ಶೀಘ್ರವೇ ತಾಲೂಕು, ಜಿ.ಪಂ ಚುನಾವಣೆ: ಕೋರ್ಟ್‌ಗೆ ಸರ್ಕಾರದ ಮಾಹಿತಿ
ಬೆಂಗಳೂರು, ಡಿಸೆಂಬರ್ 20: ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಒಂದು ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಭರವಸೆ ನೀಡಿದೆ. ಹಾಗಾಗಿ ಬಹುತೇಕ ಚುನಾವಣೆ ಸನ್ನಿಹಿತವಾಗಿದೆ ಎಂಬ ಮುನ್ಸೂಚನೆಯನ್ನು ಸರ್ಕಾರ ನೀಡಿದೆ.
ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲು ನಿಗದಿ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಪಿಐಎಲ್ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು. ಆಗ ರಾಜ್ಯ ಸರ್ಕಾರದ ಹೇಳಿಕೆಯ ಆಧಾರದಲ್ಲಿ ಪಿಐಎಲ್ ಅನ್ನು ನ್ಯಾಯಾಲಯ ಇತ್ಯರ್ಥಪಡಿಸಿದೆ.

ಎಲ್ಲಾ ಪ್ರಕ್ರಿಯೆ ಪೂರ್ಣ: ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಅವರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿಗಳನ್ನು ನಿರ್ಧರಿಸುವ ಹಾಗೂ ಮೀಸಲಾತಿ ನಿಗದಿಪಡಿಸುವ ಪ್ರಕ್ರಿಯೆ ಚರುಕುಗೊಳಿಸಲಾಗಿದೆ.
ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ 30 ಜಿಲ್ಲೆಗಳ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆಯನ್ನು ಮಂಗಳವಾರ ಸಂಜೆ ಪ್ರಕಟಿಸಲಾಗುವುದು. ಮುಂದಿನ ಏಳು ದಿನಗಳಲ್ಲಿ ಕೊಡಗು ಜಿಲ್ಲೆಯ ಕ್ಷೇತ್ರ ಪುನರ್‌ವಿಂಗಡಣೆ ಅಧಿಸೂಚನೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಅಲ್ಲದೆ, ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿದ ನಂತರ 7 ದಿನಗಳಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಮೀಸಲಾತಿ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ನೀಡಲಾಗುವುದು. ಅದಾದ ಎರಡು ವಾರಗಳಲ್ಲಿ ಸಂಬಂಧಪಟ್ಟ ಪ್ರಾಧಿಕಾರಗಳು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲಿವೆ ಎಂದು ಹೇಳಿದರು.
ಸರ್ಕಾರದ ಬಗ್ಗೆ ಅನುಮಾನ: ಅದಕ್ಕೆ ರಾಜ್ಯ ಚುನಾವಣಾ ಆಯೋಗ ಪರ ಹಿರಿಯ ವಕೀಲರು ಸರ್ಕಾರದ ಹೇಳಿಕೆಯ ಬಗ್ಗೆ ಸಂಶಯವಾಗಿದೆ. ಅವರು ಹೇಳಿದಂತೆ ನಡೆದುಕೊಳ್ಳುತ್ತಾರೆಯೇ? ಎಂಬುದು ಅನುಮಾನವಾಗಿದೆ ಎಂದರು.
ಆಗ ನ್ಯಾಯಪೀಠ, "ಅಡ್ವೋಕೇಟ್ ಜನರಲ್ ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಅವರ ಮಾತನ್ನು ನಂಬಬೇಕಾಗುತ್ತದೆ, ಭರವಸೆ ಇಡಬೇಕಾಗುತ್ತದೆ" ಎಂದು ಹೇಳಿತು. ಜೊತೆಗೆ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಳಿಸಿರುವುದಾಗಿ ತಿಳಿಸಿರುವ ಹೇಳಿಕೆಯನ್ನು ಎಜಿ ಲಿಖಿತವಾಗಿ ಸಲ್ಲಿಸಬೇಕು. ಎಜಿ ಹೇಳಿಕೆಯನ್ನು ಮುಚ್ಚಳಿಕೆಯನ್ನಾಗಿ ನ್ಯಾಯಾಲಯ ಪರಿಗಣಿಸಲಿದೆ ಎಂದು ತಿಳಿಸಿತು. ಅದಕ್ಕೆ ಅಡ್ವೋಕೇಟ್ ಜನರಲ್ ಸಹ ಒಪ್ಪಿಗೆ ನೀಡಿದರು.
ಇದರಿಂದ ಎಜಿ ಅವರ ಮೌಖಿಕ ಹೇಳಿಕೆಯನ್ನು ಮುಚ್ಚಳಿಕೆಯಾಗಿ ನ್ಯಾಯಾಲಯ ಪರಿಗಣಿಸುತ್ತಿದೆ. ಈ ಸಂಬಂಧ ಎಜಿ ಲಿಖಿತ ಪ್ರಮಾಣಪತ್ರ ಸಲ್ಲಿಸಬೇಕು. ಎಜಿ ಅವರು ನೀಡಿದ ಭರವಸೆ ಕಾರ್ಯಗತಗೊಳ್ಳದಿದ್ದರೆ ಅರ್ಜಿದಾರಾಗಿರುವ ರಾಜ್ಯ ಚುನಾವಣಾ ಆಯೋಗವು ಅಗತ್ಯ ಕ್ರಮಕ್ಕಾಗಿ ಮತ್ತೆ ನ್ಯಾಯಾಲಯಕ್ಕೆ ಬರಬಹುದು. ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಮೀಸಲಾತಿಗೆ ಸಂಬಂಧಿಸಿದ ವಿಷಯಗಳು ಬಿಟ್ಟು ಉಳಿದ ವಿಷಯಗಳಿದ್ದರೆ, ಅವು ಮುಕ್ತವಾಗಿರಲಿವೆ. ಅವುಗಳ ಬಗ್ಗೆ ಅಗತ್ಯ ಸಂದರ್ಭದಲ್ಲಿ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಲಿದೆ ಎಂದು ತಿಳಿಸಿ ನ್ಯಾಯಪೀಠ ಅರ್ಜಿ ಇತ್ಯರ್ಥಪಡಿಸಿತು.












Click it and Unblock the Notifications