ಕರ್ನಾಟಕದಲ್ಲಿ ಎರಡು ಟೋಲ್‌ಗಳಲ್ಲಿ ನಿಯಮಬಾಹಿರವಾಗಿ 75.95 ಕೋಟಿ ರೂಪಾಯಿ ಸಂಗ್ರಹ: ಸಿಎಜಿ ವರದಿ
ಕರ್ನಾಟಕದಲ್ಲಿ ಹಾದು ಹೋಗಿರುವ ಬೆಂಗಳೂರು-ಮುಂಬೈ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇರುವ ಎರಡು ಟೋಲ್ ಪ್ಲಾಜಾಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ 75.95 ಕೋಟಿ ಸಂಗ್ರಹ ಮಾಡಲಾಗಿದೆ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ತಿಳಿಸಿದೆ.
ನಿಯಮ ಮೀರಿ ಟೋಲ್ ಸಂಗ್ರಹ ಮಾಡುತ್ತಿರುವ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿರುವ ಉತ್ತರಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.

'ದಕ್ಷಿಣ ಭಾರತದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಘಟಕಗಳ ನಿರ್ವಹಣೆ' ಬಗ್ಗೆ ಸಿಎಜಿ ಸಿದ್ದಪಡಿಸಿರುವ ವರದಿಯಲ್ಲಿ ಇದನ್ನು ಉಲ್ಲೇಖಿಸಲಾಗಿದೆ. ದಕ್ಷಿಣ ಭಾರತದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಒಟ್ಟು 151 ಟೋಲ್ ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದು, ಅವರುಗಳಲ್ಲಿ 41 ಘಟಕಗಳನ್ನು ಪರಿಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
2017-18ನೇ ಸಾಲಿನಿಂದ 2022ರ ಜನವರಿವರೆಗೆ ಸಂಗ್ರಹಿಸಿದ ಟೋಲ್ ಬಗ್ಗೆ ಪರಿಶೋಧನೆ ನಡೆಸಲಾಗಿದೆ. 41 ಟೋಲಗಳ ಪೈಕಿ ಮೂರು ಟೋಲ್‌ಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ನಿಯಮ ಬಾಹಿರವಾಗಿ 124.18 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ.
ಈ ಮೂರು ಹೆದ್ದಾರಿಗಳಲ್ಲಿ ಎರಡು ಹೆದ್ದಾರಿಗಳು ಕರ್ನಾಟಕದಲ್ಲಿವೆ ಎನ್ನುವುದು ಗಮನಾರ್ಹ ಸಂಗತಿ. ಇನ್ನೊಂದು ಟೋಲ್ ಘಟಕ ಆಂಧ್ರಪ್ರದೇಶದಲ್ಲಿದೆ.
ನಿಯಮಗಳು ಹೇಳುವುದೇನು?
ನಾಲ್ಕು ಪಥಗಳ ರಾಷ್ಟ್ರೀಯ ಹೆದ್ದಾರಿಗಳನ್ನು ಆರು ಪಥಗಳಿಗೆ ಮೇಲ್ದರ್ಜೆಗೆ ಏರಿಸಿದ ಸಂದರ್ಭದಲ್ಲಿ ಟೋಲ್ ಶುಲ್ಕವನ್ನು ಕಡಿಮೆ ಮಾಡಬೇಕಾಗುತ್ತದೆ. ಮಾತ್ರವಲ್ಲದೆ, ಕೊಟ್ಟ ಗಡುವಿನಲ್ಲಿ ಕೆಲಸ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣವಾಗಲದೇ ಇದ್ದರೆ, ಕಾಮಗಾರಿ ಮುಗಿಯಬೇಕಾಗಿದ್ದ ದಿನಾಂಕದಿಂದ ಕಾಮಗಾರಿ ಪೂರ್ಣವಾಗುವವರೆಗೆ ಟೋಲ್ ಶುಲ್ಕ ವಿಧಿಸುವಂತಿಲ್ಲ ಎಂದು ಹೆದ್ದಾರಿ ಬಳಕೆದಾರರ ಶುಲ್ಕ ನಿಯಮ -2008 ಹೇಳಿದೆ.
ರಾಜ್ಯದ ಹೆಬ್ಬಾಳು, ಚಳಗೇರಿ, ಆಂಧ್ರಪ್ರದೇಶದ ನಾಥವಲಕ ಟೋಲ್ ಘಟಕಗಳಲ್ಲಿ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಶುಲ್ಕ ಸಂಗ್ರಹಿಸಲಾಗಿದ್ದು, ಸಿಎಜಿ ಇದನ್ನು ಅಕ್ರಮ ಎಂದು ಹೇಳಿದೆ.
ದಕ್ಷಿಣ ಭಾರತದಲ್ಲಿ ಒಟ್ಟು 154 ಕೋಟಿ ಸಂಗ್ರಹ
ನಾಥವಲಸ ಟೋಲ್ ಕೇಂದ್ರದ ಶುಲ್ಕವನ್ನು ಸೇರಿಸಿದರೆ ದಕ್ಷಿಣ ಭಾರತದಲ್ಲೇ ನಿಯಮಬಾಹಿರವಾಗಿ 154 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ ಎಂದು ಸಿಎಜಿ ವರದಿಯಲ್ಲಿ ತಿಳಿಸಿದೆ.











Click it and Unblock the Notifications