ಚಾಮರಾಜನಗರ: ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತ ಹುಲಿರಾಯ
ಚಾಮರಾಜನಗರ, ಅಕ್ಟೋಬರ್. 13: ಚಿರತೆ ಕಂಡು ಬೆಚ್ಚಿಬೀಳುತ್ತಿದ್ದ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ರಾಘವಾಪುರ ಗ್ರಾಮದ ಜನ ಇದೀಗ ಹುಲಿಗೆ ಹೆದರುವಂತಾಗಿದೆ. ಹುಲಿಯೊಂದು ಗ್ರಾಮದ ಸಮೀಪ ಕಾಣಿಸಿಕೊಂಡಿದ್ದು ಗ್ರಾಮಸ್ಥರಲ್ಲಿ ಭಯ ಹುಟ್ಟುಹಾಕಿದೆ.
ಜನರ ಗಲಾಟೆಗೆ ಹುಲಿರಾಯನೂ ಹೆದರಿದ್ದು ಕಬ್ಬಿನ ಗದ್ದೆಯಲ್ಲಿ ಅವಿತು ಕುಳಿತಿದ್ದಾನೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.

ಗ್ರಾಮದ ಪಟ್ಲದಮ್ಮನ ದೇವಸ್ಥಾನದ ಬಳಿ ಇರುವ ಚಿಕ್ಕರಂಗಶೆಟ್ಟಿ ಎಂಬುವವರ ಕಬ್ಬಿನ ಗದ್ದೆಯಲ್ಲಿ ಹುಲಿಯನ್ನು ಕಂಡು ಜನ ಬೆಚ್ಚಿಬಿದ್ದಿದ್ದಾರೆ. ಈ ವಿಚಾರ ಬಾಯಿಂದ ಬಾಯಿಗೆ ಹರಡಿದೆ. ಜನರ ಬೊಬ್ಬೆ ಕಿರುಚಾಟ ಕೇಳಿದ ಹುಲಿ ತೆಪ್ಪಗೆ ಕಬ್ಬಿನ ಗದ್ದೆಯಲ್ಲಿ ಮರೆಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಹುಲಿ ಕಾಣಿಸಿಕೊಂಡಿರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿರುವ ಹುಲಿಯೋಜನೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ, ಕಬ್ಬಿನ ಗದ್ದೆಯಲ್ಲಿ ಅಡಗಿ ಕುಳಿತಿರುವ ಹುಲಿ ಹಿಡಿಯಲು ಹರಸಾಹಸ ಮಾಡುತ್ತಿದ್ದಾರೆ.

ಅರಣ್ಯ ಇಲಾಖೆಯ ಎಸಿಎಫ್ ಪೂವಯ್ಯ, ಆರ್‍ಎಫ್‍ಒ ಕಾಂತರಾಜು, ಸ್ಥಳದಲ್ಲಿದ್ದು ಯಾವುದೇ ರೀತಿಯ ತೊಂದರೆಯಾಗದಂತೆ ಹುಲಿಯನ್ನು ಕಾಡಿಗೆ ಕಳುಹಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಗಳು ತೇವಾಂಶದ ನೆಲದಲ್ಲಿರುವ ಹುಲಿಯ ಹೆಜ್ಜೆಗುರುತನ್ನು ಚಿರತೆಯ ಹೆಜ್ಜೆಗುರುತಿರಬಹುದು ಎಂದು ಅನುಮಾನಿಸಿದ್ದು ಬೋನು ಅಳವಡಿಕೆ ಮಾಡಿ ಹುಲಿಯನ್ನು ಸೆರೆಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.












Click it and Unblock the Notifications