ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ; 4 ವಾರ ಗಡುವು ಕೊಟ್ಟ ಕೋರ್ಟ್
ಬೆಂಗಳೂರು, ನವೆಂಬರ್ 10: ರಾಜ್ಯದ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಕ್ಷೇತ್ರಗಳ ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ 4 ವಾರಗಳ ಅಂತಿಮ ಗಡುವು ನೀಡಿದೆ. ಅಷ್ಟರಲ್ಲಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಚುನಾವಣೆ ಮಾಡಲೇಬೇಕು, ಎಷ್ಟು ದಿನ ಹಾಗೆಯೇ ಸಾಂವಿಧಾನಿಕ ಸಂಸ್ಥೆಗಳಲ್ಲಿ ಖಾಲಿ ಬಿಡುತ್ತೀರಿ? ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ರಾಜ್ಯ ಚುನಾವಣಾ ಆಯೋಗ ಅವಧಿ ಮುಗಿದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಚುನಾವಣೆ ನಡೆಸಲು ಅನುವು ಮಾಡಿಕೊಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ರಾಜ್ಯದಲ್ಲಿ ತಾ.ಪಂ. ಹಾಗೂ ಜಿ.ಪಂ. ಕ್ಷೇತ್ರ ಮರುವಿಂಗಡಣೆಗೆ ಸೀಮಾ ನಿರ್ಣಯ ಆಯೋಗ ರಚಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಸರ್ಕಾರಕ್ಕೆ ಕಾಲಾವಕಾಶ ನೀಡಿ ಆದೇಶಿಸಿದೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ರಾಜ್ಯ ಸರ್ಕಾರಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಿತು. ಜತೆಗೆ, ಇದೇ ಕೊನೆಯ ಬಾರಿ ಕಾಲಾವಕಾಶ ನೀಡಲಾಗುತ್ತಿದೆ. ಮತ್ತೊಮ್ಮೆ ನೀಡಲಾಗದು. ಪುನರ್ ವಿಂಗಡಣೆ ಮತ್ತು ಮೀಸಲು ನಿಗದಿ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಬೇಕು ಎಂದು ಸಲಹೆ ನೀಡಿ ವಿಚಾರಣೆಯನ್ನು ಡಿ.19ಕ್ಕೆ ಮುಂದೂಡಿತು.
ಮತ್ತೇಕೆ ಸಮಯ?; ಸರ್ಕಾರದ ಪರ ರಾಜ್ಯ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅದನ್ನು ಪೂರ್ಣಗೊಳಿಸಲು 4 ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರ್ಕಾರಕ್ಕೆ ಹೈಕೋರ್ಟ್ 2023ರ ಜೂ.28ರಂದು 10 ವಾರಗಳ ಸಮಯ ನೀಡಿತ್ತು. ಇದೀಗ ಮತ್ತೆ ನಾಲ್ಕು ವಾರ ಕಾಲಾವಕಾಶ ಕೇಳುತ್ತೀದ್ದೀರಲ್ಲಾ? ಎಂದು ಪ್ರಶ್ನಿಸಿತು.
ಅಲ್ಲದೆ, ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಸಂವಿಧಾನಿಕ ಸಂಸ್ಥೆಗಳಾಗಿವೆ. ಚುನಾವಣೆ ನಡೆಸದೇ ಅವುಗಳನ್ನು ಖಾಲಿಬಿಡುವುದು ಎಷ್ಟು ಸರಿ? ಚುನಾವಣಾ ನಡೆಸದೇ ಬಿಡಲಾಗದು. ಚುನಾವಣೆ ವಿಳಂಬ ಮಾಡುತ್ತಿರುವ ವಿಚಾರಕ್ಕೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ಬಾರಿ ಎಚ್ಚರಿಕೆ ಸಹ ನೀಡಿದೆ. ಹೀಗಿದ್ದರೂ ವಿಳಂಬ ಮಾಡುತ್ತಿರುವುದು ಸರಿಯಲ್ಲ.
ಕ್ಷೇತ್ರಗಳ ಮರು ವಿಂಗಡಣೆ ಮತ್ತು ಮೀಸಲಾತಿ ನಿಗದಿಯ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶಿಸಬೇಕಿದೆ ಎಂದು ಮೌಖಿಕವಾಗಿ ನುಡಿಯಿತು. ಅದಕ್ಕೆ ಉತ್ತರಿಸಿದ ಅಡ್ವೋಕೇಟ್ ಜನರಲ್, ಸರ್ಕಾರ ತಕ್ಷಣ ಚುನಾವಣೆ ನಡೆಸಲು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದರು. ನ್ಯಾಯಪೀಠ ಪ್ರತಿಕ್ರಿಯಿಸಿ, ಪ್ರಯತ್ನಿಸುತ್ತೇವೆ ಎನ್ನಲಾಗದು, ಚುನಾವಣೆ ನಡೆಸಬೇಕು ಎಂದು ಸೂಚ್ಯವಾಗಿ ನುಡಿಯಿತು.
ಈ ವೇಳೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ. ಎನ್. ಫಣೀಂದ್ರ ಅವರು, ಈ ಅರ್ಜಿ 2021ರ ಮಾರ್ಚ್‌ನಿಂದಲೂ ವಿಚಾರಣೆ ನಡೆಯುತ್ತಿದೆ. ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರಕ್ಕೆ ಹಲವು ಬಾರಿ ಸಮಯ ತೆಗೆದುಕೊಂಡಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.












Click it and Unblock the Notifications