2 ದಶಕದಲ್ಲೇ ಅಕ್ಟೋಬರ್‌ನಲ್ಲಿ ಅತ್ಯಧಿಕ ಮಳೆ, ಇನ್ನೂ ಎಷ್ಟು ದಿನ ಇರುತ್ತೆ?
ಬೆಂಗಳೂರು, ಅಕ್ಟೋಬರ್ 24: ಕಳೆದ ಎರಡು ದಶಕಗಳಲ್ಲೇ ಈ ತಿಂಗಳ ಮಳೆ ದಾಖಲಾಗಿದೆ.
ಅಕ್ಟೋಬರ್ ಮಾಸಕ್ಕೆ ಸೀಮಿತವಾದಂತೆ ಕಳೆದ ಎರಡು ದಶಕಗಳ ಅತಿದೊಡ್ಡ ಮಳೆಯನ್ನು ಈ ವರ್ಷ ರಾಜ್ಯ ಕಂಡಿದೆ.
ಅಷ್ಟೇ ಅಲ್ಲ ಅಕ್ಟೋಬರ್ ಮಾಸದ ಮೂರನೇ ವಾರದಲ್ಲಾಗುವ ಮಳೆಯನ್ನು ಪರಿಗಣನೆಗೆ ತೆಗೆದುಕೊಂಡರೆ ಈ ಬಾರಿ ಸುರಿದ ಮಳೆ ಕಳೆದ 48 ವರ್ಷಗಳ ಎರಡನೇ ಅತಿದೊಡ್ಡ ಮಳೆಯಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಅಕ್ಟೋಬರ್‌ನಲ್ಲಿ ಮಳೆ ಎಷ್ಟಾಗಿದೆ?
ಕೆಎಸ್‌ಎನ್‌ಡಿಎಂಸಿ ಪ್ರಕಾರ ಈ ವರ್ಷದ ಅಕ್ಟೋಬರ್ 1ರಿಂದ 21ರವರೆಗೆ 166 ಮಿ.ಮೀ ಮಳೆಯಾಗಿದ್ದು, ಇದು ವಾಡಿಕೆಗಿಂತ 63 ಪಟ್ಟು ಅಧಿಕ ಹಾಗೂ ಎರಡು ದಶಕಗಳ ದಾಖಲೆ ಆಗಿದೆ.
ಈ ಬಾರಿ ಸುರಿದ ಪ್ರಮಾಣಕ್ಕಿಂತ ಹೆಚ್ಚಿನ ಮಳೆ 1999ರಲ್ಲಿ ಆಗಿತ್ತು. ಆ ವರ್ಷ ವಾಡಿಕೆಗಿಂತ ಶೇ.88ರಷ್ಟು ಹೆಚ್ಚು ಮಳೆಯಾಗಿತ್ತು. ಇನ್ನು ಅಕ್ಟೋಬರ್ ಮೂರನೇ ವಾರದಲ್ಲಿ ಅ.15-21ರವರೆಗೆ ಸುರಿದ ಮಳೆಗೆ ಎರಡೇ ಅತಿ ಹೆಚ್ಚು ಮಳೆಯಾಗಿತ್ತು. ಅಕ್ಟೋಬರ್ ಮೂರನೇ ವಾರದಲ್ಲಿ 68ಮಿ.ಮೀ ಮಳೆಯಾಗಿದೆ. ಇದಕ್ಕೂ ಮುನ್ನ ಅಂದರೆ 1993ರಲ್ಲಿ ಈ ಅವಧಿಯಲ್ಲಿ ಈ ಪ್ರಮಾಣಕ್ಕಿಂತ ಹೆಚ್ಚಿನ ಮಳೆಯಾಗಿತ್ತು.

ಆರು ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ
ಅಕ್ಟೋಬರ್ 3ನೇ ವಾರದಲ್ಲಿ ಇಡೀ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದ್ದರೂ ಬೆಂಗಳೂರು ನಗರ, ಯಾದಗಿರಿ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೋಲಾರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಾಡಿಕೆ ಪ್ರಮಾಣಕ್ಕಿಂತ ಕಡಿಮೆ ಮಳೆಯಾಗಿದೆ. ಬೆಂಗಳೂರು ನಗರ ವಾಡಿಕೆಗಿಂತ ಶೇ.47ರಷ್ಟು ಕಡಿಮೆ, ಯಾದಗಿರಿ ಶೇ.44, ರಾಮನಗರ ಶೇ.26, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಶೇ.15, ರಾಯಚೂರು ಶೇ.6ರಷ್ಟು ಮಳೆ ಕೊರತೆ ಉಂಟಾಗಿದೆ. ಇನ್ನು ಅಕ್ಟೋಬರ್ ಇಡೀ ತಿಂಗಳ ಮಳೆ ಪ್ರಮಾಣ ಗಮನಿಸಿದರೆ, ಯಾದಗಿರಿ ಶೇ.47 ಹಾಗೂ ರಾಯಚೂರು ಶೇ.22ರಷ್ಟು ಮಳೆ ಕೊರತೆ ಎದುರಿಸಿವೆ ಎಂದು ಹೇಳಿದೆ.

ಚಂಡಮಾರುತ ಸಾಧ್ಯತೆ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಕಾರಣವಾದ ವಾಯುಭಾರ ಕುಸಿತ ಗುರುವಾರ ಚಂಡಮಾರುತವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅಲ್ಲದೆ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಅಬ್ಬರ ಕಡಿಮೆಯಾಗಿದೆ. ಆದರೆ ಕರಾವಳಿಯಲ್ಲಿ ಮಾತ್ರ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಅಕ್ಟೋಬರ್ 24 ಮತ್ತು 25ರಂದು ಮೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ರೆಡ್ ಅಲರ್ಟ್
ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಾಳೆಯಿಂದ ಶನಿವಾರದವರೆಗೂ ರೆಡ್ ಅಲರ್ಟ್ ಜಾರಿಯಲ್ಲಿದೆ. ಇತ್ತ ಮಹಾರಾಷ್ಟ್ರದಲ್ಲೂ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಧಾರಾಕಾರ ಮಳೆ ಆಗ್ತಿದ್ದು, ಉತ್ತರ ಕರ್ನಾಟಕಕ್ಕೆ ನೆರೆ ರಾಜ್ಯದಿಂದ ಹರಿದು ಬರುವ ನೀರಿನ ಪ್ರಮಾಣವೂ ಕೂಡ ಹೆಚ್ಚಾಗುತ್ತಿದೆ.












Click it and Unblock the Notifications