ಮೋದಿಯಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ; ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 10; "ಸ್ವತಂತ್ರ ಭಾರತದಲ್ಲಿ ನರೇಂದ್ರ ಮೋದಿ ಅವರಷ್ಟು ಸುಳ್ಳು ಹೇಳಿದ ಪ್ರಧಾನಿ ಯಾರೂ ಇಲ್ಲ. ಅವರು ಈ ಹಿಂದೆ ನೀಡಿದ್ದ ಭರವಸೆಗಳಾದ ರೈತರ ಆದಾಯ ದುಪ್ಪಟ್ಟು ಮಾಡುವ ಬಗ್ಗೆ, ಭ್ರಷ್ಟಾಚಾರ ತೊಲಗಿಸುವ ಬಗ್ಗೆ, ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬಗ್ಗೆ ಮಾತನಾಡಬೇಕಿತ್ತು" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದರು.
ಗುರುವಾರ ಪ್ರದೇಶ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ನಲಪಡ್ ಅಧಿಕಾರ ಸ್ವೀಕಾರ ಮಾಡಿದರು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಿದ್ದರಾಮಯ್ಯ, "ಸಬ್ ಕ ಸಾಥ್ ಸಬ್ ಕ ವಿಕಾಸ್ ಎಲ್ಲಿದೆ?. ಇದೇ ಕಾರಣಕ್ಕೆ ಬಜೆಟ್ ಬಗ್ಗೆ ಮಾತನಾಡುವಾಗ ನಾನು ನರೇಂದ್ರ ಮೋದಿ ಅವರದ್ದು ಸಬ್ ಕ ವಿನಾಶ್ ಸರ್ಕಾರ ಎಂದು ಹೇಳಿದ್ದೆ" ಎಂದರು.
"ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ನಂತರ ದೇಶದ ಮಹಿಳೆಯರು, ದಲಿತರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ. ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾದ ಹೊಣೆ ಕಾಂಗ್ರೆಸ್ ಪಕ್ಷದ ಮೇಲಿದೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಜನತೆ ತಮ್ಮ ಮೇಲಿರುವ ಈ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು" ಎಂದು ಕರೆ ನೀಡಿದರು.
"ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಜನಪರವಾಗಿ ಕೆಲಸ ಮಾಡಿಲ್ಲ, ನುಡಿದಂತೆ ನಡೆದಿಲ್ಲ. ಇದರ ಬದಲು ಭಾವನಾತ್ಮಕ ವಿಚಾರಗಳನ್ನು ಜನರ ಮುಂದೆ ಇಟ್ಟು ಜಾತಿ, ಧರ್ಮದಾರಿತ ದ್ವೇಷವನ್ನು ಜನರ ನಡುವೆ ಭಿತ್ತಿ ಸಮಾಜದ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಮಾತ್ರವಲ್ಲ ರಾಜ್ಯದಲ್ಲೂ ಅಭಿವೃದ್ಧಿ ಕೆಲಸಗಳು ನಿಂತುಹೋಗಿವೆ, ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಹಿಜಾಬ್ ಹಾಕುವುದನ್ನೇ ವಿವಾದವಾಗಿ ಮಾರ್ಪಾಡು ಮಾಡಿದ್ದಾರೆ" ಎಂದು ಸಿದ್ದರಾಮಯ್ಯ ದೂರಿದರು.

ನಾನೆಲ್ಲೂ ನೋಡಿರಲಿಲ್ಲ
"ಈ ಹಿಜಾಬ್ ಅನ್ನು ಮುಸ್ಲಿಂ ಹೆಣ್ಣು ಮಕ್ಕಳು ಬಹಳ ವರ್ಷಗಳಿಂದ ಹಾಕುತ್ತಾ ಬಂದಿದ್ದರು. ಆದರೂ ಅದರ ಬಗ್ಗೆ ತಕರಾರು ತೆಗೆದು ತಮ್ಮ ಮತ ಕ್ರೋಢೀಕರಣಕ್ಕಾಗಿ ದುಷ್ಟ ಪ್ರಯತ್ನ ಮಾಡುತ್ತಿದ್ದಾರೆ. ನಾವು ಶಾಲೆ, ಕಾಲೇಜಿಗೆ ಹೋಗುವಾಗ ಕೇಸರಿ ಶಾಲು ಧರಿಸಿ ಬಂದಿದ್ದನ್ನು ನಾನೆಲ್ಲೂ ನೋಡಿರಲಿಲ್ಲ, ಆದರೆ ಈಗ ಸಂಘ ಪರಿವಾರದವರು ತಾವೇ ಕೇಸರಿ ಶಾಲು ಖರೀದಿ ಮಾಡಿ ವಿದ್ಯಾರ್ಥಿಗಳಿಗೆ ಬಲವಂತವಾಗಿ ಧರಿಸಿಕೊಂಡು ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ದೇಶಕ್ಕೆ ಅವಮಾನ ಮಾಡಿದ್ದಾರೆ
"ಒಬ್ಬ ಸರ್ಕಾರಿ ಕಾಲೇಜು ಪ್ರಿನ್ಸಿಪಾಲ್ ಹಿಜಾಬ್ ಧರಿಸಿದ ಹೆಣ್ಣು ಮಕ್ಕಳನ್ನು ಒಳಗೆ ಬಿಡದೆ ಕಾಲೇಜು ಗೇಟ್ ಹಾಕ್ತಾರೆ ಎಂದರೆ ಇದಕ್ಕಿಂತ ಅಮಾನವೀಯವಾದುದ್ದು ಏನಿದೆ?. ಸಂವಿಧಾನದಲ್ಲಿ ನಂಬಿಕೆ ಇದ್ದರೆ ಸರ್ಕಾರ ಕೂಡಲೇ ಇವರನ್ನು ಅಮಾನತು ಮಾಡಬೇಕಿತ್ತು. ಸಮವಸ್ತ್ರದ ಹೆಸರಲ್ಲಿ ವಿದ್ಯಾರ್ಥಿಗಳ ಮನಸಲ್ಲಿ ದ್ವೇಷ ತುಂಬಿ ಅವರ ಭವಿಷ್ಯ ಹಾಳುಮಾಡಲು ಹೊರಟಿದ್ದಾರೆ. ರಾಷ್ಟ್ರ ಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುವ ಮೂಲಕ ದೇಶಕ್ಕೆ ಅವಮಾನ ಮಾಡಿದ್ದಾರೆ" ಎಂದರು.
"ಕೆಂಪುಕೋಟೆ ಮೇಲೆ ಮುಂದೊಂದು ದಿನ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎನ್ನುವವರು ಸಾರ್ವಜನಿಕ ಜೀವನದಲ್ಲಿ ಇರಲು ನಾಲಾಯಕ್ ಗಳು. ದೇಶದ ಬಗ್ಗೆ ಇವರಿಗೆ ಗೌರವ ಎಲ್ಲಿದೆ?" ಎಂದು ಸಚಿವ ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದರು.

ನಿರುದ್ಯೋಗ ಸಮಸ್ಯೆ ಕಂಡಿರಲಿಲ್ಲ
"ಎನ್. ಸಿ. ಆರ್. ಬಿ ವರದಿ ಪ್ರಕಾರ ದೇಶದಲ್ಲಿ16,000 ಯುವ ಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶ ಯಾವತ್ತು ಇಷ್ಟು ದೊಡ್ಡ ಪ್ರಮಾಣದ ನಿರುದ್ಯೋಗ ಸಮಸ್ಯೆ ಕಂಡಿರಲಿಲ್ಲ. ಇದಕ್ಕೆ ಪ್ರಧಾನಿಗಳು ಉತ್ತರ ಕೊಡಬೇಕೋ?, ಬೇಡ್ವೋ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
"ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಕೊನೆಯ ವರ್ಷದ ವರೆಗೆ ದೇಶದ ಮೇಲಿದ್ದ ಒಟ್ಟು ಸಾಲ ರೂ. 53 ಲಕ್ಷ ಕೋಟಿ. ಈಗಿನ ಒಟ್ಟು ಸಾಲ 135 ಲಕ್ಷ ಕೋಟಿ ರೂಪಾಯಿ. ಅಂದರೆ ಮೋದಿ ಅವರು ಪ್ರಧಾನಿಯಾಗಿ ಕೇವಲ ಏಳೇ ವರ್ಷಗಳಲ್ಲಿ ಮಾಡಿರುವ ಒಟ್ಟು ಸಾಲ ರೂ. 82 ಲಕ್ಷ ಕೋಟಿ. ಮುಂದಿನ ವರ್ಷ ಮತ್ತೆ 11 ಲಕ್ಷ ಕೋಟಿ ರೂಪಾಯಿ ಸಾಲ ಮಾಡುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಒಟ್ಟಿನಲ್ಲಿ ದೇಶವನ್ನು ಹಾಳು ಮಾಡಿದ್ದಾರೆ" ಎಂದು ದೂರಿದರು.

ಮೋದಿ ಅಧಿಕಾರ ಬಿಟ್ಟು ಹೋಗಬೇಕು
"ದೇಶದ ಬಗ್ಗೆ ಮೋದಿ ಅವರಿಗೆ ಗೌರವ ಇದ್ದರೆ ತಾವಾಗಿಯೇ ಅಧಿಕಾರ ಬಿಟ್ಟು ಹೋಗಬೇಕು. ಯುವ ಜನರು ಹೋರಾಟಕ್ಕೆ ಸಿದ್ಧರಾಗಬೇಕು. ಮುಂದಿನ ವರ್ಷ ಚುನಾವಣೆ ಬರಲಿದೆ, ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಬೇಕು ಎನ್ನುವುದಕ್ಕಿಂತ ಬಿಜೆಪಿಯವರ ದುರಾಡಳಿತದಿಂದ ರಾಜ್ಯವನ್ನು ರಕ್ಷಿಸಬೇಕಾಗಿದೆ. ಹೀಗಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಇದರಲ್ಲಿ ಯುವ ಕಾಂಗ್ರೆಸ್ ನ ಪಾತ್ರ ಬಹಳ ದೊಡ್ಡದಿದೆ. ಜನ ಬಿಜೆಪಿ ಅನ್ನು ಅಧಿಕಾರದಿಂದ ಕಿತ್ತೆಸಬೇಕು ಎಂದು ತೀರ್ಮಾನ ಮಾಡಿರುವ ಈ ಸಮಯದಲ್ಲಿ ಮತ್ತೆ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಚುನಾವಣೆ ಎದುರಿಸಲು ಅವರು ಹೊರಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ನಾವೆಲ್ಲ ಒಗ್ಗೂಡಿ ಜನರನ್ನು ಜಾಗೃತಗೊಳಿಸಬೇಕು" ಎಂದು ಸಿದ್ದರಾಮಯ್ಯ ಕರೆ ನೀಡಿದರು.












Click it and Unblock the Notifications