ರಾಮನಗರ, ಚಿತ್ರದುರ್ಗ, ಉಡುಪಿ ಜಿಲ್ಲೆಯ ಇಂದಿನ ಕೊರೊನಾ ಪ್ರಕರಣಗಳ ಅಪ್ಡೇಟ್
ರಾಮನಗರ, ಜುಲೈ 8: ರಾಮನಗರ ಜಿಲ್ಲೆಯಲ್ಲಿ ಇಂದು ಕೊರೊನಾ ಸೋಂಕಿಗೆ ಇಬ್ಬರು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕೊರೊನಾಗೆ ಬಲಿಯಾದವರ ಸಂಖ್ಯೆ 7ಕ್ಕೆ ಏರಿದೆ. ಮತ್ತು ಸೋಂಕಿತರ ಸಂಖ್ಯೆ ತ್ರಿಶತಕ ಬಾರಿಸಿದೆ.
ಇಂದು ಚಿಕಿತ್ಸೆಗೆ ಸ್ಪಂದಿಸದೆ ಮಾಗಡಿ ತಾಲ್ಲೂಕಿನ 40 ವರ್ಷದ ಪುರುಷ ಹಾಗೂ 70 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಇಂದು 34 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ ತ್ರಿಶತಕ ಬಾರಿಸಿದೆ. ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 315ಕ್ಕೆ ಏರಿಕೆಯಾಗಿದೆ. ಮಾಗಡಿಯಲ್ಲಿ- 22, ರಾಮನಗರದಲ್ಲಿ-2, ಕನಕಪುರದಲ್ಲಿ -5 ಹಾಗೂ ಚನ್ನಪಟ್ಟಣದಲ್ಲಿ 5 ಪ್ರಕರಣಗಳು ಪತ್ತೆಯಾಗಿವೆ.
ಚಿತ್ರದುರ್ಗದಲ್ಲಿ 2 ಪ್ರಕರಣ, ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆ: ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಇಂದಿನ ವರದಿಯಲ್ಲಿ ಚಳ್ಳಕೆರೆಯ 26 ವರ್ಷದ ಹಾಗೂ ಹಿರಿಯೂರಿನ 44 ವರ್ಷದ ಪುರುಷನಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಜಿಲ್ಲೆಯಲ್ಲಿ ಒಟ್ಟು 92 ದೃಢಪಟ್ಟ ಪ್ರಕರಣಗಳಲ್ಲಿ 66 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಸದ್ಯಕ್ಕೆ 26 ಸಕ್ರಿಯ ಪ್ರಕರಣಗಳು ಇವೆ. ಒಟ್ಟು 25 ಕಂಟೈನ್ಮೆಂಟ್ ವಲಯಗಳಿವೆ. 505 ಜನ ಹೋಂ ಕ್ವಾರಂಟೈನ್ ನಲ್ಲಿ ಹಾಗೂ ಮೂವರು ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪಾಲಾಕ್ಷ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇಂದು 31 ಪ್ರಕರಣ: ಉಡುಪಿಯಲ್ಲಿ ಇಂದು 31 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 1421ಕ್ಕೆ ಏರಿದೆ. ಉಡುಪಿ 20, ಕುಂದಾಪುರ 7, ಕಾರ್ಕಳದಲ್ಲಿ 4 ಪ್ರಕರಣ ಕಂಡುಬಂದಿದೆ. ಮಹಾರಾಷ್ಟ್ರದಿಂದ ಬಂದ 7 ಮಂದಿಯಲ್ಲಿ, ಅಬುದಾಬಿ 1, ಮಸ್ಕತ್ ನಿಂದ ಬಂದ 2 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೊರ ಜಿಲ್ಲೆಯಿಂದ ಬಂದ 9 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪ್ರಾಥಮಿಕ ಸಂಪರ್ಕದಿಂದ ಉಡುಪಿಯ 12 ಜನಕ್ಕೆ ಕೊರೊನಾ ತಗುಲಿದೆ ಎಂದು ಉಡುಪಿ ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.












Click it and Unblock the Notifications