ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕಾಗಿ 'ಸ್ಟಾಪ್ ಟೊಬ್ಯಾಕೋ' ಮೊಬೈಲ್ ಆಪ್ ಬಿಡುಗಡೆ, ಏನಿದು?
ಸಮಾಜದಲ್ಲಿ ತಂಬಾಕು ಮುಕ್ತ ಯುವ ಸಮೂಹ ನಿರ್ಮಿಸಬೇಕಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ಕರೆ ನೀಡಿದರು.
ಬೆಂಗಳೂರು, ಫೆಬ್ರವರಿ 28: ಕರ್ನಾಟಕದಲ್ಲಿ ಯುವ ಸಮೂಹವನ್ನು ತಂಬಾಕು ಮುಕ್ತವನ್ನಾಗಿ ಮಾಡುವಲ್ಲಿ ಅಡ್ಡಿ ಆಗಿರುವ ವಿತಂಡವಾದಿಗಳ ಸಂಖ್ಯೆ ದೊಡ್ಡದಿದ್ದು, ಅಂತವರನ್ನು ಮೀರಿ ಗುರಿ ಉದ್ದೇಶ ಸಾಕಾರಗೊಳಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತ ಡಿ. ರಂದೀಪ್ ಕರೆ ನೀಡಿದರು.
ಬೆಂಗಳೂರಿನಲ್ಲಿ ಮಂಳವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಮತ್ತು ರಾಜ್ಯ ತಂಬಾಕು ನಿಯಂತ್ರಣ ಘಟಕ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಮಂಗಳಗಂಗೋತ್ರಿಯ ಸಹಯೋಗದಲ್ಲಿ ಸಮಾರಂಭ ನಡೆಯಿತು. ಇದರಲ್ಲಿ 'ತಂಬಾಕು ಬಳಕೆಯಿಂದಾದ ಪರಿಣಾಮಗಳ ಬಗ್ಗೆ ಅಪರೂಪದ ಪ್ರಕರಣಗಳ ವಿಶ್ಲೇಷಣೆ, ಅನುಭವ ಕಥನ ಮತ್ತು ಸಂವಾದ' ಹಾಗೂ 'ತಂಬಾಕು ಮುಕ್ತ ತಲೆಮಾರು ಮತ್ತು ಮಾಧ್ಯಮ ಕಾರ್ಯಾಗಾರ'ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಇದೇ ವೇಳೆ 'ಸ್ಟಾಪ್ ಟೊಬ್ಯಾಕೋ', 'ಮೊಬೈಲ್ ಆಪ್ ಬಿಡುಗಡೆ' ಮಾಡಲಾಯಿತು.

ಈ ವೇಳೆ ಮಾತನಾಡಿದ ಅವರು, 'ಧೂಮಪಾನ ತ್ಯಜಿಸುವಂತೆ ಸಲಹೆ ನೀಡಿದರೆ ವಿತಂಡವಾದ ಮಾಡುತ್ತಾರೆ. ಸಿಹಿ ತಿಂದರೆ ಮಧುಮೇಹ ಬರುವುದಿಲ್ಲವೇ? ಎಂದು ಪ್ರಶ್ನಿಸುತ್ತಾರೆ. ಹೀಗೆ ಒಂದಕ್ಕೊಂದು ತಾಳೆಯಾಗದ ವಿಚಾರಗಳ ಬಗ್ಗೆ ವಾದ ಮಾಡುವವರನ್ನು ಮೀರಿ ತಂಬಾಕು ಮುಕ್ತ ತಲೆಮಾರು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದ ತಿಳಿಸಿದರು.
ತಂಬಾಕು ನಿಯಂತ್ರಣದ ರಾಯಭಾರಿ ಆಗಬೇಕು
ನನ್ನ ಸಹೋದ್ಯೋಗಿಗಳು ಒಬ್ಬರು ತಂಬಾಕು ವ್ಯಸನ/ಚಟದಿಂದ ಜೀವ ಬಿಟ್ಟರು. ಯಾವ ಕುಟುಂಬದಲ್ಲಾದರೂ ಈ ಪರಿಸ್ಥಿತಿ ನಿರ್ಮಾಣವಾಗಬಾರದು. ಸೂಕ್ತ ಸಮಯದಲ್ಲಿ ಅಗತ್ಯ ಸಲಹೆ ನೀಡಿ ತಂಬಾಕು ವ್ಯಸನಿಗಳಾಗುವುದನ್ನು ತಡೆಗಟ್ಟಲೂ ಬಹುದು.
ಯುವ ಸಮೂಹ ತಂಬಾಕು ನಿಯಂತ್ರಣದ ರಾಯಭಾರಿಗಳಾಗಬೇಕು. ಒಬ್ಬ ವ್ಯಕ್ತಿ ಇಂತಹ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಸಾಕಷ್ಟು ಜನರ ಮೇಲೆ ಇದು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಇಡೀ ಗ್ರಾಮಗಳೇ ತಂಬಾಕು ಮುಕ್ತಗೊಳ್ಳುತ್ತಿರುವುದು ನಿಜಕ್ಕೂ ಮಹತ್ವದ ಬೆಳವಣಿಗೆ. ತಂಬಾಕು ಮುಕ್ತ ಗ್ರಾಮ ಅಭಿಯಾನದಲ್ಲಿ ತೊಡಗಿರುವ ಆರೋಗ್ಯಾಧಿಕಾರಿಗಳು ಮತ್ತು ಗ್ರಾಮಸ್ಥರ ಕಾರ್ಯವನ್ನು ರಂದೀಪ್ ಶ್ಲಾಘಿಸಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕಿರಣ್ ಕುಮಾರ್ ಅವರು, ಯುವಕರು ಚಿಕ್ಕ ವಯಸ್ಸಿನಲ್ಲಿಯೇ ತಂಬಾಕು ಚಟಕ್ಕೆ ದಾಸರಾಗುತ್ತಿದ್ದಾರೆ. ಇದರೊಂದು ಆತಂಕಕಾರಿ ಬೆಳವಣಿಗೆ ಎಂದು ಅವರು ಕಳವಳ ವ್ಯಕ್ತಪಡಿಸಿದರು. 2007ರ ಆಸುಪಾಸಿನ ಮಕ್ಕಳನ್ನು ತಂಬಾಕು ಮುಕ್ತ ವಾತಾವರಣದಲ್ಲಿ ಬೆಳೆಸಬೇಕು. ತಂಬಾಕು ಚಟಕ್ಕೆ ಸಿಲುಕಿದ ನಂತರ ಶೇ 6 ರಷ್ಟು ಜನರಷ್ಟೇ ತಂಬಾಕು ಚಟದಂದ ಮುಕ್ತರಾಗುತ್ತಿದ್ದಾರೆ.
ಆರೋಗ್ಯ ಇಲಾಖೆ ರಾಜ್ಯದಲ್ಲಿ ಇದೀಗ ತಂಬಾಕು ಮುಕ್ತ ಗ್ರಾಮಗಳನ್ನಾಗಿ ನಿರ್ಮಿಸುತ್ತಿದೆ. ಅಂತಹ ಗ್ರಾಮಗಳ ಸಂಖ್ಯೆ 25ಕ್ಕೆ ಹೆಚ್ಚಾಗಿರುವುದು ಖುಷಿಯ ಸಂಗತಿ. ತಂಬಾಕು ನಿಯಂತ್ರಣಕ್ಕೆ ಕೋಟ್ಪಾ ಕಾಯ್ದೆ ಅತ್ಯಂತ ಪ್ರಬಲವಾಗಿದೆ ಎಂದರು. ಇದೇ ವೇಳೆ ತಂಬಾಕು ಮುಕ್ತ ಗ್ರಾಮವಾಗಿ ಮಾಡಲು ಶ್ರಮಿಸಿದ ಗ್ರಾಮ ಪಂಚಾಯತಿ ಸದಸ್ಯರು ತಮ್ಮ ಅಭಿಯಾನ ಕುರಿತು ಮಾಹಿತಿ ಹಂಚಿಕೊಂಡರು.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಉಪ ನಿರ್ದೇಶಕರಾದ ಡಾ. ರಜನಿ ಪಿ, ಇಲಾಖೆಯ ಯೋಜನೆ ವಿಭಾಗದ ಜಂಟಿ ನಿರ್ದೇಶಕ ಡಾ. ಸೆಲ್ವರಾಜನ್, ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications