ಸಚಿವ ಜೈನ್‌ಗೆ ಬಂದಿದ್ದು ಹುಸಿ ಬೆದರಿಕೆ ಕರೆಯಲ್ಲ
ಬೆಂಗಳೂರು, ಅಕ್ಟೋಬರ್ 26 : ಸಚಿವ ಅಭಯಚಂದ್ರ ಜೈನ್ ಅವರಿಗೆ ಬಂದಿದ್ದು ಹುಸಿ ಜೀವ ಬೆದರಿಕೆ ಕರೆಯಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಮೂಡಬಿದರೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಲು ಸೈಬರ್ ಕ್ರೈಂ ಪೊಲೀಸರು ಮತ್ತು ಗುಪ್ತಚರ ಇಲಾಖೆ ಅಧಿಕಾರಿಗಳ ನೆರವು ಕೇಳಿದ್ದಾರೆ.
ಅಕ್ಟೋಬರ್ 24ರ ಶನಿವಾರ ಮಧ್ಯಾಹ್ನ 12.45ರ ಸುಮಾರಿಗೆ ಭೂಗತ ಪಾತಕಿ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿ ಸಚಿವರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಸಚಿವರು ಈ ಕುರಿತು ಮೂಡಬಿದರೆ ಠಾಣೆಗೆ ದೂರು ನೀಡಿದ್ದರು. [ಸಚಿವರಿಗೆ ರವಿ ಪೂಜಾರಿಯಿಂದ ಬೆದರಿಕೆ ಕರೆ]

ಸಚಿವರ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಇದು ಹುಸಿ ಕರೆಯಲ್ಲ ಎಂಬ ಮಾಹಿತಿ ಸಂಗ್ರಹಣೆ ಮಾಡಿದ್ದಾರೆ. ದೂರಿನ ತನಿಖೆ ನಡೆಸುತ್ತಿರುವ ಪೊಲೀಸರು ಒನ್ ಇಂಡಿಯಾ ಜೊತೆ ಮಾತನಾಡಿದ್ದು, ಕರೆ ಬಂದ ನಂಬರ್ ಪಡೆದಿದ್ದು, ಅದರ ವಿವರಗಳನ್ನು ಸಂಗ್ರಹಣೆ ಮಾಡಿದ್ದೇವೆ ಎಂದು ಹೇಳಿದ್ದಾರೆ. [ಮೂಡಬಿದಿರೆ : ಪ್ರಶಾಂತ್ ಪೂಜಾರಿ ಹತ್ಯೆ]
ಸಚಿವರಿಗೆ ಕರೆ ಮಾಡಿದ್ದ ವ್ಯಕ್ತಿ 'ಭಜರಂಗ ದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಕೊಲೆಯಲ್ಲಿ ನೀವು ನೇರವಾಗಿ ಭಾಗಿಯಾಗಿದ್ದೀರಿ. ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲ' ಎಂದು ಬೆದರಿಕೆ ಹಾಕಿದ್ದ. ಮೂಡಬಿದಿರೆಯಲ್ಲಿ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಪ್ರಶಾಂತ್ ಪೂಜಾರಿ ಹಿಂದೂಪರ ಸಂಘಟನೆಯಲ್ಲಿ ಸಕ್ರಿಯನಾಗಿ ಗುರುತಿಸಿಕೊಂಡಿದ್ದ.
ಅಕ್ಟೋಬರ್ 9ರಂದು ಮೂಡಬಿದಿರೆ ಪೇಟೆಯ ಸಮಾಜಮಂದಿರ ಗೇಟ್ ಬಳಿ ಅವರ ಹತ್ಯೆ ನಡೆದಿತ್ತು. ಇದುವರೆಗೂ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಲಾಗಿದೆ. ಸಚಿವರು ತಮಗೆ ಬಂದ ಬೆದರಿಕೆ ಕರೆಯ ಬಗ್ಗೆಯೂ ಮೂಡಬಿದರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಎಸ್.ಮುರುಗನ್ ಅವರೂ ಈ ಬೆದರಿಕೆ ಕರೆ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸಚಿವರಿಗೆ ಭದ್ರತೆ ಹೆಚ್ಚಿಸಲಾಗಿದೆ. ಸಚಿವರ ನಿವಾಸಕ್ಕೂ ಅಗತ್ಯ ಭದ್ರತೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.












Click it and Unblock the Notifications