ಟೊಮೆಟೊ, ಈರುಳ್ಳಿ ಬೆಲೆ ಕುಸಿತ: ಬೆಂಬಲ ಬೆಲೆ ಘೋಷಣೆಗೆ ರೈತರ ಒತ್ತಾಯ
ಬೆಂಗಳೂರು, ಡಿ. 01: ರಾಜ್ಯದಲ್ಲಿ ಟೊಮೆಟೊ ಮತ್ತು ಈರುಳ್ಳಿ ಬೆಲೆ ಕುಸಿತ ಕಂಡಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಈ ಬಾರಿಯ ಬಂಪರ್ ಫಸಲು ರಾಜ್ಯದಲ್ಲಿ ಬೆಲೆ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿರುವ ರೈತರ ಹಿತ ಕಾಪಾಡಲು ರಾಜ್ಯ ಸರ್ಕಾರ ಈರುಳ್ಳಿ, ಟೊಮೆಟೊ ಬೆಳೆಗಾರರಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೋಲಾರ ಜಿಲ್ಲಾ ಹಣ್ಣು ತರಕಾರಿ ಬೆಳೆಗಾರರ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದ ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನ ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ಈರುಳ್ಳಿ ಬೆಲೆ ಕೆಜಿಗೆ 2 ರೂಪಾಯಿಯಿಂದ 10 ರೂಪಾಯಿಗೆ ಕುಸಿದಿತ್ತು. ಆದರೆ, ಈಗ ಉತ್ಪನ್ನದ ಗುಣಮಟ್ಟಕ್ಕೆ ಅನುಗುಣವಾಗಿ ಪ್ರತಿ ಕೆಜಿಗೆ 12 ರೂಪಾಯಿಯಿಂದ 18 ರೂಪಾಯಿವರೆಗೆ ಏರಿಕೆಯಾಗಿದೆ.

ಸಾರಿಗೆ, ಹಮಾಲಿ, ಲೋಡಿಂಗ್‌ಗೆ ಎಲ್ಲಾ ಹಣ ಹೊರಟು ಹೋಗುತ್ತದೆ!
12 ರೂಪಾಯಿಯಿಂದ 18 ರೂಪಾಯಿವರೆಗೆ ಏರಿಕೆಯಾಗಿರುವ ಬಗ್ಗೆ ಮಾತನಾಡಿರುವ ಈರುಳ್ಳಿ ಬೆಳೆಗಾರರು, "ನಮ್ಮೆಲ್ಲರ ಕಷ್ಟಕ್ಕೆ ಒಂದು ಕೆಜಿ 12 ರೂಪಾಯಿ ಕೂಡ ಅತ್ಯಲ್ಪ. ಸಾರಿಗೆ, ಲೋಡಿಂಗ್ ಮತ್ತು ಅನ್‌ಲೋಡಿಂಗ್, ಹಮಾಲಿ ಕೂಲಿ ಮತ್ತು ಬೆಳೆ ಬೆಳೆಯಲು ಮಾಡಿದ ಸಾಲಕ್ಕೆ ಇದರ ದುಪ್ಪಟ್ಟು ಹಣ ಹೊರಟು ಹೋಗುತ್ತದೆ" ಎಂದು ಬೆಂಗಳೂರಿನ ಈರುಳ್ಳಿ ಬೆಳೆಗಾರರೊಬ್ಬರು ಹೇಳಿದ್ದಾರೆ.
ಉತ್ತಮ ಬೆಲೆ ಸಿಗಬಹುದೆಂಬ ನಿರೀಕ್ಷೆಯಿಂದ ದೂರದ ಪ್ರದೇಶಗಳಿಂದ ತಮ್ಮ ಉತ್ಪನ್ನಗಳನ್ನು ಯಶವಂತಪುರ ಎಪಿಎಂಸಿಗೆ ತರುತ್ತಿದ್ದ ರೈತರಿಗೆ ಭಾರೀ ನಿರಾಸೆಯಾಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ಸಂಚಲ ಮೂಡಿಸಿದ್ದ ರಶೀದಿ
ಉತ್ತರ ಕರ್ನಾಟಕದ ಗದಗ ಜಿಲ್ಲೆಯ ತಿಮ್ಮಾಪುರದ ರೈತ ಪವಾಡೆಪ್ಪ ಹಳ್ಳಿಕೇರಿ ಉತ್ತಮ ಈರುಳ್ಳಿ ಫಸಲು ಪಡೆದಿದ್ದು, ಗದಗ ಎಪಿಎಂಸಿ ಯಾರ್ಡ್‌ನಲ್ಲಿ ಮಾರಾಟ ಮಾಡುವ ಬದಲು ಬೆಂಗಳೂರಿನಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ದರು.
ನವೆಂಬರ್ 22 ರಂದು 205 ಕೆಜಿ ಈರುಳ್ಳಿಯೊಂದಿಗೆ ಬೆಂಗಳೂರು ಮಾರುಕಟ್ಟೆಗೆ ಬಂದಾಗ, ನಗರದಲ್ಲಿ ಬೆಲೆ ಕೆಜಿಗೆ 2 ರೂಪಾಯಿಗೆ ಕುಸಿದಿದೆ ಎಂದು ತಿಳಿದುಬಂದಿದೆ. ಹೀಗಾಗಿ ಅವರಿಗೆ 410 ರೂಪಾಯಿ ಸಿಕ್ಕಿದ್ದು, ಇಳಿಸುವ ಶುಲ್ಕವಾಗಿ 401.64 ರೂಪಾಯಿ ಪಾವತಿಸಬೇಕಿತ್ತು. ಕೊನೆಗೆ ಅವರ ಕೈಯಲ್ಲಿ 8.36 ರೂಪಾಯಿ ಮಾತ್ರ ಸಿಕ್ಕಿದೆ. ಈ ರಶೀದಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈರುಳ್ಳಿ ಜೊತೆಗೆ ಕಣ್ಣೀರು ಹಾಕಿಸುತ್ತಿದೆ ಟೊಮೆಟೊ
ಈರುಳ್ಳಿ ಬೆಳೆದು ಉತ್ತಮ ಲಾಭಕ್ಕಾಗಿ ಬೆಂಗಳೂರಿಗೆ ಕೊಂಡೊಯ್ದದ್ದೇ ತಪ್ಪು ಎಂದು ಈರುಳ್ಳಿ ಬೆಳೆಗಾರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈಗಾಗಲೇ ಸುರಿದ ಮಳೆಯಿಂದ ಉಂಟಾದ ಪ್ರವಾಹದಿಂದ ಗದಗ ಜಿಲ್ಲೆಯಲ್ಲಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಆಕ್ರೋಶಗೊಂಡ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.
ಇನ್ನು, ಗದಗ ಮತ್ತು ಉತ್ತರ ಕರ್ನಾಟಕದ ಭಾಗದ ಈರುಳ್ಳಿ ಬೆಳೆಗೆ ಉತ್ತಮ ಬೆಲೆಯೇ ಇಲ್ಲದಂತಾಗಿದೆ. ಈ ಹಿನ್ನೆಲೆ ಇತರ ರೈತರು ಯಶವಂತಪುರ ಮಾರುಕಟ್ಟೆಗೆ ಬರುವುದನ್ನು ತಪ್ಪಿಸಲು ಈರುಳ್ಳಿ ಮಾರಾಟ ಮಾಡಿದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದೇನೆ ಎಂದು ರೈತ ಪವಾಡೆಪ್ಪ ಹಳ್ಳಿಕೇರಿ ಹೇಳಿದ್ದಾರೆ.

ಕೆಜಿಗೆ 5ರಿಂದ 6 ರೂಪಾಯಿಗೆ ಇಳಿದ ಟೊಮೆಟೊ ಬೆಲೆ
ಇನ್ನು, ಟೊಮೆಟೊ ಬೆಳೆಗಾರರ ಸಂಕಷ್ಟಗಳು ಉತ್ತರ ಕರ್ನಾಟಕದ ಈರುಳ್ಳಿ ಬೆಳೆಗಾರರಿಗಿಂತ ಭಿನ್ನವಾಗಿಲ್ಲ. ಇಲ್ಲಿನ ಕೆ.ಆರ್.ಮಾರುಕಟ್ಟೆಯ ಸಗಟು ತರಕಾರಿ ವ್ಯಾಪಾರಿ ಮಂಜುನಾಥ್ ಮಾತನಾಡಿ, ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 5ರಿಂದ 6 ರೂಪಾಯಿ ವರೆಗೆ ಟೊಮೆಟೊ ಮಾರಾಟವಾಗುತ್ತಿದ್ದು, ಚಿಲ್ಲರೆ ಮಾರಾಟದಲ್ಲಿ 8ರಿಂದ 12 ರೂಪಾಯಿಗೆ ಸಿಗುತ್ತಿದೆ ಎಂದಿದ್ದಾರೆ.
ಉತ್ತಮ ಗುಣಮಟ್ಟ 15 ಕೆ.ಜಿ.ತೂಗುವ ಬಾಕ್ಸ್ ಟೊಮೆಟೊ ಹರಾಜಿನಲ್ಲಿ 200 ರೂಪಾಯಿ ಸಿಕ್ಕರೇ, ಗುಣಮಟ್ಟವಿಲ್ಲದ ಬಾಕ್ಸ್ ಟೊಮೆಟೊ ಕೇವಲ 50 ರೂಪಾಯಿಗೆ ಮಾರಾಟವಾಗುತ್ತಿದೆ.
ಈರುಳ್ಳಿ, ಆಲೂಗಡ್ಡೆ, ಟೊಮೆಟೊಗೆ ಸರಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸಬೇಕು ಎಂದು ಕೋಲಾರ ಜಿಲ್ಲಾ ಹಣ್ಣು ತರಕಾರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ ಆಗ್ರಹಿಸಿದ್ದಾರೆ.
'ನಾವು ತರಕಾರಿ ಬೆಳೆಗಾರರು ಕಣ್ಣೀರಿಡುವಂತಾಗಿದೆ. ಕಷ್ಟಪಟ್ಟು ದುಡಿಮೆ, ಕೂಲಿ, ಬಂಡವಾಳ ಹೂಡಿ ತಿಂಗಳುಗಟ್ಟಲೆ ಕಾಯುತ್ತಿದ್ದ ನಮಗೆ ಇತ್ತೀಚಿನ ದಿನಗಳಲ್ಲಿ ಪ್ರತಿ ಕಿಲೋ ಟೊಮೆಟೊಗೆ 1.5ರೂಪಾಯಿಯಷ್ಟು ಆದಾಯ ಬರುತ್ತಿಲ್ಲ. ಎರಡು ಕ್ವಿಂಟಾಲ್ ಟೊಮೆಟೊ ಬೆಳೆದ ನಮಗೆ ಸಿಗುತ್ತಿರುವುದು 300 ರೂಪಾಯಿ ಮಾತ್ರ'' ಎಂದು ನೀಲಟೂರು ಚಿನ್ನಪ್ಪ ರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.
(ಮಾಹಿತಿ ಕೃಪೆ- ಪಿಟಿಐ)












Click it and Unblock the Notifications