ಜೆಡಿಎಸ್ ನಲ್ಲಿ ಪ್ರಜ್ವಲ್ ರೇವಣ್ಣ ಒಬ್ಬರೇ ಆಶಾಕಿರಣ: ಸುಮಲತಾ
ಬೆಂಗಳೂರು, ಜುಲೈ 6: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ವಾಕ್ಸಮರದ ನಂತರ, ಸಂಸದೆ ಸುಮಲತಾ ಅಂಬರೀಶ್ ಮತ್ತೊಂದು ಸುತ್ತಿನ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
"ಬಳಸಬಾರದ ಪದಗಳನ್ನು ಬಳಸಿ ಹೇಳಿಕೆ ನೀಡುವುದು, ಮರುದಿನ ಅದಕ್ಕೆ ಸಮರ್ಥನೆ ನೀಡುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ಮಂಡ್ಯ ಲೋಕಸಭಾ ಚುನಾವಣೆಯ ವೇಳೆ ನಾಲ್ವರು ನಕಲಿ ಸುಮಲತಾ ಅವರನ್ನು ನಿಲ್ಲಿಸಿದರು, ಅವರ ಒಂದೊಂದು ಮಾತೂ ನಕಲಿನೇ"ಎಂದು ಸುಮಲತಾ ಬೇಸರ ವ್ಯಕ್ತ ಪಡಿಸಿದರು.
"ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ನಾನು ಹೋರಾಟ ಮಾಡುತ್ತಿದ್ದೇನೆ, ಅದು ಕೆಲವರಿಗೆ ಸಹ್ಯವಾಗುತ್ತಿಲ್ಲ. ನನ್ನ ವಿರುದ್ದ ಆ ರೀತಿಯ ಹೇಳಿಕೆಯನ್ನು ನೀಡಿದರೆ ಹೆದರುವ ಗೌಡ್ತಿ ನಾನಲ್ಲ"ಎಂದು ಸುಮಲತಾ ಅವರು ಕುಮಾರಸ್ವಾಮಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

"ಕುಮಾರಸ್ವಾಮಿಯವರು ತಮ್ಮದೇ ಪಕ್ಷದ ಪ್ರಜ್ವಲ್ ರೇವಣ್ಣ ಅವರನ್ನು ನೋಡಿ ಕಲಿಯಲಿ. ಜೆಡಿಎಸ್ ಪಕ್ಷದಲ್ಲಿ ಪ್ರಜ್ವಲ್ ಒಬ್ಬರೇ ಉಳಿದಿರುವ ಆಶಾಕಿರಣ. ಸಣ್ಣ ವಯಸ್ಸಿನಲ್ಲೂ ಪ್ರಜ್ವಲ್ ಪ್ರಬುದ್ದತೆಯನ್ನು ತೋರುತ್ತಿದ್ದಾರೆ"ಎಂದು ಸುಮಲತಾ ಹೇಳಿದರು.
"ಲೋಕಸಭೆಯಲ್ಲಿ ಮಾತನಾಡುವಾಗ ಪ್ರಜ್ವಲ್ ತುಂಬಾ ತೂಕವಾಗಿ ಮಾತನಾಡುತ್ತಾರೆ, ವಿಧೇಯತೆಯಿಂದ ನಡೆದುಕೊಳ್ಳುತ್ತಾರೆ. ಹಿರಿಯರ ಜೊತೆ ಹೇಗೆ ಇರಬೇಕು ಎನ್ನುವುದು ಅವರಿಗೆ ಅರಿತಿದೆ. ಸ್ವಲ್ಪ ಅವರು ಇವರನ್ನು ಕಲಿತುಕೊಳ್ಳಲಿ"ಎಂದು ಸುಮಲತಾ ಅವರು ಕುಮಾರಸ್ವಾಮಿಗೆ ಸಲಹೆಯನ್ನು ನೀಡಿದರು.
"ಆಡಿಯೋ, ವಿಡಿಯೋ ಬಾಂಬ್ ಇದೆ ಎಂದು ನನ್ನನ್ನು ಬೆದರಿಸಲು ಸಾಧ್ಯವಿಲ್ಲ. ಅದನ್ನು ಬಿಡುಗಡೆ ಮಾಡಿ, ನಾನು ಕಾಯುತ್ತಿದ್ದೇನೆ, ನಿಮಗೆ ಚಾಲೆಂಜ್ ಮಾಡುತ್ತಿದ್ದೇನೆ"ಎಂದು ಸುಮಲತಾ ಅಂಬರೀಶ್ ಅವರು ಕುಮಾರಸ್ವಾಮಿಗೆ ಸವಾಲು ಎಸೆದರು.












Click it and Unblock the Notifications