'ಮುಖ್ಯಮಂತ್ರಿ ಸಿದ್ದರಾಮಯ್ಯರ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ'
ಬೆಂಗಳೂರು, ಸೆಪ್ಟೆಂಬರ್ 10: ನಮ್ಮ ರಾಜ್ಯದಲ್ಲಿ ಇವತ್ತು ಏನಾಗುತ್ತಿದೆ? ದಿನನಿತ್ಯ ಯಾವ ರೀತಿ ಪರಿಸ್ಥಿತಿ ಹದಗೆಡುತ್ತಿದೆ? ಕಾನೂನು ಸುವ್ಯವಸ್ಥೆ ಮುರಿದುಬಿದ್ದಿದೆ. ಕಾಂಗ್ರೆಸ್ ಸರಕಾರಕ್ಕೆ ಯಾಕೆ ಇಂಥ ದುರ್ಬುದ್ಧಿ ಬಂದಿದೆ. ಕಾಂಗ್ರೆಸ್ ಸರಕಾರಕ್ಕೆ ಹಿಂದೂಗಳು ಏನು ಅನ್ಯಾಯ ಮಾಡಿದ್ದಾರೆ ಎಂದು ರಾಜ್ಯದ ಅಸಂಖ್ಯಾತ ಹಿಂದೂ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಮುಖ್ಯಮಂತ್ರಿಗಳ ಸುತ್ತ ಅಯೋಗ್ಯರನ್ನೇ ಇಟ್ಟುಕೊಂಡಂತಿದೆ ಎಂದು ಹೇಳಿದರು. ಹಿಂದೂಗಳ ಮೇಲೆ ಕಲ್ಲೆಸೆತ, ಹಲ್ಲೆ ನಡೆಯುತ್ತಿದೆ. ಗಣಪತಿ ಮಹೋತ್ಸವವನ್ನೂ ಹಿಂದೂಗಳು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತಿಲ್ಲ; ಕಾಂಗ್ರೆಸ್ ಸರಕಾರದ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣವು ಕಳೆದ ಎರಡೂವರೆ ವರ್ಷಗಳಿಂದ ನಿರಂತರವಾಗಿ ನಡೆಯುತ್ತ ಬಂದಿದೆ ಎಂದು ಟೀಕಿಸಿದರು.

ಮದ್ದೂರು ಗಲಭೆ ಘಟನೆಗೆ ಸಂಬಂಧಿಸಿ ಸತ್ಯ ಸಂಶೋಧನಾ ತಂಡವನ್ನು ನಾವು ಈಗಾಗಲೇ ಪ್ರಕಟಿಸಿದ್ದೇವೆ. ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ತಂಡ ರಚಿಸಿದ್ದೇವೆ. ಮದ್ದೂರಿನಲ್ಲಿ ಪೊಲೀಸ್ ಇಲಾಖೆಯ ಸಂಪೂರ್ಣ ವೈಫಲ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲಿಸಿ ವರದಿ ಕೊಡಲು ತಿಳಿಸಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಒಂದು ರೀತಿ ತುಘಲಕ್ ದರ್ಬಾರ್ ಇದೆ. ಇವರು ನಿಜಾಮರ ಆಡಳಿತವನ್ನು ನೆನಪು ಮಾಡಿ ಕೊಡುತ್ತಿದ್ದಾರೆ ಎಂದರು.
ಮುಖ್ಯಮಂತ್ರಿಗಳು, ಗೃಹ ಸಚಿವರು ತಮ್ಮ ಧೋರಣೆ ಸರಿಪಡಿಸಿಕೊಳ್ಳದಿದ್ದರೆ ಖಂಡಿತವಾಗಿ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಡಲಿದೆ. ಇದಕ್ಕೆ ರಾಜ್ಯ ಸರಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು. ಗಣಪತಿ ಮೆರವಣಿಗೆಯಲ್ಲಿ ಕೇಸರಿ ಶಾಲು ಹಾಕಿ ಡ್ಯಾನ್ಸ್ ಮಾಡಿದ ಪಿಎಸ್‍ಐ ಒಬ್ಬರನ್ನು ಅಮಾನತು ಮಾಡುವ ಮಾಹಿತಿ ನನಗೆ ಬಂದಿದೆ. ನಾವೇನು ಪಾಕಿಸ್ತಾನದಲ್ಲಿದ್ದೇವಾ? ಎಂದು ಕೇಳಿದರು.
ನಮ್ಮ ರಾಜ್ಯದಲ್ಲಿ ಆರೆಸ್ಸೆಸ್, ಹಿಂದೂ ಸಂಘಟನೆಗಳು, ಹಿಂದೂ ಕಾರ್ಯಕರ್ತರನ್ನು ತಡೆಯಲು ಇವರು ಯಾರು? ಚಾಮುಂಡಿ ಬೆಟ್ಟಕ್ಕೆ, ಧರ್ಮಸ್ಥಳಕ್ಕೆ ಅಥವಾ ಗಣಪತಿ ಮೆರವಣಿಗೆಯಲ್ಲಿ ಹೋಗುವುದಾರೆ ಇವರು ಯಾರು ತಡೆಯುವುದಕ್ಕೆ ಎಂದು ಕೇಳಿದರು. ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ತಾಕತ್ತಿದ್ದರೆ ಒದ್ದು ಒಳಗಡೆ ಹಾಕಲಿ ಎಂದು ಸವಾಲೆಸೆದರು. ಅದನ್ನು ಮಾಡಲು ಈ ಸರಕಾರಕ್ಕೆ ಯೋಗ್ಯತೆ ಇಲ್ಲ. ಇವರು ಹಾಗಿದ್ದರೆ ನಮ್ಮನ್ನು ಪ್ರಶ್ನಿಸುತ್ತಾರಾ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮಧು ಬಂಗಾರಪ್ಪ ಇರುವ ಇಲಾಖೆಯನ್ನು ನೆಟ್ಟಗೆ ನೋಡಿಕೊಳ್ಳಲಿ. ಇರುವ ಸರಕಾರಿ ಶಾಲೆಗಳು ಮುಚ್ಚಿ ಹೋಗುತ್ತಿದೆ. ಅವರೇನು ಇದರ ಬಗ್ಗೆ ಮಾತನಾಡುವುದು ಎಂದು ಪತ್ರಕರ್ತರ ಪ್ರಶ್ನೆಗೆ ಬಿ.ವೈ. ವಿಜಯೇಂದ್ರ ಅವರು ಮರು ಪ್ರಶ್ನೆ ಹಾಕಿದರು. ಬಿಜೆಪಿ ಹಿಂದುತ್ವದ ಪರವಾಗಿ ಇದೆ. ಇವರ್ಯಾರು ಅದನ್ನು ಪ್ರಶ್ನೆ ಮಾಡಲು ಎಂದು ಆಕ್ಷೇಪಿಸಿದರು. ಸರಕಾರ ನಡೆಸುತ್ತಿದ್ದಾರೆ; ಕಾನೂನು- ಸುವ್ಯವಸ್ಥೆ ಕಾಪಾಡಿ ಹಿಂದೂಗಳ ರಕ್ಷಣೆ ಮಾಡುವುದು ಇವರ ಕರ್ತವ್ಯವಲ್ಲವೇ? ಎಂದು ಕೇಳಿದರು. ಕರ್ನಾಟಕ ರಾಜ್ಯದಲ್ಲಿ ನಮ್ಮ ಸರಕಾರ ಹಿಂದೂಗಳ ಪರವಾಗಿ ಇಲ್ಲವೆಂದು ಘೋಷಿಸಲಿ; ಹಿಂದೂಗಳು ಸ್ವಯಂ ರಕ್ಷಣೆ ಮಾಡಿಕೊಳ್ಳಬೇಕೆಂದು ಪ್ರಕಟಿಸಲಿ ಎಂದು ಒತ್ತಾಯಿಸಿದರು.












Click it and Unblock the Notifications