Get Updates
Get notified of breaking news, exclusive insights, and must-see stories!

ಕಾಡು ಪ್ರಾಣಿ ಡಿಕ್ಕಿ: ಬೈಕ್ ಸವಾರ ಸಾವು, ಮಗನ ಶವ ಕಂಡು ಜೀವ ಬಿಟ್ಟ ತಂದೆ

ಶಿವಮೊಗ್ಗ: ವಿಧಿಯಾಟ ಬಲ್ಲವರಾರು ಎಂಬ ಮಾತಿನಂತೆ ಒಂದೇ ಒಂದು ಕ್ಷಣದ ಅಂತರದಲ್ಲಿ ಇಡೀ ಕುಟುಂಬವೇ ಅನಾಥವಾಗಿರುವ ಅತ್ಯಂತ ಹೃದಯವಿದ್ರಾವಕ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ರಾತ್ರಿ ಪಾಳಯದ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಯುವಕನ ಬೈಕ್‌ಗೆ ಕಾಡು ಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಹೆತ್ತ ಮಗನ ಶವವನ್ನು ನೋಡಿ ತೀವ್ರ ಆಘಾತಕ್ಕೊಳಗಾದ ತಂದೆ ಮನೆಗೆ ಬಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭಾನುವಾರ ತಡರಾತ್ರಿ ಈ ಭೀಕರ ದುರಂತ ಸಂಭವಿಸಿದ್ದು, ಇಡೀ ಮಲೆನಾಡು ಭಾಗದ ಜನರನ್ನು ಬೆಚ್ಚಿಬೀಳಿಸಿದೆ.

ಹೊಸನಗರ ತಾಲೂಕಿನ ಯಡೂರು ಸಮೀಪದ ಕುಂಬ್ರಿ ಗದ್ದೆಯಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ವರದರಾಜ ಮತ್ತು ಆತನ ತಂದೆಯನ್ನು ಮಂಜಪ್ಪ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರಾಗಿದ್ದು, ಹೊಟ್ಟೆಪಾಡಿಗಾಗಿ ಬಂದು ಇಲ್ಲಿ ನೆಲೆಸಿದ್ದರು. ಬಡ ಕುಟುಂಬದ ಆಧಾರಸ್ತಂಭವಾಗಿದ್ದ ವರದರಾಜ ತೀರ್ಥಹಳ್ಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು.

Tragic Accident In Hosanagara

ಅಪಘಾತ ನಡೆದಿದ್ದು ಹೇಗೆ?

ಭಾನುವಾರ ತಡರಾತ್ರಿ ವರದರಾಜ ತೀರ್ಥಹಳ್ಳಿಯಿಂದ ತನ್ನ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದನು. ಈ ವೇಳೆ ಕೌರಿ ಕಾನುಗೋಡು ಸಮೀಪದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಬರುತ್ತಿದ್ದಾಗ, ಕತ್ತಲಿನಲ್ಲಿ ಏಕಾಏಕಿ ರಸ್ತೆಗೆ ಅಡ್ಡಬಂದ ಕಾಡು ಪ್ರಾಣಿಯೊಂದು ಆತನ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪ್ರಾಣಿ ಡಿಕ್ಕಿಯಾದ ರಭಸಕ್ಕೆ ನಿಯಂತ್ರಣ ತಪ್ಪಿದ ಬೈಕ್ ರಸ್ತೆಗೆ ಉರುಳಿದ್ದು, ವರದರಾಜನ ತಲೆಗೆ ಗಂಭೀರ ಪೆಟ್ಟಾಗಿದೆ. ತೀವ್ರ ರಕ್ತಸ್ರಾವವಾದ ಕಾರಣ ಯುವಕ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾನೆ.

ಅಪಘಾತದ ಮಾಹಿತಿ ತಿಳಿದ ತಕ್ಷಣ ವರದರಾಜನ ತಂದೆ ಮಂಜಪ್ಪ ನಾಯ್ಕ್ ಆತಂಕದಿಂದಲೇ ಘಟನಾ ಸ್ಥಳಕ್ಕೆ ಓಡಿಬಂದಿದ್ದಾರೆ. ಅಲ್ಲಿ ರಕ್ತದ ಮಡುವಿನಲ್ಲಿ ಹೆಣವಾಗಿ ಬಿದ್ದಿದ್ದ ಮಗನನ್ನು ನೋಡಿ ತಂದೆಯ ಕರುಳು ಚುರುಕ್ ಎಂದಿದೆ. ಮಗನ ಸಾವಿನಿಂದ ತೀವ್ರ ವಿಚಲಿತರಾದ ಮಂಜಪ್ಪ ನಾಯ್ಕ್, ಯಾರಿಗೂ ಏನನ್ನೂ ಹೇಳದೆ ಅಲ್ಲಿಂದ ನೇರವಾಗಿ ಮನೆಗೆ ಬಂದಿದ್ದಾರೆ. ಮಗನಿಲ್ಲದ ಮೇಲೆ ನಾನಿದ್ದು ಏನು ಪ್ರಯೋಜನ ಎಂಬ ಹತಾಶೆಯಿಂದ, ಮನೆಯಲ್ಲಿದ್ದ ಮಂಗನ ಕಾಯಿಲೆಗೆ ಬಳಸುವ ಕ್ರಿಮಿನಾಶಕವನ್ನು ಸೇವಿಸಿ ತಾವೂ ಕೂಡ ಪ್ರಾಣ ಬಿಟ್ಟಿದ್ದಾರೆ. ಕೆಲವೇ ಗಂಟೆಗಳ ಅಂತರದಲ್ಲಿ ಅಪ್ಪ-ಮಗ ಇಬ್ಬರೂ ಸಾವನ್ನಪ್ಪಿರುವುದು ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸುವಂತೆ ಮಾಡಿದೆ.

ಮೃತ ವರದರಾಜ ವಿವಾಹಿತನಾಗಿದ್ದು, ಆತನಿಗೆ ಪತ್ನಿ ಹಾಗೂ ಕೇವಲ ಎರಡು ವರ್ಷದ ಪುಟ್ಟ ಹೆಣ್ಣು ಮಗುವಿದೆ. ಮನೆಯ ಜವಾಬ್ದಾರಿ ಹೊತ್ತಿದ್ದ ಗಂಡ ಮತ್ತು ಮಾವ ಇಬ್ಬರೂ ಒಂದೇ ದಿನ ಮೃತಪಟ್ಟಿರುವುದರಿಂದ ಆತನ ಪತ್ನಿ ಹಾಗೂ ಪುಟ್ಟ ಮಗು ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ. ದುರಂತದ ಬಳಿಕ ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಯ ನಂತರ ಅವರ ಮೂಲ ಊರಾದ ಶಿರಸಿಗೆ ತೆಗೆದುಕೊಂಡು ಹೋಗಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನೋಡುವವರ ಕರುಳು ಹಿಂಡುವಂತಿತ್ತು.

ಕಾಡು ಪ್ರಾಣಿಯ ಹಾವಳಿಯಿಂದಾಗಿಯೇ ಈ ದುರಂತ ಸಂಭವಿಸಿರುವುದರಿಂದ ಮತ್ತು ಬಡ ಕುಟುಂಬದ ಇಬ್ಬರು ದುಡಿಯುವ ಕೈಗಳು ಇಲ್ಲವಾಗಿರುವುದರಿಂದ, ಅರಣ್ಯ ಇಲಾಖೆ ಹಾಗೂ ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅನಾಥವಾಗಿರುವ ವರದರಾಜನ ಪತ್ನಿ ಹಾಗೂ ಎರಡು ವರ್ಷದ ಮಗುವಿನ ಭವಿಷ್ಯಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕು ಎಂಬ ಒತ್ತಾಯಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+