ಆಪರೇಷನ್ ಹಸ್ತದ ಸದ್ದು: ಲೋಕಸಭಾ ಸ್ಪರ್ಧೆ ಕುರಿತು ಎಸ್ ಟಿ ಸೋಮಶೇಖರ್ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 25: ಲೋಕಸಭಾ ಚುನಾವಣೆಗೆ ಆಡಳಿತರೂಢ ಕಾಂಗ್ರೆಸ್ ಪಕ್ಷ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದು, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಗೆ ಕಾಂಗ್ರೆಸ್ ಲೋಕಸಭಾ ಚುನಾವಣಾ ಟಿಕೆಟ್ ಆಫರ್ ನೀಡಿದೆ ಎನ್ನುವ ಚರ್ಚೆ ಹುಟ್ಟಿಕೊಂಡಿದ್ದು, ಈ ಬಗ್ಗೆ ಸ್ವತಃ ಎಸ್ ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಎಸ್ ಟಿ ಸೋಮಶೇಖರ್ ಮಾತನಾಡಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಆಸಕ್ತಿಯೂ ಇಲ್ಲ, ತಮ್ಮ ಪುತ್ರನೂ ಶಾಸಕರಾಗುವ ಆಸೆಯೂ ಇಲ್ಲ, ರಾಜಕಾರಣಿಯೂ ಆಗುವುದಿಲ್ಲ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಾನು ಯಾವುದೇ ಟಿಕೆಟ್ ಕೇಳಿಲ್ಲ. ನನ್ನ ಕೆಲವು ಕಾರ್ಯಕರ್ತರು ಬಿಟ್ಟು ಬೇರೆ ಪಕ್ಷ ಸೇರಿದ ಮಾತ್ರಕ್ಕೆ ನಾನು ಕೂಡ ಬಿಡುತ್ತೇನೆ ಎಂದಲ್ಲ. ಇಂತಹ ತೀರ್ಮಾನಕ್ಕೆ ಬರುವುದು ತಪ್ಪು ಎಂದು ಹೇಳಿದರು.
ಇನ್ನೂ ನಾನು ಬಿಜೆಪಿ ಬಿಡುತ್ತೇನೆ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಬಿಜೆಪಿ ಬಿಡುವ ಮನಸ್ಸಿಲ್ಲ. ವಿಧಾನಸಭೆ ಚುನಾವಣೆಯ ವೇಳೆಯಲ್ಲೂ ಇದೇ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದರು. ಇತ್ತೀಚೆಗೆ ಪಕ್ಷದಿಂದ ಅಮಾನತುಗೊಂಡ ವ್ಯಕ್ತಿ ಇದರ ಹಿಂದೆ ಇದ್ದರು. ಇನ್ನೂ ಕೆಲವರು ಇದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿದ್ದೇನೆ ಎಂದು ಹೇಳಿದರು.
ಇನ್ನೂ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ,ನಾನು ಬಿಜೆಪಿ ಪಕ್ಷದಲ್ಲಿಯೇ ಇದ್ದೇವೆ. ಪಕ್ಷದೊಳಗಿನ ತಮ್ಮ ಪ್ರತಿಸ್ಪರ್ಧಿಗಳು ಕಾಂಗ್ರೆಸ್‌ಗೆ ಸೇರುವ ಬಗ್ಗೆ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದರು. ಇನ್ನೂ ಎಸ್ ಟಿ ಸೋಮಶೇಖರ್ ಅವರ ಬಗ್ಗೆ ವದಂತಿಗಳು ಬಿಜೆಪಿಯೊಳಗಿನ ತಮ್ಮ ವಿರೋಧಿಗಳ ಕೈವಾಡವಿರಬಹುದು. ಏನು ಮಾತನಾಡಬೇಕು ಮತ್ತು ಯಾವಾಗ ಮಾತನಾಡಬೇಕು ಎಂದು ನಮಗೆ ತಿಳಿದಿದೆ. ಈ ಕ್ಷಣದಲ್ಲಿ ನಾವು ಇನ್ನೂ ಬಿಜೆಪಿಯಲ್ಲಿದ್ದೇವೆ ಎಂದು ಹೇಳಿದರು.
ಇನ್ನೂ ಬಿಜೆಪಿ ಶಾಸಕರಾದ ಎಸ್ ಟಿ ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಇಬ್ಬರು ನಾಯಕರೊಂದಿಗೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಆರ್ ಅಶೋಕ್ ಒಂದು ಗಂಟೆಗಳ ಕಾಲ ಚರ್ಚೆ ನಡೆಸಿ, ಅವರ ಸಮಸ್ಯೆಯನ್ನ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ.
ಇನ್ನೂ ಇಬ್ಬರು ನಾಯಕರ ಜೊತೆಗಿನ ಸಭೆಯ ಬಳಿಕ ಮಾಜಿ ಸಚಿವ ಆರ್ ಅಶೋಕ್ ಮಾತನಾಡಿ, ಸೋಮಶೇಖರ್ ಜತೆ ಸುದೀರ್ಥ ಮಾತುಕತೆ ನಡೆಸಿದ್ದೇನೆ. ಪಕ್ಷ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಅವರ ಕ್ಷೇತ್ರದಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಹೇಳಿ, 5-6 ಹೆಸರುಗಳನ್ನು ತಿಳಿಸಿದ್ದಾರೆ. ಅದನ್ನು ನಾನು ಪಕ್ಷದ ಅಧ್ಯಕ್ಷರ ಗಮನಕ್ಕೆ ತರುತ್ತೇನೆ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.












Click it and Unblock the Notifications