Accident: ಮೆಕ್ಕಾ ದರ್ಶನಕ್ಕೆ ತೆರಳುತ್ತಿದ್ದ ಕರ್ನಾಟಕದ ಒಂದೇ ಕುಟುಂಬದ ಮೂವರು ಸಾವು
ಕಾರವಾರ, ಏಪ್ರಿಲ್ 08: ದೇವರ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಉತ್ತರ ಕನ್ನಡ ಜಿಲ್ಲೆಯ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಸಹೋದರನ ಮಗ ಆಯಾನ್ ಮೃತ ದುರ್ದೈವಿಗಳು.
ಮೃತರು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಪಟ್ಟಣದ ನಿವಾಸಿಗಳು ಎಂದು ತಿಳಿದುಬಂದಿದೆ. ಮೃತ ಫಯಾಜ್ ರೋಣ ಅವರು ಮುಂಡಗೋಡು ಪಟ್ಟಣದ ತಾಲೂಕು ಪಂಚಾಯಿತಿ ಎದುರಿನ ರೋಣ ಮೆಡಿಕಲ್ಸ್ ಮಾಲೀಕರಾಗಿದ್ದರು. ಕಳೆದ ಮಾರ್ಚ್ 26ರಂದು ಅರೇಬಿಯಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಹೋದರರ ಜೊತೆಗೆ ಫಯಾಜ್ ರೋಣ ಹಾಗೂ ಕುಟುಂಬಸ್ಥರು ಮೆಕ್ಕಾ ಮತ್ತು ಮದೀನಾಕ್ಕೆ ತೆರಳುತ್ತಿದ್ದರು.

ಮೆಕ್ಕಾ ಮತ್ತು ಮದೀನಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಲ್ಯಾಂಡ್ ಕ್ರೂಸರ್ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದವರು ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಮೃತದೇಹಗಳನ್ನು ಹುಟ್ಟೂರಿಗೆ ರವಾನಿಸಲಾಗುತ್ತಿದೆ.
ಬೆಂಗಳೂರು: ಕಸದ ಲಾರಿ ಡಿಕ್ಕಿಯಾಗಿ ಓರ್ವ ಸಾವು
ಬೆಂಗಳೂರು: ಕಸದ ಲಾರಿಗೆ ಕಾರು ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವೈಟ್ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಲಗತ್ತ್ ಜಂಕ್ಷನ್ನಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಓಡಿಶಾ ಮೂಲದ ಸಾಗರ್ ( 23) ಮೃತ ದುರ್ದೈವಿ.
ನಿನ್ನೆ ಸೋಮವಾರ ರಾತ್ರಿ 10:30ರ ವೇಳೆ ವೇಳೆ ಬಾಲಗತ್ತ್ ಜಂಕ್ಷನ್ ಬಳಿ ವೇಗವಾಗಿ ಬಂದ ಐವರು ಪ್ರಯಾಣಿಕರಿದ್ದ ಕಾರು ಕಸದ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಡಿಶಾ ಮೂಲದ ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications