ಇನ್ಮುಂದೆ ಮರ-ಬೆಟ್ಟ ಹತ್ತಬೇಕಿಲ್ಲ: ದಟ್ಟ ಕಾಡಿನಲ್ಲೂ ಟವರ್ ಇಲ್ಲದೇ 4G ನೆಟ್‌ವರ್ಕ್ ತಂದ ಶಿರಸಿಯ ಈ ಮೂವರು ಯುವಕರ ಸಾಧನೆ
ದೇಶ ಎಷ್ಟೇ ಮುಂದುವರೆದಿದ್ದರೂ ಕೂಡ ಮಲೆನಾಡು ಮತ್ತು ಕರಾವಳಿ ಭಾಗದ ದಟ್ಟ ಅರಣ್ಯ ಪ್ರದೇಶಗಳಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗದಿರುವುದು ಇಂದಿಗೂ ಅತಿ ದೊಡ್ಡ ಸಮಸ್ಯೆ. ಒಂದು ವೇಳೆ ತುರ್ತು ಕರೆ ಮಾಡಬೇಕೆಂದರೇ ಜೀವದ ಹಂಗು ತೊರೆದು ಮರ ಅಥವಾ ಗುಡ್ಡ ಹತ್ತಬೇಕಾದ ಅನಿವಾರ್ಯತೆ ಕಾಡಂಚಿನ ಜನರದ್ದು.
ಆದರೆ, ಈ ಸಮಸ್ಯೆಗೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೂವರು ಯುವಕರು ದೇಶೀಯ ತಂತ್ರಜ್ಞಾನದ ಮೂಲಕ ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ. ಇವರ ನೂತನ ಆವಿಷ್ಕಾರದ ಫಲವಾಗಿ ಇದೀಗ ದಟ್ಟ ಕಾಡಿನಲ್ಲಿ 4G ನೆಟ್‌ವರ್ಕ್ ಸುಲಭವಾಗಿ ಲಭ್ಯವಾಗಲಿದ್ದು, ಈ ಕ್ರಾಂತಿಕಾರಿ ಹೆಜ್ಜೆಗೆ ಕೇಂದ್ರ ಸರ್ಕಾರವೂ ಮೆಚ್ಚುಗೆ ವ್ಯಕ್ತಪಡಿಸಿದೆ.

ಶಿರಸಿ ಯುವಕರ ಆವಿಷ್ಕಾರ: ಕೊರೊನಾ ಕಾಲದಲ್ಲಿ ಹುಟ್ಟಿದ ಐಡಿಯಾ
ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ನಗರಗಳಿಂದ ತಮ್ಮ ಹಳ್ಳಿಗಳಿಗೆ ಮರಳಿದ್ದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಮಾಡಲು ಹಾಗೂ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ನೆಟ್‌ವರ್ಕ್ ಇಲ್ಲದೆ ಭಾರೀ ಕಷ್ಟವಾಗಿತ್ತು. ಈ ಸಂಕಷ್ಟವನ್ನ ಹತ್ತಿರದಿಂದ ಕಂಡ ದೂರಸಂಪರ್ಕ ಕ್ಷೇತ್ರದ ಅನುಭವಿಗಳಾದ ಶಿರಸಿ ಮೂಲದ ಯುವ ಇಂಜಿನಿಯರ್‌ಗಳಾದ ಅಭಯ್, ಸುದರ್ಶನ್ ಮತ್ತು ಸಮರ್ಥ್ ಅವರು, ಇದಕ್ಕೆ ಶಾಶ್ವತ ಪರಿಹಾರ ಹುಡುಕುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟರು.
ಈ ಕನಸಿನ ಸಾಕಾರಕ್ಕಾಗಿಯೇ 'ನೆಕ್ಸಸ್ ಸ್ಪೆರಿಕಲ್ ಟೆಕ್ನಾಲಜೀಸ್' ಎಂಬ ಸಂಸ್ಥೆಯನ್ನ ಹುಟ್ಟುಹಾಕಿದರು. ಇವರ ಈ ಪರಿಶ್ರಮದ ಫಲವೇ ಇಂದಿನ ಹೊಸ ತಂತ್ರಜ್ಞಾನ.
ಮೈಕ್ರೋ ಸೆಲ್ ತಂತ್ರಜ್ಞಾನ: ಟವರ್‌ಗಳ ಹಂಗಿಲ್ಲದೆ ಬಿಎಸ್‌ಎನ್‌ಎಲ್ 4G
ಸಾಮಾನ್ಯವಾಗಿ ಮೊಬೈಲ್ ಸಿಗ್ನಲ್ ತಲುಪಿಸಲು ಗುಡ್ಡದ ಮೇಲೆ ಅಥವಾ ಎತ್ತರದ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಟವರ್‌ಗಳನ್ನ ನಿರ್ಮಿಸಬೇಕಾಗುತ್ತದೆ. ಅದು ಕೂಡ ಮಳೆ, ಗುಡುಗು ಮಿಂಚು ಬಂದಾಗ ಹಾಳಾಗುವ ಸಾದ್ಯತೆ ಕೂಡ ಜಾಸ್ತಿಯಿದೆ.
ಆದರೆ, ಈ ಯುವಕರ ತಂಡ ಅಭಿವೃದ್ಧಿಪಡಿಸಿರುವ 'ಮೈಕ್ರೋ ಸೆಲ್' ಸಾಧನಕ್ಕೆ ದೊಡ್ಡ ದೊಡ್ಡ ಟವರ್‌ಗಳ ಅಗತ್ಯವಿಲ್ಲ.
ಹೌದು, ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಸಂಪೂರ್ಣ ದೇಶೀಯವಾಗಿ ನಿರ್ಮಿಸಲಾದ ಈ ಪುಟ್ಟ ಸಾಧನವು, ದಟ್ಟ ಅರಣ್ಯದ ಮೂಲೆ ಮೂಲೆಗೂ ಬಿಎಸ್‌ಎನ್‌ಎಲ್ 4G ಇಂಟರ್ನೆಟ್ ಅನ್ನ ಯಶಸ್ವಿಯಾಗಿ ತಲುಪಿಸುತ್ತದೆ. ಇತ್ತೀಚೆಗಷ್ಟೇ ಯಲ್ಲಾಪುರ ತಾಲೂಕಿನ ಆನಗೋಡ ಅರಣ್ಯ ಭಾಗದಲ್ಲಿ ಈ ತಂತ್ರಜ್ಞಾನದ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಅದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ.
ಬೆಂಗಳೂರಿನ ಲೇಖಾ ವೈರ್‌ಲೆಸ್ ಸೊಲ್ಯೂಷನ್ಸ್ ತಾಂತ್ರಿಕ ಬೆಂಬಲ
ಶಿರಸಿ ಯುವಕರ ಈ ವಿನೂತನ ಐಡಿಯಾಗೆ ಬೆಂಗಳೂರು ಮೂಲದ ಲೇಖಾ ವೈರ್‌ಲೆಸ್ ಸೊಲ್ಯೂಷನ್ಸ್ ಸಂಸ್ಥೆ ಬೆನ್ನೆಲುಬಾಗಿ ನಿಂತಿದೆ. ಸಂಸ್ಥೆಯ ಸಂಸ್ಥಾಪಕ ರಾಮು ಅವರ ನೇತೃತ್ವದಲ್ಲಿ, ಈ ಸಾಧನಕ್ಕೆ ಬೇಕಾದ ತಾಂತ್ರಿಕ ಹಾಗೂ ಉಪಕರಣಗಳ ಸಂಪೂರ್ಣ ಬೆಂಬಲವನ್ನ ನೀಡಲಾಗಿದೆ.
ವಿಶೇಷವೆಂದರೆ, ಇದರಲ್ಲಿ ಬಳಸಲಾದ 4G ಮತ್ತು 5G ರೇಡಿಯೋ ಉತ್ಪನ್ನಗಳನ್ನ ಭಾರತದಲ್ಲೇ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ.
ಕಾಡಂಚಿನ ಜನರಿಗೆ ನೆಟ್‌ವರ್ಕ್ ಒದಗಿಸುವಲ್ಲಿ ಯಶಸ್ವಿಯಾಗಿರುವ ಅಭಯ್, ಸುದರ್ಶನ್ ಮತ್ತು ಸಮರ್ಥ್ ಅವರ ಈ ಸಾಧನೆ ಮಲೆನಾಡಿನ ಗ್ರಾಮೀಣ ಪ್ರದೇಶಗಳಿಗೆ ಹೊಸ ಡಿಜಿಟಲ್ ಕ್ರಾಂತಿಯ ಬಾಗಿಲು ತೆರೆದಿದೆ. ಇವರ ಈ ಕಾರ್ಯಕ್ಕೆ ನಾಡಿನಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


Click it and Unblock the Notifications
