ಅವಧಿಗೂ ಮುನ್ನ ಲೋಕಸಭಾ ಚುನಾವಣೆ: ನಿಜವಾದೀತೇ ದೇವೇಗೌಡರ ಭವಿಷ್ಯ?
Recommended Video

ಬೆಂಗಳೂರು, ಜೂನ್ 28: 'ಕೇಂದ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಲಿವೆ. ಅವಧಿಗೂ ಮುನ್ನವೇ ಲೋಕಸಭಾ ಚುನಾವಣೆ ನಡೆಯಲಿದೆ' ಎಂಬ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಭವಿಷ್ಯ ನಿಜವಾಗಲಿದೆಯಾ?
ಇತ್ತೀಚೆಗೆ ದೆಹಲಿಗೆ ತೆರಳಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು ಪತ್ರಕರ್ತರೊಂದಿಗೆ ಮಾತನಾಡುವ ಸಮಯದಲ್ಲಿ, 'ಅವಧಿಗೂ ಮುನ್ನ ಲೋಕಸಭಾ ಚುನಾವಣೆಯಾಗುತ್ತದೆ. ಅದಕ್ಕೆಂದೇ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಈಗಾಗಲೇ ತಯಾರಿ ಆರಂಭವಾಗಿದೆ' ಎಂದಿದ್ದರು.
ಪೂರಕ ಬಜೆಟ್ ಬದಲಾಗಿ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಕುರಿತಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದ ದೇವೇಗೌಡರು ನಂತರ ನುಡಿದ ಭವಿಷ್ಯ ಹಲವು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಮಹಾಮೈತ್ರಿ ಸೂಚನೆ ನೀಡಿದ ದೇವೇಗೌಡರು
ಬಿಜೆಪಿಯನ್ನು ವಿರೋಧಿಸುವ ಎಲ್ಲಾ ಪಕ್ಷಗಳೂ ಒಂದಾಗಲಾರವು ಎಂಬ ವಿಶ್ವಾಸದಲ್ಲಿ ಬಿಜೆಪಿ ನಾಯಕರಿದ್ದಾರೆ. ಆದರೆ ಆ ಭಾವನೆ ಸುಳ್ಳು. ನಾವೆಲ್ಲರೂ ಒಂದಾಗುತ್ತೇವೆ. ನಾನೇ ಎಲ್ಲರನ್ನು ಒಂದು ಮಾಡಲು ಪ್ರಯತ್ನಿಸುತ್ತೇನೆ. ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದರೆ, ಉತ್ತರ ಪ್ರದೇಶದಲ್ಲಿ ಎಸ್ಪಿ, ಬಿಎಸ್ಪಿ, ಕಾಂಗ್ರೆಸ್ ಒಟ್ಟಾಗಲಿವೆ. ಬಿಹಾರದಲ್ಲಿ ಆರ್ ಜೆಡಿ, ಕಾಂಗ್ರೆಸ್ ಒಂದಾಗುತ್ತವೆ. ನಿತೀಶ್ ಕುಮಾರ್ ಅವರ ಜೆಡಿಯು ಸಹ ಬಿಜೆಪಿ ಜೊತೆ ಮೈತ್ರಿ ಮುರಿದುಕೊಳ್ಳಲು ಕಾಯುತ್ತಿದೆ. ಅತ್ತ ಕಾಶ್ಮೀರದಲ್ಲಿ ಸರ್ಕಾರ ಬಿದ್ದಿದೆ. ಒಟ್ಟಿನಲ್ಲಿ ಈ ಎಲ್ಲವೂ ಲೋಕಸಭಾ ಚುನಾವಣೆಗೂ ಮುನ್ನವೇ ರಾಷ್ಟ್ರ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುವ ಸೂಚನೆ ನೀಡಿದೆ ಎಂದು ಗೌಡರು ಹೇಳಿದ್ದಾರೆ.

ಗೌಡರ ಮಾತು ನಿಜವೇ?
ಅಷ್ಟಕ್ಕೂ ಗೌಡರು ನುಡಿದ ಭವಿಷ್ಯವನ್ನು ನಂಬಬೇಕೆ? ಲೋಕಸಭಾ ಚುನಾವಣೆ 2019 ರ ಏಪ್ರಿಲ್, ಮೇ ತಿಂಗಳಿನಲ್ಲಿ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಅದಕ್ಕೂ ಮುನ್ನ ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಆದರೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯ ಪ್ರಚಾರ ಎಂಬಂತೆ ನಿನ್ನೆ(ಜೂನ್ 28) ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದಾರೆ. ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷಗಳೆಲ್ಲ ಒಂದಾಗುತ್ತಿರುವ ಬಗ್ಗೆಯೂ ಕುಹಕದ ಮಾತುಗಳನ್ನಾಡಿದ್ದಾರೆ. ಇವೆಲ್ಲದರ ಅರ್ಥವೇನು?

ಲೋಕಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಮೈತ್ರಿ
ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿ ಎದುರಿಸುತ್ತೇವೆ. ಸೀಟು ಹಂಚಿಕೆಯ ಸಂದರ್ಭದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಮದು ದೇವೇಗೌಡರು ಹೇಳಿದ್ದಾರೆ. ಅಕಸ್ಮಾತ್ ದೇವೇಗೌಡರ ಈ ಮಾತು ನಿಜವೇ ಆದರೆ ರಾಜ್ಯದಲ್ಲಿ ಬಿಜೆಪಿಗೆ ಬಹುದೊಡ್ಡ ಹೊಡೆತ ಬೀಳಬಹುದು. ಮಂತ್ರಿಮಂಡಳ ರಚನೆ, ಖಾತೆ ಹಂಚಿಕೆ, ನಿಗಮ ಮಂಡಳಿಯಲ್ಲಿ ಸ್ಥಾನ ಸೇರಿದಂತೆ ಹಲವು ವಿಷಯಗಳಲ್ಲಿ ಈಗಾಗಲೇ ರಾಜ್ಯ ಮೈತ್ರಿ ಸರ್ಕಾರದಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಹೀಗಿರುವಾಗ ಲೋಕಸಭಾ ಚುನಾವಣೆಯಲ್ಲೂ ಮೈತ್ರಿ ಎಂದರೆ ರಾಜ್ಯ ನಾಯಕರು ಒಪ್ಪುತ್ತಾರಾ ಎಂಬುದು ಈಗಿರುವ ಪ್ರಶ್ನೆ.

ಜೆಡಿಎಸ್ ಪ್ರಾಬಲ್ಯ ಕೆಲವೆಡೆ ಮಾತ್ರ
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರಗಳನ್ನು ಬಿಟ್ಟರೆ ಬೇರೆ ಪ್ರದೇಶಗಳಲ್ಲಿ ಜೆಡಿಎಸ್ ಪ್ರಾಬಲ್ಯ ಅಷ್ಟಕ್ಕಷ್ಟೆ. ಈ ಎಲ್ಲಾ ಪ್ರದೇಶಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನೇ ನಿಲ್ಲಿಸದೆ, ಕಾಂಗ್ರೆಸ್ ಅನ್ನು ಬೆಂಬಲಸಿದರೆ ಕಾಂಗ್ರೆಸ್ಸಿಗೆ ಲಾಭ ಹೆಚ್ಚು. ಕರ್ನಾಟಕದಲ್ಲಿರುವ 28 ಲೋಕಸಭಾ ಕ್ಷೇತ್ರಗಳಲ್ಲಿ 2014 ರಲ್ಲಿ 17 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. 9 ರಲ್ಲಿ ಕಾಂಗ್ರೆಸ್, 2 ರಲ್ಲಿ ಜೆಡಿಎಸ್ ಜಯ ಸಾಧಿಸಿದ್ದವು. ಈ ಬಾರಿಯೂ ಅಂಥದೇ ಸಾಧನೆ ತೋರುವುದು ಬಿಜೆಪಿಗೆ ಅತೀ ಮುಖ್ಯವಾಗಿದೆ.












Click it and Unblock the Notifications