Tomato Price: ಟೊಮೆಟೊ ಬೆಲೆ ಏರೂ ಇಲ್ಲ, ಇಳಿದೂ ಇಲ್ಲ ಯಾಕೆ?
ಟೊಮೆಟೊ ಬೆಲೆ ಟ್ರೆಂಡ್ ಆಗಿದ್ದು, ಬೆಲೆ ಏರಿಕೆ ಮಾತ್ರ ಒಂದು ಮಟ್ಟಕ್ಕೆ ನಿಯಂತ್ರಣಕ್ಕೆ ಸಿಕ್ಕಿದೆ. ಕಳೆದ ವಾರ ಬೆಲೆ ಕುಸಿತದ ಆತಂಕ ಇತ್ತಾದರೂ ಇದೀಗ ಒಂದೇ ಹಂತದಲ್ಲಿ ಬೆಲೆ ಸಾಗುತ್ತಿದೆ. ಹಾಗಾದರೆ ಕೆಂಪು ಚಿನ್ನಕ್ಕೆ ಈಗಿರುವ ಬೆಲೆ ಎಷ್ಟು? ರೈತರಿಗೆ ಇದರಿಂದ ಲಾಭ ಆಗುತ್ತಿದೆಯಾ? ಇಲ್ಲ ನಷ್ಟವಾಗುತ್ತಿದೆಯಾ? ಬನ್ನಿ ತಿಳಿಯೋಣ.
ದೇಶದಲ್ಲಿ ಟೊಮೆಟೊ ಕೆಲವು ತಿಂಗಳಿದ ಕೋಲಾಹಲ ಎಬ್ಬಿಸಿದೆ. ರೇಟ್ ಜಾಸ್ತಿ ಆಗಿದ್ದೇ ಆಗಿದ್ದು ಸರ್ಕಾರಕ್ಕೂ ಟೆನ್ಷನ್ ಕೊಟ್ಟಿತ್ತು. ಆದರೆ ಬೆಲೆ ಒಂದಷ್ಟು ನಿಯಂತ್ರಣಕ್ಕೆ ಸಿಕ್ಕಿದೆ. ಹೀಗಿದ್ದರೂ ಟೊಮೆಟೊ ಅತಿ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಹಿಂದಿನ ದರಕ್ಕೆ ಹೋಲಿಸಿದರೆ ಪರವಾಗಿಲ್ಲ ಅಷ್ಟೇ. ಇದು ಲಾಭದ ಆಸೆಯಲ್ಲಿದ್ದ ರೈತರಿಗೆ ಬೇಸರ ಮೂಡಿಸಿದ್ದರೆ, ಅತ್ತ ದುಬಾರಿ ಟೊಮೆಟೊ ಕೈಗೆಟುಕವ ದರಕ್ಕೆ ಬಂತಲ್ಲ ಅಂತಾ ಜನ ಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಕೋಲಾರದ ಟೊಮೆಟೊ ಮಾರುಕಟ್ಟೆಯಲ್ಲಿ ಬೆಲೆ ಏರುತ್ತಲೂ ಇಲ್ಲ, ಇತ್ತ ಇಳಿಯುತ್ತಲೂ ಇಲ್ಲ.

ಟೊಮೆಟೊ ಬೆಲೆಯಲ್ಲಿ ಬದಲಾವಣೆ ಇಲ್ಲ!
ಇನ್ನು ಟೊಮೆಟೊ ಬೆಲೆಯನ್ನ 14 ಕೆಜಿ ತೂಕದ ಬಾಕ್ಸ್ ಮೇಲೆ ಲೆಕ್ಕಾಚಾರ ಹಾಕಲಾಗುತ್ತೆ. ಈ ಪೈಕಿ 14 ಕೆಜಿ ತೂಕದ ಬಾಕ್ಸ್‌ಗೆ 2500 ರೂಪಾಯಿ ಬೆಲೆ ಬಂದಿತ್ತು. ಕಳೆದ ಸೋಮವಾರ ಕುಸಿತದ ಹಾದಿ ಹಿಡಿದ ಟೊಮೆಟೊ ಬೆಳೆ ಮೊದಲಿಗೆ ₹1700ಕ್ಕೆ ಕುಸಿದಿತ್ತು. ಬಳಿಕ ಬೆಲೆ 1550ಕ್ಕೆ ಕುಸಿತ ಕಂಡಿತ್ತು. 1200 ರೂಪಾಯಿಗೆ ಬಿದ್ದ ಬೆಲೆ 800 ರೂಪಾಯಿಗೆ ಬಂದು ನಿಂತಿತ್ತು. ಹೀಗೆ ಇನ್ನೇನು ಮತ್ತೆ ಟೊಮೆಟೊ ರೇಟ್ ಪಾತಾಳ ತಲುಪಿದೆ ಅನ್ನುವಷ್ಟರಲ್ಲಿ ಕಳೆದ ಮೂರು ದಿನದಿಂದ ಬೆಲೆ ಸ್ಥಿರವಾಗಿದೆ. ಸುಮಾರು 1000 ರೂಪಾಯಿ ಆಸುಪಾಸಿನಲ್ಲೇ 14 ಕೆಜಿಯ ಟೊಮೆಟೊ ಬಾಕ್ಸ್ ಸೇಲ್ ಆಗುತ್ತಿದೆ.
ಕರ್ನಾಟಕದ ಟೊಮೆಟೊಗೆ ಭಾರಿ ಬೇಡಿಕೆ
ಟೊಮೆಟೊ ಬೆಲೆ ಮತ್ತೆ ರೈತರಿಗೆ ಬಲ ನೀಡಿದ್ದು, ದೇಶದ ವಿವಿಧೆಡೆ ಕರ್ನಾಟಕ ಮತ್ತು ದಕ್ಷಿಣ ಭಾರತದ ಟೊಮೆಟೊಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಮತ್ತೊಮ್ಮೆ ಟೊಮೆಟೊಗೆ ಚಿನ್ನದ ಬೆಲೆ ಬರುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಲಕ್ಷಾಂತರ ರೂಪಾಯಿ ಸುರಿದು ಟೊಮೆಟೊ ಬೆಳೆದಿದ್ದ ರೈತರಿಗೆ ಮತ್ತೆ ಟೊಮೆಟೊ ಕೈಹಿಡಿವ ನಿರೀಕ್ಷೆ ಇದೆ. ಆದರೆ ಬೆಲೆ ಇದೇ ರೀತಿ ಮುಂದುವರಿದರೆ ಸಾಕು ಎನ್ನುತ್ತಿದ್ದಾರೆ ರೈತರು. ಕಳೆದ ಮೂರು ದಿನದಿಂದ ಬಹುತೇಕ ಸ್ಥಿರವಾಗಿದ್ದು, ಇದೇ ರೀತಿ ಬೆಲೆ ಮುಂದುವರಿದರೆ ರೈತರಿಗೂ ಲಾಭ ಹಾಗೂ ಗ್ರಾಹಕರಿಗೂ ತೃಪ್ತಿ ಸಿಗಬಹುದು.
ಒಟ್ನಲ್ಲಿ ಟೊಮೆಟೊ ಬೆಲೆ ಏರಿಕೆ ಜನರ ನಿದ್ದೆ ಕೆಡಿಸಿತ್ತು, ಆದರೆ ಈಗ ಹಿಡಿತಕ್ಕೆ ಸಿಕ್ಕಿದೆ. ಅತ್ತ ಬೆಲೆ ಕುಸಿಯದೆ, ಇತ್ತ ಭಾರಿ ಏರಿಕೆಯೂ ಆಗದೆ ನೆಮ್ಮದಿ ನೀಡಿದೆ. ಹೀಗಾಗಿ ಜನರು ಕೂಡ ನಿಟ್ಟುಸಿರು ಬಿಟ್ಟಿದ್ದು ರೈತರು ತಾವು ಹೂಡಿರುವ ಬಂಡವಾಳದ ಮೇಲೆ ಒಂದಷ್ಟು ಲಾಭ ಪಡೆಯುತ್ತಿದ್ದಾರೆ. ಆದರೆ ಕಳೆದ ವಾರ ಟೊಮೆಟೊ ಭಾರಿ ಕುಸಿತ ಕಂಡಿತ್ತು. ಈಗ ಬೆಲೆ ಕುಸಿತದ ಆತಂಕ ದೂರವಾಗಿದ್ದು, ಮತ್ತಷ್ಟು ದಿನ ಇದೇ ರೀತಿ ಟೊಮೆಟೊ ರೇಟ್ ಸ್ಥಿರವಾಗಿರುವ ನಿರೀಕ್ಷೆ ಇದೆ.

ಟೊಮೆಟೊ ಬಳಿಕ ಈರುಳ್ಳಿ ಶಾಕ್?
ಭಾರತೀಯರ ಬಹುತೇಕ ಅಡುಗೆಗಳಲ್ಲಿ ಈರುಳ್ಳಿ ಇಲ್ಲದೆ ಅಡುಗೆ ಆಗೋದೆ ಇಲ್ಲ. ಅದ್ರಲ್ಲಿ ನಿತ್ಯದ ಊಟಕ್ಕೆ ಈರುಳ್ಳಿ ಅತ್ಯಗತ್ಯ. ಪರಿಸ್ಥಿತಿ ಹೀಗಿದ್ದಾಗ ದಿಢೀರ್ ಈರುಳ್ಳಿ ಬೆಲೆ ಆಕಾಶ ಮುಟ್ಟಿದೆ. ಮಹಾರಾಷ್ಟ್ರ ರಾಜಧಾನಿಗೆ ಈರುಳ್ಳಿ ಶಾಕ್ ಕೊಟ್ಟಿದ್ದು, ಮುಂಬೈನ ಹಲವೆಡೆ ಈರುಳ್ಳಿ ಬೆಲೆ ಈಗಾಗಲೇ ಶೇಕಡಾ 40ರಷ್ಟು ಏರಿಕೆ ಕಂಡಿದೆ. 30 ರೂಪಾಯಿ ಆಸುಪಾಸಿಗೆ ಸಿಗುತ್ತಿದ್ದ ಉತ್ತಮ ಗುಣಮಟ್ಟದ ಈರುಳ್ಳಿ ಈಗ 60 ರೂಪಾಯಿಗೆ ಏರಿದೆ. ಹೀಗೆ ಮುಂಬೈ ನಿವಾಸಿಗಳು ಈರುಳ್ಳಿ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಹೀಗೆ ಟೊಮೆಟೊ ಬೆಲೆ ಏರಿಕೆ ಬಳಿಕ ಈರುಳ್ಳಿ ಕೂಡ ಶಾಕ್ ಕೊಡುತ್ತಿದೆ.












Click it and Unblock the Notifications