅಡ್ಡಾ. ಲಿಂಗಪರಿವರ್ತನೆ ಮೂಲಕ ರಾಮು ಮೊನಿಷಳಾಗಿ ಬದಲಾಗಿದ್ದಳು. ಆಗ ಟಿಸಿಲೊಡಿದ್ದು ಪ್ರೀತಿ. ಅಲ್ಲಿಯೂ ತಿರಸ್ಕಾರ. ಹೀಗೆ ಸಮಾಜದ ತುಳಿತಕ್ಕೆ ಸಿಲುಕಿದ ಮೊನಿಷಾ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಾರೆ. ತೃತೀಯ ಲಿಂಗಿಗಳಿಗೆ ಸ್ಫೂರ್ತಿದಾಯಕವಾಗಿದ್ದಾರೆ.
ಸರ್ಕಾರಿ ನೌಕರಿಯಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಇಡುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ. ಇದರ ಬೆನ್ನಲ್ಲೇ ಕರ್ನಾಟಕ ಪೊಲೀಸ್ ಇಲಾಖೆ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದನ್ನು ಸ್ಮರಿಸಬಹುದು. ಆದರೆ, ಹೈಕೋರ್ಟ್ ಆದೇಶಕ್ಕೂ ಮೊದಲು, ಒಬ್ಬ ತೃತೀಯ ಲಿಂಗಿ ಸರ್ಕಾರಿ ನೌಕರಿ ಗಿಟ್ಟಿಸಲು ಏನೆಲ್ಲಾ ಸರ್ಕಸ್ ಮಾಡಿದ್ದಾಳೆ ಎಂಬ ರೋಚಕ ಕಥೆ, ಜೈ ಭೀಮ್ ಸಿನಿಮಾಗಿಂತಲೂ ರೋಚಕವಾಗಿದೆ. ಮಾತ್ರವಲ್ಲ ಇಡೀ ತೃತೀಯ ಲಿಂಗಿ ಸಮುದಾಯದ ಬಗ್ಗೆ ಹೆಮ್ಮೆ ಪಡುವಂತಹ ಸಾಧನೆ ಇದಾಗಿದೆ.
ಹುಟ್ಟಿದ್ದು ಗಂಡಾಗಿ. ಹೆಸರು ರಾಮು. ಆದರೆ ದಿನಗಳು ಕಳೆಯುತ್ತಿದ್ದಂತೆ ಹೆಣ್ಣಿನ ಭಾವನೆಗಳು ಆವರಿಸಿದವು. ಹೆಣ್ಣಾಗುವ ಆಸೆಯಿಂದಲೇ ಶಾಲೆಯಲ್ಲಿ ಸ್ತ್ರೀ ಪಾತ್ರ ಮಾಡಿದಳು. ಇದರಿಂದ ರಾಮು ಮನೆಯಲ್ಲಿಯೇ ತಿರಸ್ಕಾರಕ್ಕೆ ಒಳಗಾದರು. ರಾಮು ಸರಿಹೋಗುತ್ತಾನೆ ಎಂಬ ಕುಟುಂಬದ ಆಸೆ ನಿರಾಸೆಯಾಗಿತ್ತು. ಎಸ್ಎಸ್ಎಲ್‌ಸಿ ಫೇಲಾದ ರಾಮು ಮನೆ ಬಿಟ್ಟು ಹೊರಟ. ಮುಂಬಯಿಯಲ್ಲಿರುವ ಮಂಗಳಮುಖಿ ಸಮುದಾಯ ಸೇರಿದಳು. ಅಲ್ಲಿ ಭಿಕ್ಷಾಟನೆ ಮಾಡಿ ದುಡಿದ ಹಣದಲ್ಲಿ ಲಿಂಗ ಪರಿವರ್ತನೆಗೆ ಒಳಗಾದ ರಾಮು ಬೆಂಗಳೂರಿಗೆ ಬಂದಾಗ ಮನೆಯವರಿಂದ ಮತ್ತೆ ತಿರಸ್ಕಾರ.
















Click it and Unblock the Notifications