Toor Dal Crop Price: ರೈತರ ಸಂಕಷ್ಟ ದೂರ ಮಾಡಿದ 'ತೊಗರಿ' ಬೆಳೆ: ಕ್ವಿಂಟಾಲ್ ದರವೆಷ್ಟು?, ಅಂಕಿ-ಸಂಖ್ಯೆ, ವಿವರ
ರಾಯಚೂರು, ಜನವರಿ 03: ಅತ್ಯಧಿಕ 'ತೊಗರಿ' ಬೆಳೆ ಬೆಳೆಯುವ ಜಿಲ್ಲೆಗಳಲ್ಲಿ ಒಂದಾಗಿರುವ ಕಲ್ಯಾಣ ಕರ್ನಾಟಕದ ರಾಯಚೂರ ಜಿಲ್ಲೆಯ ವಿವಿಧ ಗ್ರಾಮೀಣ ಭಾಗದಲ್ಲಿ ಬರಗಾಲದಲ್ಲೂ ತೊಗರಿ ಬೆಳೆ ರೈತರಿಗೆ ಆರ್ಥಿಕ ಶಕ್ತಿ ತುಂಬಿದೆ. ಮಳೆ ಕೊರತೆ, ಬೆಳೆ ನಷ್ಟದ ಸನ್ನಿವೇಶದಲ್ಲೂ ಸಹಿತ ಈ ವರ್ಷದ ತೊಗರಿ ದರ ರೈತರ ಸಂಕಷ್ಟಗಳನ್ನು ದೂರು ಮಾಡಿದೆ.
ರಾಜ್ಯದಲ್ಲಿ ಹಿಂಗಾರು ಮಳೆ ಮತ್ತು ಮುಂಗಾರು ಮಳೆ ಎರಡು ಕೈ ಕೊಟ್ಟಿವೆ. ನಿರೀಕ್ಷೆಯಷ್ಟು ಮಳೆ ಬಾರದ ರೈತರ ಆಸೆ ನಿರಾಸೆ ಮಾಡಿವೆ. ಹೀಗಿದ್ದರೂ ಸಹಿತ ರಾಯಚೂರು ಜಿಲ್ಲೆ ವಿವಿಧೆಡೆ ಮಳೆಯನ್ನೆ ನೆಚ್ಚಿಕೊಂಡು ತೊಗರಿ ಬೆಳೆದಿದ್ದರು. ಆದರೆ ಅಂದುಕೊಂಡಂತೆ ಮಳೆ ಬಾರದೇ ಬೆಳೆಯಲ್ಲಿ ಅಷ್ಟಾಗಿ ಫಸಲು ಕಂಡಿಲ್ಲ.

ಕಾರಣ ಮಳೆ ಕೊರತೆ, ಕೀಟ ಬಾಧೆ ಸಮಸ್ಯೆಯಿಂದ ನಿರೀಕ್ಷೆಯಷ್ಟು ತೊಗರಿ ಬೆಳೆ ಬರದಿದ್ದರೂ ಸಹಿತ ಮಾರುಕಟ್ಟೆಯಲ್ಲಿನ ತೊಗರಿ ದರ ರೈತದಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ವೆಚ್ಚ ನಿರ್ವಹಣೆಯನ್ನು ಸರಿದೂಗಿಸಿ ಆರ್ಥಿಕ ಚೇತರಿಗೆ ಕಾಣುವಷ್ಟು ತೊಗರಿಗೆ ಬೆಲೆ ಸಿಕ್ಕಿದೆ ಎಂದು ರೈತರು ಸಂತಸ ಹಂಚಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ತೊಗರಿಯ ಬೆಲೆ ಮಾಹಿತಿ
ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ತೊಗರಿಗೆ 10,000ಕ್ಕೂ ಅಧಿಕ ಬೆಲೆ ಇದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಸುಮಾರು 7000 ರೂಪಾಯಿ ಇತ್ತು. ಇದೀಗ ಆ ದರ ಹೆಚ್ಚಾಗಿದೆ. ಕಳೆದ ವರ್ಷದಷ್ಟು ಈ ಬಾರಿ ತೊಗರಿ ಉತ್ಪಾದನೆ ಆಗಿಲ್ಲ. ಮಳೆ ಕೊರತೆಯಿಂದ ತೊಗರಿ ಉತ್ಪಾದನೆ ಕುಂಠಿತಗೊಂಡಿದೆ. ಪೂರೈಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದರಿಂದ ಬೆಲೆ ಎರಿಕೆ ಆಗಿದೆ ಎಂದು ತಿಳಿದು ಬಂದಿದೆ.
ಉತ್ತಮ ಬೆಲೆಯಿಂದ ರೈತರಿಗೆ ಕಾಡದ ನಷ್ಟ
ರಾಯಚೂರು ಜಿಲ್ಲೆಯ ಶಿರವಾರ ತಾಲೂಕಿನ ಕವಿತಾಳ, ವಟಗಲ್, ಯಕ್ಲಾಸ್ಪುರ್, ಅಮೀನಗಡ ಸೇರಿದಂತೆ ಹೂಬಳಿ ವ್ಯಾಪ್ತಿ ಹಾಗೂ ಇನ್ನಿತರ ಗ್ರಾಮೀಣ ಭಾಗದಲ್ಲಿ ರೈತರು ತೊಗರಿ ಬೆಳೆದಿದ್ದಾರೆ. ಆದರೆ ಮಳೆ ಕೊರತೆಯಿಂದ ಕಡಿಮೆ ಉತ್ಪಾದನೆ ಆದರೂ ಸಹಿತ ಇದೀಗ ರೈತರಲ್ಲಿ ಆತಂಕ ಕಾಡುತ್ತಿಲ್ಲ. ಉತ್ತಮ ಬೆಲೆ ಇರುವ ಕಾರಣ ರೈತರಿಗೆ ನಷ್ಟ ಉಂಟಾಗಿಲ್ಲ ಎನ್ನಲಾಗಿದೆ. ಸದ್ಯ ರೈತರು ತೊಗರಿಯನ್ನು ಒಕ್ಕಲು ಮಾಡಿ ದಾಸ್ತಾನು ಮಾಡಿಟ್ಟುಕೊಳ್ಳದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಪ್ರತಿ ವರ್ಷದಂತೆ ಈ ವರ್ಷ ಮಳೆ ನಂಬಿ ರೈತರು ತೊಗರಿ ಬಿತ್ತನೆ ಮಾಡಿದ್ದರು. ಆದರೆ ಮಳೆ ಕೊರತೆಯಿಂದಾಗಿ ಕಳೆದ ವರ್ಷಕ್ಕಿಂತ ಅರ್ಧದಷ್ಟು ತೊಗರಿ ಉತ್ಪಾದನೆ ಅಗಿದೆ. ಅಂದರೆ ಶೇಕಡಾ 50ರಷ್ಟು ಇಳುವರಿ ಕಡಿಮೆ ಆಗಿದೆ. ಕೀಟ ಬಾಧೆ, ಅಗತ್ಯ ವಸ್ತುಗಳ ದರ ಏರಿಕೆ ಕಾರಣದಿಂದ ಬೆಳೆ ನಿರ್ವಹಣೆ ಎಂದಿಗಿಂತ ತುಸು ಹೆಚ್ಚು ಬಂದಿತ್ತು. ಬೆಲೆ ಸಿಗದಿದ್ದರೆ ಹೇಗೆ ಎಂಬ ಆತಂಕ ರೈತರಲ್ಲಿ ಮನೆ ಮಾಡಿತ್ತು.
ಹೊಸ ವರುಷ ತೊಗರಿ ಬೆಳೆದ ರೈತರಲ್ಲಿ ಹರುಷ
ಇದೀಗ ಮಾರುಕಟ್ಟೆಗಳಲ್ಲಿ ಸಿಗುತ್ತಿರುವ ಬೆಲೆಯು ರೈತರ ಎಲ್ಲ ಚಿಂತೆಗಳನ್ನು ದೂರ ಮಾಡಿದೆ. ಹೊಸ ವರ್ಷದ ಸಂದರ್ಭದಲ್ಲಿ ರೈತರು ಹರ್ಷದಿಂದ ಕೃಷಿ, ತೊಗರಿ ಕಣ ಮಾಡುವಲ್ಲಿ ನಿರತರಾಗಿದ್ದಾರೆ.
ನಮ್ಮ ಬೆಳೆಗೆ ಉತ್ತಮ ಬೆಲೆ ಇದ್ದರೂ ಸಹಿತ ಈ ಸಾಗಾಣೆ ದರ, ದಲ್ಲಾಳಿಗಳ ಕಮಿಷನ್, ಸೂಟ್ ಸೇರಿದಂತೆ ಖರ್ಚು ಹೆಚ್ಚಾಗುತ್ತದೆ. ಅಲ್ಲದೇ ಸರ್ಕಾರದ ಬೆಂಬಲ ಬೆಲೆಯು ಕಡಿಮೆ ಇದೆ. ಇದರಿಂದಲೇ ರೈತರು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿಲ್ಲ. ಆದ್ದರಿಂದ ಸರ್ಕಾರಗಳ ಮುಕ್ತ ಮಾರುಕಟ್ಟೆಗಿಂತಲೂ ತುಸು ಬೆಲೆ ಹೆಚ್ಚಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಕವಿತಾಳ ಗ್ರಾಮದ ರೈತರು ಮನವಿ ಮಾಡಿದರು.
ಸದ್ಯಕ್ಕೇನೋ ಕಡಿಮೆ ಇಳುವರಿ ಇದ್ದರೂ ಉತ್ತಮ ಬೆಲೆಗೆ ಎಲ್ಲವು ಸರಿದೂಗಬಹುದು. ಆದರೆ ಭವಿಷ್ಯದಲ್ಲಿ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕಿದೆ. ಇದರಿಂದ ತೊಗರಿ ಸೇರಿದಂತೆ ಇನ್ನಿತರ ಬೆಳೆ ಬೆಳೆಯುವ ರೈತರಿಗೂ ಸಹವಾಯವಾಗಲಿದೆ ಎಂದರು.












Click it and Unblock the Notifications