ತಾ., ಜಿ.ಪಂ ಚುನಾವಣೆ: ಏಪ್ರಿಲ್ 1ರೊಳಗೆ ಮೀಸಲು ಪ್ರಕಟ
ಕರ್ನಾಟಕ ಸರ್ಕಾರ ಕೊನೆಗೂ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಮುಂದಾಗಿದೆ. ಏಪ್ರಿಲ್ 1ರೊಳಗೆ ಮೀಸಲಾತಿ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಹೈಕೋರ್ಟ್‌ಗೆ ಹೇಳಿದೆ.
ಬೆಂಗಳೂರು, ಮಾರ್ಚ್ 03; ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಕುರಿತು ಏಪ್ರಿಲ್ 1ರ ಒಳಗಾಗಿ ಮೀಸಲಾತಿ ಪಟ್ಟಿ ಪ್ರಕಟಿಸುವುದಾಗಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಇದರೊಂದಿಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಹಾದಿ ಸಗಮವಾದಂತಾಗಿದೆ. ಹೈಕೋರ್ಟ್ ಚಾಟಿ ಬೀಸಿದ ನಂತರ ಸರ್ಕಾರ ಕೊನೆಗೂ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಕುರಿತು ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿದೆ.
ಸುಮಾರು ಎರಡು ವರ್ಷಗಳಿಂದ ಅಧಿಕಾರಿಗಳ ದರ್ಬಾರ್ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಏಪ್ರಿಲ್ ಅಂತ್ಯ ಅಥವ ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಗಳು ಮುಗಿದ ಬಳಿಕ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ಹಿಂಪಡೆದು ಕರ್ನಾಟಕ ಪಂಚಾಯತ್‌ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು 'ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ' ಗೆ ಸರ್ಕಾರ ತಿದ್ದುಪಡಿ ತಂದಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ.
ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಳೆ ಮತ್ತು ನ್ಯಾಯಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ನ್ಯಾಯಪೀಠ ಮುಂದೆ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಮಾಹಿತಿ ನೀಡಿದರು. ಅಲ್ಲದೆ, ಈಗಾಗಲೇ ಕ್ಷೇತ್ರ ಪುನರ್ ವಿಂಗಡಣೆಗೆ ಸಂಬಂಧಿಸಿದಂತೆ ಮಾರ್ಚ್ 1ರಂದು ಗೆಜೆಟ್ ನೋಟಿಫಿಕೇಷನ್ ಹೊಡಿಸಲಾಗಿದೆ. ಜತೆಗೆ, ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಏಪ್ರಿಲ್ 1ರ ವರೆಗೆಕಾಲಾವಕಾಶ ನೀಡಿದೆ. ಅಷ್ಟರ ಒಳಗಾಗಿ ಮೀಸಲಾತಿ ಪಟ್ಟಿ ಸಿದ್ದಪಡಿಸಿ ಮುಂದಿನ ಕ್ರಮಕ್ಕಾಗಿ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ವಿವರಿಸಿದರು.
ಈ ಅಂಶ ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಏಪ್ರಿಲ್ 11ಕ್ಕೆ ಮುಂದೂಡಿತು. ಸರ್ಕಾರದ ಪರ ವಕೀಲರು ಬುಧವಾರ ಹಾಜರಾಗಿ ಕ್ಷೇತ್ರ ಪುನರ್ ವಿಂಗಡಣೆ ಅಂತಿಮ ಪಟ್ಟಿ ಕುರಿತು ಅಧಿಸೂಚನೆ ಹೊರಡಿಸಿರುವ ವಿಷಯವನ್ನು ತಿಳಿಸಿ, ಕ್ಷೇತ್ರದ ಪುನರ್ ವಿಂಗಡೆನೆ ಕುರಿತು ಗುರುವಾರ ಹೊರಡಿಸಿರುವ ಅಧಿಸೂಚನೆ ಪ್ರತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದರು.

5 ಲಕ್ಷ ದಂಡ ಪಾವತಿ: ಈ ಹಿಂದೆ ನಡೆದ ಅರ್ಜಿ ವಿಚಾರಣೆ ವೇಳೆ ನಿಗದಿತ ಸಮಯಕ್ಕೆ ಚುನಾವಣೆ ಪ್ರಕ್ರಿಯೆ ನಡೆಸದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ 5 ಲಕ್ಷ ದಂಡ ವಿಧಿಸಿತ್ತು. ಈ ಮೊತ್ತವನ್ನು ಪಾವತಿಸಿರುವುದಾಗಿ ನ್ಯಾಯಪೀಠಕ್ಕೆ ವಿವರಿಸಿದರು. ಅಲ್ಲದೇ ಅರ್ಜಿದಾರರ ಪರ ಹಾಜರಿದ್ದ ವಕೀಲರು, ಹಿರಿಯ ವಕೀಲರು ಮತ್ತೊಂದು ನ್ಯಾಯಪೀಠದ ಮುಂದೆ ವಾದ ಮಂಡಿಸುತ್ತಿದ್ದ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಈ ಅಂಶ ಪರಿಗಣಿಸಿದ ನ್ಯಾಯಪೀಠ ವಿಚಾರಣೆಯನ್ನು ಗುರುವಾರ ಮುಂದೂಡಿತು.
ಫೆಬ್ರವರಿ 14ರಂದು ನಡೆದ ವಿಚಾರಣೆ ವೇಳೆ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಕ್ಷೇತ್ರ ಪುನರ್ ವಿಂಗಡಣೆ ಕುರಿತಂತೆ ಸರ್ಕಾರ ಸಮಿತಿ ರಚನೆ ಮಾಡಿದ್ದು, ಈ ಸಮಿತಿ 2022ರ ಜನವರಿ 30 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಆಧಾರದಲ್ಲಿ ಅಧಿಸೂಚನೆ ಹೊರಡಿಸುವುದಕ್ಕಾಗಿ ಸರ್ಕಾರ ಸಿದ್ದವಿದೆ. ಮುಂದಿನ 10 ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.
ಅಲ್ಲದೇ, ಸ್ಥಳೀಯ ಸಂಸ್ಥೆಗಳಿಗೆ ಹಿಂದುಳಿದ ವರ್ಗಗಳು ಮತ್ತು ಎಸ್ಸಿ ಎಸ್ಟಿ ಜನಾಂಗಕ್ಕೆ ಮೀಸಲಾತಿ ನೀಡುವ ಸಂಬಂಧ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದು, ಈ ಸಮಿತಿ ಏ. 1 ರಂದು ಮೀಸಲಾತಿ ಪಟ್ಟಿ ಸಲ್ಲಿಸಲಿದೆ. ಈ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಜೊತೆಗೆ ಕ್ಷೇತ್ರ ಪುನರ್ ವಿಂಗಟನೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಕ್ಷೇಪಣೆ ಸ್ವೀಕರಿಸಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು. ಈ ವೇಳೆಗೆ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿ ಅಧಿಸೂಚನೆ ಹೊರಡಿಸುವುದಾಗಿ ನ್ಯಾಯಪೀಠಕ್ಕೆ ಅಡ್ವೋಕೇಟ್ ಜನರಲ್ ವಿವರಿಸಿದ್ದರು.












Click it and Unblock the Notifications