ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣ ಬೇಡ, ರಾಜ್ಯದ ಹಿತ ಕಾಯಲು ಸರ್ಕಾರ ಬದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್

ಮೈಸೂರು, ಆಗಸ್ಟ್ 29: ಕಾವೇರಿ ನೀರಿನ ವಿಚಾರದಲ್ಲಿ ರಾಜಕಾರಣ ಬೇಡ. ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದ್ದು, ರಾಜ್ಯದ ರೈತರು ಹಾಗೂ ಜನರ ಹಿತ ಕಾಯಲು ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಹಾಗೂ ನೀರಾವರಿ ಸಚಿವರಾದ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯ ನಿರ್ಧಾರದ ಬಗ್ಗೆ ಮಾಧ್ಯಮಗಳು ಮೈಸೂರಿನಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

"ಬಿಳಿಗುಂಡ್ಲುವಿಗೆ 5 ಸಾವಿರ ಕ್ಯೂಸೆಕ್ಸ್ ನೀರು ಹರಿಯಬೇಕು ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಈ ವಿಚಾರದಲ್ಲಿ ನಾವು ತೀವ್ರವಾಗಿ ಹೋರಾಟ ಮಾಡಿದ್ದೇವೆ. ನಮ್ಮ ತಾಂತ್ರಿಕ ಸಿಬ್ಬಂದಿ ಹಾಗೂ ಸಮಿತಿಯಲ್ಲಿ ಇರುವ ಅಧಿಕಾರಿಗಳು ಕಾವೇರಿ ನೀರಿನ ಪರಿಸ್ಥಿತಿಯನ್ನು ಮನವರಿಕೆ ಮಾಡಿದ್ದಾರೆ. ಈ ವಿಚಾರವಾಗಿ ಕೂಡಲೇ ನಾನು ಹಾಗೂ ಮುಖ್ಯಮಂತ್ರಿಗಳು ಕಾನೂನು ತಜ್ಞರ ಬಳಿ ಚರ್ಚೆ ನಡೆಸುತ್ತೇವೆ.

cauvery-water-issue-dcm-dk-shivakumar

ಸೆ.1 ಶುಕ್ರವಾರದಂದು ಸುಪ್ರೀಂ ಕೋರ್ಟ್ ಕಾವೇರಿ ನೀರಿನ ವಿಚಾರವಾಗಿ ಮತ್ತೊಮ್ಮೆ ತೀರ್ಪು ನೀಡಲಿದೆ. ಅಧಿಕಾರಿಗಳು ಕರ್ನಾಟಕದ ಹಿತಕ್ಕೆ ಧಕ್ಕೆಯಾಗದಂತೆ ರಾಜ್ಯದ ಹಿತ ಕಾಪಾಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ. ನಾವು ಸಹ ಅಡ್ವೋಕೇಟ್ ಜನರಲ್ ಹಾಗೂ ಕಾನೂನು ತಜ್ಞರ ಬಳಿ ಮಾತನಾಡುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯದ ಹಿತಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ.

ಆ.31ರ ವರೆಗೆ ನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಹೇಳಿದ್ದಾರೆ. ಕೆಆರ್‌ಎಸ್ ಗರಿಷ್ಠ ಮಟ್ಟ 24 ಟಿಎಂಸಿ ಅದರಲ್ಲಿ 15 ಟಿಎಂಸಿ ಲಭ್ಯವಿದೆ. ಕಬಿನಿ ಗರಿಷ್ಠ ಮಟ್ಟ 13 ಟಿಎಂಸಿಯಲ್ಲಿ 3 ಟಿಎಂಸಿ ಇದೆ. ಹಾರಂಗಿಯಲ್ಲಿ 7.8 ಟಿಎಂಸಿಯಲ್ಲಿ 7 ಟಿಎಂಸಿ ಲಭ್ಯವಿದೆ ಮತ್ತು ಹೇಮಾವತಿಯ ಗರಿಷ್ಠ 25 ಟಿಎಂಸಿಯಲ್ಲಿ 21 ಟಿಎಂಸಿ ಲಭ್ಯವಿದೆ.

ತಮಿಳುನಾಡಿನವರು ಆಕ್ರಮಣಕಾರಿಯಾಗಿ ತಮ್ಮ ವಾದ ಮಂಡಿಸಿದ್ದಾರೆ, ನಮ್ಮ ಅಧಿಕಾರಿಗಳು ಸಹ ಅಷ್ಟೇ ಸಮರ್ಥವಾಗಿ ನಿಭಾಯಿಸಿದ್ದಾರೆ. ಏಕೆಂದರೆ ಅವರು ಕೇಳಿದ್ದು 24 ಸಾವಿರ ಕ್ಯೂಸೆಕ್ಸ್, ಆಗಸ್ಟ್ ತಿಂಗಳ 28ರ ತನಕ 10 ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದು, ನಮಗೆ ಮಳೆ ಬಂದಿಲ್ಲ ಎಂದು ಮನವರಿಕೆ ಮಾಡಿದ ಪರಿಣಾಮ ನೀರು ಹರಿಸುವ ಪ್ರಮಾಣ 5 ಸಾವಿರ ಕ್ಯೂಸೆಕ್ಸ್‌ಗೆ ಇಳಿದಿದೆ."

ಆ.29 ರಿಂದಲೇ ನೀರು ಬಿಡಬೇಕೆ? ನೀವು ನೀರು ಬಿಡಲು ಆದೇಶ ನೀಡಿದ್ದೀರೆ ಎಂದು ಮಾಧ್ಯಮಗಳು ಕೇಳಿದಾಗ, "ಈಗ ತಾನೇ ತೀರ್ಪು ಬಂದಿದೆ, ಅದನ್ನು ನಾನು ಪರಿಶೀಲಿಸಬೇಡವೇ. ಈಗ ಕೆಆರ್‌ಎಸ್ ಬೀಗ ಯಾರ ಬಳಿ ಇದೆ? ಕೇಂದ್ರ ಸರ್ಕಾರದ ಬಳಿ ತಾನೇ? ನಮ್ಮ ಬಳಿ ಇದೆಯೇ? ಶುಕ್ರವಾರ ಸುಪ್ರೀಂ ಕೋರ್ಟಿನಲ್ಲಿ ಬೈಸಿಕೊಳ್ಳಲು ಇಷ್ಟವಿಲ್ಲ, ನಿಮಗೆ ಇಷ್ಟವಿದೆಯೇ?" ಎಂದು ತೀಕ್ಷ್ಣವಾಗಿ ಉತ್ತರಿಸಿದರು.

ಇಂಡಿಯಾ ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ರಾಜಿಯಾಗಿದೆ ಎಂದು ಸಿ.ಟಿ.ರವಿ ಆರೋಪ‌ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ "ನಾನು ನೀರಿನ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದೇನೆ. ಬಿಜೆಪಿಯವರು ತಮ್ಮ ಅಧಿಕಾರವಧಿಯಲ್ಲಿ ಎಷ್ಟು ನೀರು ಬಿಟ್ಟಿದ್ದಾರೆ ಎನ್ನುವ ದಾಖಲೆ ನನ್ನ ಬಳಿ ಇದೆ. ಅದನ್ನು ಹೊರಗಡೆ ಬಿಡಲೇ? ಸುಮ್ಮನೇ ರಾಜಕಾರಣ ಮಾಡುತ್ತಿದ್ದಾರೆ, ಅವರಿಗೆ ವಾಸ್ತವಾಂಶ ಅರಿವಿಲ್ಲವೇ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+