MUDA Scam: ಮುಡಾ ಜಮೀನಿನಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ: ಬಿಜೆಪಿ ನಾಯಕರ ವಿರುದ್ಧ ಗರಂ ಆದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 26: ಇಪ್ಪತ್ತು ವರ್ಷಗಳಿಂದ ಯಾವುದೇ ಆಕ್ಷೇಪ ಎತ್ತದ ವ್ಯಕ್ತಿಗಳನ್ನು ಎತ್ತಿ ಕಟ್ಟಿ ಹಕ್ಕುದಾರ ಎಂದು ಹೇಳಿ ರಾಜಕೀಯ ನಡೆಸುತ್ತಿರುವ ಬಿಜೆಪಿಯವರದು ಮನೆಮುರುಕ ರಾಜಕೀಯ. ಮುಡಾ ಜಮೀನು ಖರೀದಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜೆಡಿಎಸ್‌ಗಳೆರಡೂ ಸೇರಿಕೊಂಡು ನನ್ನ ಜೀವಮಾನದಲ್ಲೆ ಕಾಣದಷ್ಟು ಕೆಟ್ಟ ರಾಜಕಾರಣವನ್ನು ಮಾಡುತ್ತಿವೆ. ವಿಚಾರವೇ ಇಲ್ಲದೆ ವೈಯಕ್ತಿಕವಾಗಿ ತೇಜೋವಧೆ ಮಾಡುವ ಕೆಲಸವನ್ನು ಮಾಡುತ್ತಿವೆ. ಕರ್ನಾಟಕದಲ್ಲಿ ಕುಸಿದು ಹೋಗುತ್ತಿರುವ ಜನಪ್ರಿಯತೆಯನ್ನು ಮರುಸ್ಥಾಪಿಸಿಕೊಳ್ಳಲು ಸಾವಿರ ಸಲ ಸುಳ್ಳು ಹೇಳಿದರೆ ನಿಜವೂ ಸುಳ್ಳಿನಂತೆ ಆಗುತ್ತದೆ ಎಂಬ ಹಿಟ್ಲರ್‌ವಾದಿ ಹಾಗೂ ಭಾರತದ ಸಂದರ್ಭದಲ್ಲಿ ಪೇಶ್ವೆವಾದಿ ಮನಸ್ಥಿತಿಯನ್ನು ಬಿಜೆಪಿಯವರು ಹೊಂದಿದ್ದಾರೆ. ಅದನ್ನು ನಮ್ಮ ರಾಜ್ಯದಲ್ಲಿ ಪ್ರತಿಪಾದಿಸುತ್ತಿದ್ದಾರೆ.

ಹಿಂದೆ ದೇವರಾಜ ಅರಸರ ವಿಚಾರದಲ್ಲೂ ಹೀಗೆ ಆಯಿತು. ಧರ್ಮಸಿಂಗ್ ಅವರ ವಿಚಾರದಲ್ಲೂ ಹೀಗೆ ಆಯಿತು. ಅದಕ್ಕೂ ಮೊದಲು ಕಲ್ಯಾಣದ ಬಿಜ್ಜಳನನ್ನು ಇದೆ ಪೇಶ್ವೆ ಮನಸ್ಥಿತಿಯ ಜನರೆ ಕೊಲೆ ಮಾಡಿದರು. ಈಗ ನನ್ನ ವಿಚಾರಕ್ಕೂ ಬಂದಿದ್ದೀರಿ. ಅಡ್ಡಿಯಿಲ್ಲ ಬನ್ನಿ, ಬಂದದ್ದು ಒಳ್ಳೆಯದೆ ಆಯಿತು. ರಾಜ್ಯದ ಜನ ನೋಡುತ್ತಿದ್ದಾರೆ. ದಮನಿತ ವರ್ಗಗಳ ಜನಸಮೂಹದಿಂದ ಬಂದವರು ರಾಜಕಾರಣವನ್ನೆ ಮಾಡಬಾರದೆಂಬ ನಿಲುವು ಇವರದು. ಆದ್ದರಿಂದಲೆ ಈ ರೀತಿ ಮುಡಾ ವಿಚಾರದಲ್ಲಿ ಒಂದು ಗುಲಗಂಜಿಯಷ್ಟು ನ್ಯೂನ್ಯತೆಯಿಲ್ಲದಿದ್ದರೂ ದೊಡ್ಡ ಸುದ್ದಿ ಮಾಡಿಕೊಂಡು ಕೂತಿದ್ದಾರೆ.
ನಿಮ್ಮ ಹಿಂದೆ ನಿಂತು ಆಟ ಆಡುತ್ತಿರುವ ಸೈದ್ಧಾಂತಿಕ ಗುರುಗಳಿಗೆ ಕರ್ನಾಟಕದ ಜನರ ಮನಸ್ಥಿತಿ ಅರ್ಥವಾಗುತ್ತಿದೆ. ಜನ ನಮ್ಮಿಂದ ದೂರ ಸರಿಯುತ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ. ಆದ್ದರಿಂದಲೆ ಕಾಗಕ್ಕ-ಗೂಬಕ್ಕನ ಕಥೆ ಕಟ್ಟಿ ಜನರನ್ನು ನಂಬಿಸಲು ಹೊರಟಿದ್ದಾರೆ. ಬಿಜೆಪಿ- ಜೆಡಿಎಸ್‌ನವರ ಮೆದುಳು ಖಾಲಿಯಾಗಿದೆ. ಬೌದ್ಧಿಕವಾಗಿ ದಿವಾಳಿಯಾಗಿದ್ದಾರೆ. ಹಾಲಿನ ರೇಟು ಹೆಚ್ಚು ಮಾಡಲಿಲ್ಲ ಎಂದು ತಿಳಿಸಿ ಹೇಳಿದರೂ ಹಾಲಿನ ರೇಟು ಹೆಚ್ಚು ಮಾಡಿದರು.
ವಾಲ್ಮೀಕಿ ಹಗರಣದಲ್ಲಿ ಮುಖ್ಯಮಂತ್ರಿಗಳ ಪಾತ್ರ ನಯಾಪೈಸೆಯಷ್ಟು ಇರುವುದಿಲ್ಲವೆಂದು ಬಿಡಿಸಿ ಹೇಳಿದರೂ, ದಾಖಲೆಗಳನ್ನು ಕೊಟ್ಟರೂ ನಂಬಲು ತಯಾರಿಲ್ಲ. ಮೈಸೂರು ಮುಡಾದ ವಿಚಾರದಲ್ಲಿಯೂ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಸದನದಲ್ಲಿ ಗಲಾಟೆ ಮಾಡಿದ್ದು, ಅಸಂಸದೀಯವಾಗಿ ನಡೆದುಕೊಂಡಿದ್ದು, ಸಾರ್ವಜನಿಕರ ಹಣ ಪೋಲು ಮಾಡಿದ್ದು ಬಿಟ್ಟರೆ ಒಂದೇ ಒಂದು ದಾಖಲೆ ನೀಡಲಿಲ್ಲ. ದಾಖಲೆ ನೀಡದೆ, ಏನಾದರೂ ದಾಖಲೆಗಳಿದ್ದರೆ ಅವುಗಳನ್ನು ಬಿಡುಗಡೆ ಮಾಡದೆ ಬರೀ ಜಕ್ಕರಾಯನಕೆರೆ ಭಾಷಣ ಮಾಡುವುದು, ಅವರು ಭಾಷಣ ಮಾಡುವುದನ್ನು ನೀವು ವರದಿ ಮಾಡುವುದನ್ನು ಬಿಟ್ಟರೆ ಬೇರೆ ಏನಾದರೂ ನಡೆಯಿತಾ? ಎಂದು ಪ್ರಶ್ನಿಸಿದರು.
ನಾನೂ ಕೂಡ ವಿರೋಧ ಪಕ್ಷದ ನಾಯಕನಾಗಿ ಸುದೀರ್ಘ ಅವಧಿ ಕೆಲಸ ಮಾಡಿದ್ದೇನೆ. ದಾಖಲೆಗಳಿಲ್ಲದೆ ಒಂದೇ ಒಂದು ಮಾತನ್ನು ನಾನು ಆಡಿಲ್ಲ. ಆದರೆ ಬಿಜೆಪಿ ಜೆಡಿಎಸ್‌ನವರು ಯಾವುದೇ ದಾಖಲೆಗಳಿಲ್ಲದೆ ಎರಡು ವಾರಗಳ ಕಾಲ ಸದನವನ್ನು ದಿಕ್ಕುತಪ್ಪಿಸಿದರು. ಸಂಸದೀಯ ಪ್ರಜಾಪ್ರಭುತ್ವವು ಯಾವುದಕ್ಕೆ ಮಾದರಿಯಾಗಬಾರದೊ ಅದಕ್ಕೆ ಬಿಜೆಪಿಯವರು ಮಾದರಿಯಾದರು. ಇಂಥ ಬೇಜವಾಬ್ಧಾರಿ ಮತ್ತು ಚೈಲ್ಡಿಷ್ ವರ್ತನೆಯ ವಿರೋಧ ಪಕ್ಷವನ್ನು ನಾನು ನೋಡಿಯೇ ಇಲ್ಲ.
ಜನ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಮನುವಾದವನ್ನು ತಿರಸ್ಕರಿಸಲು ಪ್ರಾರಂಭಿಸಿದ್ದಾರೆ. ಇದು ನಿಮಗೂ ಅರ್ಥವಾಗುತ್ತಿದೆ. ದಿನದಿಂದ ದಿನಕ್ಕೆ ಇವರ ಮತಗಳಿಕೆ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿಯೆ ಮುಖ್ಯಮಂತ್ರಿಯವರನ್ನು ಕೇಂದ್ರದಲ್ಲಿಟ್ಟುಕೊಂಡು ವೈಯಕ್ತಿಕ ದಾಳಿ ಪ್ರಾರಂಭಿಸಿದ್ದಾರೆ. ಒಳ್ಳೆಯದೆ ಯಾವುದೂ ಗಾಯದ ರೂಪದಲ್ಲೆ ಉಳಿಯಬಾರದು. ಗಾಯದ ಒಳಗಿರುವ ಕೆಟ್ಟ ರಕ್ತ ಒಡೆದು ಹೊರ ಬರಬೇಕು. ಆಗಲೇ ಮನುಷ್ಯ ಆರೋಗ್ಯವಂತನಾಗುವುದು. ಹಾಗೆಯೆ ಬಿಜೆಪಿ-ಜೆಡಿಎಸ್‌ನವರ ಕೋಮುವಾದಿ-ಫ್ಯೂಡಲ್ ತಲೆಯೊಳಗೂ ದ್ವೇಷ, ಅಸಹನೆ ಎಂಬ ಕೀವು-ಕೆಟ್ಟ ರಕ್ತ ತುಂಬಿದೆ. ಅದು ಒಡೆದು ಹೊರ ಬರಬೇಕು ಎಂದು ಹೇಳಿದರು.












Click it and Unblock the Notifications