ಮಂಡ್ಯದ ಜನ ಹೊರಗಿನವರಿಗೆ ತಮ್ಮ ಸ್ಥಾನ, ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ: ದಳಪತಿಗಳ ವಿರುದ್ಧ ಡಿ ಕೆ ಶಿವಕುಮಾರ್ ವಾಗ್ದಾಳಿ

ಮಂಡ್ಯ, ಏಪ್ರಿಲ್ 01:ಮಂಡ್ಯದ ಜನ ಸ್ಥಳೀಯರಿಗೆ ಬಿಟ್ಟು ಹೊರಗಿನವರಿಗೆ ತಮ್ಮ ಸ್ಥಾನ, ಸ್ವಾಭಿಮಾನ ಬಿಟ್ಟುಕೊಟ್ಟಿಲ್ಲ. ಮಂಡ್ಯದ ಗೌಡಿಕೆ, ಆಡಳಿತವನ್ನು ಬೇರೆಯವರಿಗೆ ಬಿಟ್ಟುಕೊಟ್ಟ ಇತಿಹಾಸ ನಮ್ಮ ಮುಂದೆ ಇಲ್ಲ. ಇಲ್ಲಿ ಟೂರಿಂಗ್ ಟಾಕೀಸ್ ರಾಜಕಾರಣ ನಡೆಯಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪರೋಕ್ಷವಾಗಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು , ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಕುಮಾರಸ್ವಾಮಿ ಅವರು ಹುಟ್ಟಿದ ಮಣ್ಣು ಹಾಸನ ಜಿಲ್ಲೆ ಬಿಟ್ಟು ರಾಮನಗರಕ್ಕೆ ಬಂದಿದ್ದರು. ಈಗ ಮಂಡ್ಯ ಜಿಲ್ಲೆಗೆ ಬಂದಿದ್ದಾರೆ. ನಾವು, ನೀವು ಕೊಟ್ಟ ಅಧಿಕಾರವನ್ನು ಕುಮಾರಸ್ವಾಮಿ ಅವರು ಉಳಿಸಿಕೊಳ್ಳಲಿಲ್ಲ. ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದವರ ಜೊತೆಯೇ ಈಗ ನೆಂಟಸ್ಥನ ಬೆಳೆಸಿಕೊಂಡು ಅವರನ್ನು ತಬ್ಬಾಡುತ್ತಿದ್ದಾರೆ.

Touring Talkies Politics Will Not Take Place In Mandya Constituency Says DK Shivakumar

ದೇವೇಗೌಡರನ್ನು ಈ ದೇಶದ ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಎರಡನೇ ಬಾರಿಗೆ ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಕಾಂಗ್ರೆಸ್. ಆದರೆ ನಾವು ಅವರಿಗೆ ಮೋಸ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ನಾನು ಸರ್ಕಾರವನ್ನು ಉಳಿಸಲು ಯಾವ ರೀತಿಯ ಹೋರಾಟ ಮಾಡಿದೆ ಎಂಬುದನ್ನು ಜಿ.ಟಿ.ದೇವೇಗೌಡ, ಚನ್ನರಾಯಪಟ್ಟಣದ ಬಾಲಕೃಷ್ಣ, ಶಿವಲಿಂಗೇಗೌಡ ಅವರ ಬಳಿ ಕೇಳಿ ತಿಳಿದುಕೊಳ್ಳಲಿ.

ನೀವು ಐದು ವರ್ಷಗಳ ಕಾಲ ಯಾವುದೇ ತೊಂದರೆ ಇಲ್ಲದೇ ಮುಖ್ಯಮಂತ್ರಿಯಾಗಿ ಇರಪ್ಪ ಎಂದು ನಾವು ಅವಕಾಶ ಮಾಡಿಕೊಟ್ಟೆವು. ಆದರೆ ಅದನ್ನು ಬಿಟ್ಟು ನಾನು ಕಿರುಕುಳ, ತೊಂದರೆ ಕೊಟ್ಟೆ ಎಂದು ಹೇಳುತ್ತಿದ್ದಾರೆ. ನಾನು ಕಿರುಕುಳ ಕೊಟ್ಟ ದಿನವೇ ಕುಮಾರಸ್ವಾಮಿ ಅವರು ಬಿಜೆಪಿ ಸೇರಬಹುದಿತ್ತಲ್ಲವೇ? ಯಾಕೆ ಸೇರಲಿಲ್ಲ? ಸರ್ಕಾರ ಬೀಳುವರೆಗೂ ಅವರು ಸಿಎಂ ಸ್ಥಾನದಲ್ಲಿ ಮುಂದುವರಿದಿದ್ದು ಏಕೆ? ಎಂದು ಪ್ರಶ್ನಿಸಿದರು.

ರಾಮನಗರ ನನ್ನ ಕರ್ಮಭೂಮಿ ಎಂದಿದ್ದ ಕುಮಾರಸ್ವಾಮಿ ಅವರು ಈಗ ಮಂಡ್ಯ ನನ್ನ ಕರ್ಮಭೂಮಿ ಎಂದು ಇಲ್ಲಿಗೆ ಬಂದಿದ್ದಾರೆ. ರಾಮನಗರ ಅವರನ್ನು ಸಂಸದ, ಶಾಸಕ, ಮುಖ್ಯಮಂತ್ರಿ ಮಾಡಿತು. ಅವರ ತಂದೆಯವರನ್ನೂ ಮುಖ್ಯಮಂತ್ರಿ, ಪ್ರಧಾನಮಂತ್ರಿ ಮಾಡಿತು. ಈಗ ರಾಮನಗರ ಬಿಟ್ಟು, ಮಂಡ್ಯ ಸ್ವಾಭಿಮಾನ, ಕರ್ಮಭೂಮಿ ಎಂದು ಇಲ್ಲಿಗೆ ಬಂದಿದ್ದಾರೆ.

ಕುಮಾರಸ್ವಾಮಿ ಅವರೇ ನಿಮ್ಮ ಹುಟ್ಟೂರು ಹಾಸನ, ಗೆದ್ದಿದ್ದು ರಾಮನಗರ, ಆದರೆ ಈಗ ಮಂಡ್ಯ. ನಿಮ್ಮ ಕೈ ಹಿಡಿದ ರಾಮನಗರ ಜಿಲ್ಲೆಯ ಮತದಾರರ ಬಗ್ಗೆಯೇ ನಿಮಗೆ ಕಾಳಜಿ ಇಲ್ಲ. ಇನ್ನು ಮಿಕ್ಕವರ ಬಗ್ಗೆ ಕಾಳಜಿ ಇದೆ ಎಂದು ಜನ ಹೇಗೆ ನಂಬುವುದು? ನಿಮ್ಮ ಭಾಮೈದನನ್ನು ಬಿಜೆಪಿಯಿಂದ ನಿಲ್ಲಿಸಿದ್ದೀರಿ. ಈಗ ನಿಮ್ಮ ಪಕ್ಷ ಎಲ್ಲಿದೆ? ನಿಮ್ಮ ಕುಟುಂಬದವರನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ಜೆಡಿಎಸ್ ಎಲ್ಲಿದೆ. ಜೆಡಿಎಸ್ ಕಾರ್ಯಕರ್ತರು ಏಕೆ ನಿಮ್ಮ ಜೊತೆ ಇರಬೇಕು. ನಿಮ್ಮ ಜೊತೆ ಇರಲು ಯಾರಿಗೂ ಇಷ್ಟವಿಲ್ಲ. ಜನತಾದಳದ ಕಾರ್ಯಕರ್ತರಿಗೆ ಅಭಯ ನೀಡುತ್ತೇನೆ. ಡಿ.ಕೆ.ಶಿವಕುಮಾರ್ ನಿಮ್ಮ ರಕ್ಷಣೆಗೆ ಎಂದಿಗೂ ಇರುತ್ತಾನೆ.

ಕುಮಾರಸ್ವಾಮಿ ಯಾರನ್ನು ಬೇಕಾದರೂ ಭೇಟಿ ಮಾಡಿಕೊಳ್ಳಲಿ, ಅವರು ಬಿಜೆಪಿ ಜೊತೆ ಹೊಂದಾಣಿಕೆಯನ್ನಾದರೂ ಮಾಡಿಕೊಳ್ಳಲಿ, ಏನು ಬೇಕಾದರೂ ಮಾಡಿಕೊಳ್ಳಲಿ. ಮಂಡ್ಯದ ಜನತೆ ಸ್ವಾಭಿಮಾನಕ್ಕೆ ಮತ ಹಾಕಬೇಕು ಎಂದು ಮನವಿ ಮಾಡುತ್ತೇನೆ.

ಸಿ.ಎಸ್.ಪುಟ್ಟರಾಜು ನನಗೆ ಟಿಕೆಟ್ ಸಿಗುತ್ತದೆ ಎಂದು ಕಾಯುತ್ತಾ ಕುಳಿತಿದ್ದ, ಈಗ ಪುಟ್ಟರಾಜು ಕತೆ ಗೋವಿಂದ. ದೇವೆಗೌಡರು ಪ್ರಧಾನಿಗಳಾಗಿದ್ದ ವೇಳೆ 17 ಜನ ಸಂಸದರು ಇದ್ದರು. ಕುಮಾರಸ್ವಾಮಿ ಅವರು ಒಬ್ಬರು ಬಿಟ್ಟು ಮಿಕ್ಕವರೆಲ್ಲಾ ಕಾಂಗ್ರೆಸ್- ಬಿಜೆಪಿ ಸೇರಿದರು. ಇದರ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ. ಕುಮಾರಸ್ವಾಮಿ ಅವರು ಕೇಸರಿ ಶಾಲು ಹಾಕಿಕೊಂಡು ಜಾತ್ಯಾತೀತ ತತ್ವವನ್ನು ನೀರಿನಲ್ಲಿ ತೇಲಿ ಬಿಟ್ಟರು. ಆ ಮೂಲಕ ಸೈದ್ಧಾಂತಿಕವಾಗಿ ಬದುಕಿಯೂ ಸತ್ತಂತೆ.

ಕಳೆದ ಬಾರಿ ನಿಖಿಲ್ ಅವರ ಪರವಾಗಿ ನಾನು ಮತ ಕೇಳಲು ಬಂದಿದ್ದೇ. ಆದರೆ ಇಂದು ಸ್ವಾಭಿಮಾನಕ್ಕೆ, ಸ್ಥಳೀಯ ಮನೆ ಮಗನಿಗೆ ಮತ ಕೇಳಲು ಬಂದಿದ್ದೇನೆ. ಸುಮಾರು ಮೂರು ಸಾವಿರ ಜನಕ್ಕೆ ಉದ್ಯೋಗ ನೀಡಿದ ಸರಳ, ಸಜ್ಜನ ಕುಟುಂಬದ ಸ್ಟಾರ್ ಚಂದ್ರು ಅವರು ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಅವರು ಮಂಡ್ಯ ಜನರ ಸೇವೆ ಮಾಡಲು ನಿಮ್ಮ ಮುಂದೆ ಬಂದಿದ್ದಾರೆ.

ವೆಂಕಟರಮಣೇಗೌಡರು ಇಲ್ಲಿ ಅಭ್ಯರ್ಥಿಯಲ್ಲ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಚಲುವರಾಯಸ್ವಾಮಿ, ಮಲ್ಲಿಕಾರ್ಜುನ ಖರ್ಗೆ ಅವರು ಮಂಡ್ಯದ ಅಭ್ಯರ್ಥಿಗಳು. ಹಾಸನ, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕಾಂಗ್ರೆಸ್ ರಾಜ್ಯದಲ್ಲಿ 20 ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಲಿದೆ. ಎಂಟು ಮಂದಿ ಒಕ್ಕಲಿಗರಿಗೆ ಲೋಕಸಭಾ ಟಿಕೆಟ್ ನೀಡಿದ್ದೇವೆ. ನನ್ನನ್ನು ಗಮನದಲ್ಲಿ ಇಟ್ಟುಕೊಂಡು ಮಂಡ್ಯ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದೀರಿ. ನಿಮ್ಮ ನಿರೀಕ್ಷೆ ಹುಸಿಯಾಗುವುದಿಲ್ಲ.

ಕೊರೋನಾ ಸಮಯದಲ್ಲಿ ಜನರ ಸೇವೆ ಮಾಡಿದವರು ಕಾಂಗ್ರೆಸ್ ಕಾರ್ಯಕರ್ತರು. ಹಳ್ಳಿ, ಹಳ್ಳಿಗೂ ಬಂದು ಜನರ ಸೇವೆ ಮಾಡಿದ್ದೇವೆ. ಅನ್ನ, ನೀರು ಕೊಟ್ಟಿದ್ದೇವೆ. ಡಿ.ಕೆ.ಸುರೇಶ್ ರೈತರ ತರಕಾರಿ ತೆಗೆದುಕೊಂಡು ಜನರಿಗೆ ಹಂಚಿದರು. ಕುಮಾರಸ್ವಾಮಿ ಅವರು ಮನೆ ಬಿಟ್ಟು ಹೊರಗೆ ಬರಲಿಲ್ಲ. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶವಸಂಸ್ಕಾರ ಮಾಡಿ ಮನೆ ಮಕ್ಕಳಂತೆ ಜನರ ಜೊತೆ ನಿಂತಿದ್ದಾರೆ.

ಕಮಲ ಕೆರೆಯಲ್ಲಿ ಇದ್ದರೇ ಚೆಂದ, ತೆನೆ ಹೊಲದಲ್ಲಿ ಇದ್ದರೆ ಚೆಂದ, ಈ ದಾನ, ಧರ್ಮ ಮಾಡುವ ಕೈ ಅಧಿಕಾರದಲ್ಲಿ ಇದ್ದರೆ ಚೆಂದ. ಇದೇ ಮಾತಿನಂತೆ ಉಚಿತ ವಿದ್ಯುತ್, ಗೃಹಲಕ್ಷ್ಮಿ, ಯುವನಿಧಿ, ಅನ್ನಭಾಗ್ಯ, ಶಕ್ತಿ ಯೋಜನೆ ಹೀಗೆ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+