ಕರ್ನಾಟಕ ಬಂದ್ : ಪೊಲೀಸರ ಬಂದೋಬಸ್ತ್ ಹೇಗಿದೆ?
ಬೆಂಗಳೂರು, ಏ. 17 : ವಿವಿಧ ಕನ್ನಡ ಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ತಮಿಳು ಪ್ರಾಬಲ್ಯವಿರುವ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶಾಂತಿಯುತವಾಗಿ ಬಂದ್ ಆಚರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ಭದ್ರತೆಗಾಗಿ ಅರೆಸೇನಾಪಡೆಯ 2 ತುಕಡಿ, 30 ರಾಜ್ಯ ಮೀಸಲು ಪಡೆಯ ತುಕಡಿ, 1 ಸಾವಿರ ಗೃಹ ರಕ್ಷಕ ಸಿಬ್ಬಂದಿ, ಕೈಗಾರಿಕಾ ಭದ್ರತಾ ಪಡೆಯ 500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದರು. [ಕರ್ನಾಟಕ ಬಂದ್: ಸಾರ್ವಜನಿಕರಿಗೆ ಗೈಡ್ ಲೈನ್ಸ್]

ವಿವಿಧ ಕನ್ನಡಪರ ಸಂಘಟನೆಗಳು ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಖಂಡಿಸಿ ಬಂದ್‌ಗೆ ಕರೆ ನೀಡಿವೆ. ಆದ್ದರಿಂದ ತಮಿಳರು ವಾಸಿರುವ ಪ್ರದೇಶದಲ್ಲಿ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. [ಕರ್ನಾಟಕ ಬಂದ್ : 500 ಸಂಘಟನೆಗಳ ಬೆಂಬಲ]
ಶಾಂತಿಯುತವಾಗಿ ಬಂದ್ ನಡೆಸುವಂತೆ ಕನ್ನಡ ಪರ ಸಂಘಟನೆಗಳ ಮುಖಂಡರಿಗೆ ಸೂಚನೆ ನೀಡಲಾಗಿದೆ. ಬಂದ್ ವೇಳೆ ಕಾನೂನು ಕೈಗೆತ್ತಿಕೊಂಡು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಅಲೋಕ್ ಕುಮಾರ್ ಎಚ್ಚರಿಕೆ ನೀಡಿದರು.
ಬಸ್ ಸಂಚಾರ ಸ್ಥಗಿತ? : ಶನಿವಾರ ನಡೆಯುವ ಕರ್ನಾಟಕ ಬಂದ್ ವೇಳೆ ಪರಿಸ್ಥಿತಿಯನ್ನು ಅವಲೋಕಿಸಿ ಕೆಎಸ್ಆರ್‌ಟಿಸಿ ಬಸ್ ಸಂಚಾರದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಬಿ.ಎನ್.ಎಸ್.ರೆಡ್ಡಿ ತಿಳಿಸಿದ್ದಾರೆ.












Click it and Unblock the Notifications