ಒಡಿಶಾದಲ್ಲಿ ಸಿಲುಕಿದ್ದ ಜಾನಪದ ಕಲಾವಿದರಿಗೆ ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ ಸಿದ್ದರಾಮಯ್ಯ ಸರ್ಕಾರ
ಬೆಂಗಳೂರು, ಜೂನ್ 05: ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ದುರಂತದಿಂದಾಗಿ ಒಡಿಶಾದ ಪುರಿಯಲ್ಲಿ ಸಿಲುಕಿರುವ 17 ಜನಪದ ಕಲಾವಿದರ ಪ್ರಯಾಣಕ್ಕೆ ಕರ್ನಾಟಕ ಸರ್ಕಾರವು ವಿಮಾನ ಟಿಕೆಟ್‌ಗಳನ್ನು ಒದಗಿಸಿದೆ. ಕರ್ನಾಟಕದ ಜಾನಪದ ಕಲಾವಿದರು ಪುರಿಯಲ್ಲಿ ನಡೆಯುವ ಜಾನಪದ ಮೇಳದಲ್ಲಿ ಭಾಗವಹಿಸಲು ಹೋಗಿದ್ದರು. ಅವರು ವಿಮಾನದ ಮೂಲಕ ಭಾನುವಾರ ರಾತ್ರಿ ಬೆಂಗಳೂರಿಗೆ ಬಂದಿಳಿದರು.
ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದಾಗಿ ಕರ್ನಾಟಕದ ಜಾನಪದ ಕಲಾವಿದರು ಪುರಿಯಲ್ಲಿ ಸಿಲುಕಿಕೊಂಡಿದ್ದರು. ಕರ್ನಾಟಕದ 17 ಕಲಾವಿದರ ತಂಡವು ತಮ್ಮ ಮನೆಗಳನ್ನು ತಲುಪಲು ಬಸ್ ಅಥವಾ ರೈಲು ಪಡೆಯಲು ಸಾಧ್ಯವಾಗಲಿಲ್ಲ. ಅವರನ್ನು ವಾಪಸ್ ಕರೆತರಲು ಕರ್ನಾಟಕ ಸರ್ಕಾರ ವಿಮಾನ ವ್ಯವಸ್ಥೆಯನ್ನು ಮಾಡಿದೆ.

ಈ ಕುರಿತು ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, 'ಜಾನಪದ ಕಲಾವಿದರು ನನ್ನನ್ನು ಸಂಪರ್ಕಿಸಿದರು. ನಾವು ವಿಮಾನ ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ. ಅವರು ಭಾನುವಾರ ರಾತ್ರಿ ಬೆಂಗಳೂರು ತಲುಪಿದ್ದಾರೆ' ಎಂದು ಮಾಹಿತಿ ನೀಡಿದ್ದಾರೆ.
ರೈಲು ಅಪಘಾತದ ನಂತರ ಪಶ್ಚಿಮ ಬಂಗಾಳದಲ್ಲಿ ಸಿಲುಕಿದ್ದ ಕರ್ನಾಟಕದ ವಾಲಿಬಾಲ್ ತಂಡಕ್ಕೆ ಸರ್ಕಾರ ವಿಮಾನ ಟಿಕೆಟ್‌ಗಳನ್ನು ವ್ಯವಸ್ಥೆಗೊಳಿಸಿತು. ಮೇ 27 ರಿಂದ ಜೂನ್ 1 ರವರೆಗೆ ಪಶ್ಚಿಮ ಬಂಗಾಳದ ಚಂದನ ನಗರದಲ್ಲಿ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ತಂಡವು ಜೂನ್ 2 ರಂದು ಕರ್ನಾಟಕಕ್ಕೆ ಮರಳಬೇಕಿತ್ತು. ಆದರೆ, ಕೆಲವರಿಗೆ ಟಿಕೆಟ್ ಸಿಗದ ಕಾರಣ ಕೊನೆಯ ಕ್ಷಣದಲ್ಲಿ ಅವರು ರೈಲು ಹತ್ತಲಿಲ್ಲ. ಆಟಗಾರರೆಲ್ಲರೂ ಭಾನುವಾರ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿದರು.

ರೈಲು ಅಪಘಾತದ ನಂತರ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಶನಿವಾರ ಕಾರ್ಮಿಕ ಸಚಿವ ಸಂತೋಷ್ ಲಾಡ್ ನೇತೃತ್ವದ ಐದು ಸದಸ್ಯರ ತಂಡವನ್ನು ಕಳುಹಿಸಿದೆ.
ಇದೇ ವೇಳೆ, ಎಲ್ಲ ಕನ್ನಡಿಗರು ಸುರಕ್ಷಿತವಾಗಿದ್ದು, ಯಾರೂ ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ ಎಂದು ಸಂತೋಷ್ ಲಾಡ್ ಖಚಿತಪಡಿಸಿದ್ದಾರೆ. ಒಡಿಶಾ ರೈಲು ದುರಂತದಲ್ಲಿ ಸತ್ತವರ ಸಂಖ್ಯೆ 275 ಕ್ಕೆ ತಲುಪಿದೆ ಮತ್ತು 1000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ರೈಲ್ವೆ ಸಚಿವಾಲಯ ನೀಡಿದ ಸಾವಿನ ಅಂಕಿಅಂಶಗಳನ್ನು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಪ್ರಶ್ನಿಸಿದ್ದು, ತಮ್ಮ ರಾಜ್ಯದ 61 ಜನರು ಸಾವನ್ನಪ್ಪಿದ್ದಾರೆ ಮತ್ತು 182 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. 'ಒಂದು ರಾಜ್ಯದಿಂದ, 182 ಮಂದಿ ಕಾಣೆಯಾಗಿದ್ದಾರೆ ಮತ್ತು 61 ಮಂದಿ ಸತ್ತಿದ್ದಾರೆ. ಹಾಗಾಗಿ, ಸಾವಿನ ಅಂಕಿಅಂಶಗಳ ಸತ್ಯವೇನು' ಎಂದು ಮಮತಾ ಪ್ರಶ್ನಿಸಿದ್ದಾರೆ.
ರೈಲು ಅಪಘಾತದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಒಡಿಶಾ ಪೊಲೀಸರು ಭಾನುವಾರ ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಕೋಮು ಬಣ್ಣ ಬಳಿಯಬಾರದೆಂದು ಅವರು ಹೇಳಿದ್ದಾರೆ.












Click it and Unblock the Notifications