ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ
ಬೆಂಗಳೂರು, ಮೇ 20: ಅತ್ತ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿ ಮೊದಲ ಕ್ಯಾಬಿನೆಟ್ ಸಭೆ ಮುಗಿಸಿದ ತಕ್ಷಣವೇ ಬೆಂಗಳೂರು ನಗರ ಸೇರಿ ರಾಜ್ಯದ ಹಲವೆಡೆ ಭರ್ಜರಿ ಮಳೆ ಸುರಿಯಿತು.
ದೇಶಕ್ಕೆ ಮುಂಗಾರು ಪ್ರವೇಶಿಸಲು ಇನ್ನು ಕೆಲವು ದಿನಗಳು ಬಾಕಿ ಇದೆ. ಶನಿವಾರ ಬೆಂಗಳೂರಿನ ಹಲವು ವಾರ್ಡ್‌ಗಳಲ್ಲಿ ಭರ್ಜರಿಯಾಗಿ ಮಳೆ ಸುರಿಯಿತು. ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಭಾಗ ಹಾಗೂ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಮಳೆಯಾಗಿದೆ.

ಬೆಂಗಳೂರಿನ ಹಲವು ಕಡೆ ಸಂಜೆ 4ರ ಬಳಿಕ ಗುಡುಗು ಸಹಿತವಾಗಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊದಲೇ ಪ್ರಮಾಣವಚನ ಸ್ವೀಕಾರಕ್ಕಾಗಿ ಕಂಠೀರವ ಕ್ರೀಡಾಂಗಣಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರಿಂದ, ವಾಹನ ಹಾಗೂ ಜನದಟ್ಟಣೆ ಉಂಟಾಗಿದೆ. ಅದೇ ಸಮಯಕ್ಕೆ ಮಳೆ ಬಂದಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು.
ಭಾರಿ ಮಳೆಯಾದ ಕಾರಣ ವಿಧಾನಸೌಧ ಸುತ್ತಮುತ್ತ ಭಾರಿ ಟ್ರಾಫಿಕ್ ಜಾಮ್ ಆಗಿತ್ತು. ಇದರಿಂದ ವಾಹನ ಸವಾರರು ಪರದಾಡಿದರು. ಈ ಮಧ್ಯೆ ಆ್ಯಂಬುಲೆನ್ಸ್ ಕೂಡ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತ್ತು. ಮತ್ತೊಂದೆಡೆ ಮೆಜೆಸ್ಟಿಕ್ ಪ್ರದೇಶ ಮಳೆಯಿಂದಾಗಿ ಕೆರೆಯಂತಾಗಿತ್ತು. ಬಿಬಿಎಂಪಿಗೆ ಸಮೀಪದಲ್ಲಿ ಬಿಎಂಟಿಸಿ ಬಸ್ ಮೇಲೆ ಮರ ಬಿದ್ದಿರುವುದು ಕಂಡು ಬಂದಿದೆ. ಇನ್ನೂ ಹಲವೆಡೆ ಮರಗಳು ಬಿದ್ದಿದ್ದು, ತಗ್ಗುಪ್ರದೇಶಕ್ಕೆ ನೀರು ನುಗ್ಗಿದೆ. ಕಾರ್ಪೋರೇಷನ್ ಬಳಿ ರಸ್ತೆ ಬದಿ ನಿಂತಿದ್ದ ಆಟೋ ಮೇಲೆ ಮರದ ಕೊಂಬೆ ಬಿದ್ದಿದ್ದು, ಟಾಪ್ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಆಟೋ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಹಲವೆಡೆ ಇಂದಿನಿಂದ 5 ದಿನಗಳ ಕಾಲ ಮಳೆರಾಯ ಆರ್ಭಟಿಸಲಿದ್ದು, ಇನ್ನು ಕೆಲವೆಡೆ ಒಣಹವೆ ಮುಂದುವರೆಯಲಿದೆ ಎನ್ನುವ ಮಾಹಿತಿ ಇತ್ತು. ಇನ್ನು ಇಂದು ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಯಿದೆ. ಮೇ 22ರ ಬಳಿಕ ಮಳೆಯ ತೀವ್ರತೆ ಹೆಚ್ಚಲಿದ್ದು, ಮೇ 23ರ ವೇಳೆಗೆ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆಯಿದೆ ಎಂದು ತಿಳಿಸಲಾಗಿತ್ತು.
ಹಾಗೆಯೆ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು, ದಾವಣಗೆರೆ, ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಿಕ್ಕಿಬಳ್ಳಾಪುರ, ಕೋಲಾರ, ಚಾಮರಾಜನಗರ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಮೊದಲ ಮೂರು ದಿನಗಳ ಕಾಲ ಸಾಧಾರಣ ಮಳೆ ಆಗಿದೆ.
ಬಿಸಿಲಿನ ಧಗೆಯಿಂದ ಕಂಗೆಟ್ಟಿರುವ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಇಂದು ಗುಡುಗು, ಮಿಂಚು ಸಹಿತ ಮಳೆ ಆಗಿದೆ. ಮೂರು ದಿನಗಳ ಹಿಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲಿನ ತಾಪಮಾನ ಹೆಚ್ಚಿದ್ದು, ಸಂಜೆ ಆಗುತ್ತಿಂದತೆ ಮಳೆರಾಯ ಧರೆಗಿಳಿದಿದ್ದ, ಇದು ಬಿಸಿಲಿನಿಂದ ಕಾದಿದ್ದ ನೆಲಕ್ಕೆ ತಂಪೆರೆದಂತಾಗಿತ್ತು. ಆದರೆ ಶನಿವಾರ (ಮೇ 19) ಬಿಸಿಲಿನ ವಾತಾವರಣವೇ ಮುಂದುವರೆದಿತ್ತು. ಇದು ಸಂಜೆ ವೇಳೆಗೆ ತಂಪಾಯಿತು.
ಪೊಲೀಸ್ ಕಾರ್ನರ್, ಮೈಸೂರು ಬ್ಯಾಂಕ್ ವೃತ್ತ, ಅರಮನೆ ರಸ್ತೆ ಜ್ಞಾನಜ್ಯೋತಿ ಆಡಿಟೋರಿಯಂ ಬಳಿ ಮರ ಬಿದ್ದ ಪರಿಣಾಮ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿದೆ. ಇದನ್ನು ಶೀಘ್ರದಲ್ಲೇ ತೆಗೆದುಹಾಕಲಾಗುತ್ತದೆ. ದಯವಿಟ್ಟು ಪರ್ಯಾಯ ಮಾರ್ಗಗಳನ್ನು ಬಳಸಿ ಎಂದು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ.












Click it and Unblock the Notifications