ಈ ರಾಜ್ಯ ಸರಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ; ಪರಿಹಾರ ಕೊಡುವ ಯಾವುದೇ ಕೆಲಸ ಮಾಡಿಲ್ಲ: ರಾಜೀವ್
ಬೆಂಗಳೂರು,ಡಿಸೆಂಬರ್ 29: ಈ ರಾಜ್ಯ ಸರಕಾರ ಇನ್ನೂ ನಿದ್ದೆಯಿಂದ ಎದ್ದಿಲ್ಲ. ಬರಗಾಲದ ಕಷ್ಟವನ್ನು ಅರ್ಥ ಮಾಡಿಕೊಂಡು ಪರಿಹಾರ ಕೊಡುವ ಯಾವುದೇ ಕೆಲಸ ಮಾಡಿಲ್ಲ. ಯಾವ ಸಚಿವರೂ ಜಿಲ್ಲೆಗಳಿಗೆ ಪ್ರವಾಸ ಮಾಡುತ್ತಿಲ್ಲ ಎಂದು ಮಾಜಿ ಶಾಸಕ ಪಿ ರಾಜೀವ್ ಹೇಳಿದರು.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬೊಕ್ಕಸ ಖಾಲಿಯಾಗಿದೆ. ಘೋಷಣೆ ಮಾಡಲು ನಮ್ಮ ಕೈಯಲ್ಲಿ ಏನೂ ಇಲ್ಲದ ಕಾರಣ ಪ್ರವಾಸ ಮಾಡುತ್ತಿಲ್ಲ ಎಂದು ಒಳಗಿನಿಂದ ಅವರು ಹೇಳುತ್ತಾರೆ. 'ಯಾವ ಮುಖವನ್ನು ಇಟ್ಟುಕೊಂಡು ಜನರ ಬಳಿ ಹೋಗಲು ಸಾಧ್ಯ' ಎನ್ನುತ್ತಿದ್ದಾರೆ. ಇದೇರೀತಿ ಆದರೆ, ಲೋಕಸಭಾ ಚುನಾವಣೆ ವೇಳೆ ಜನರಿಗೆ ಮುಖ ತೋರಿಸಲು ಕಷ್ಟ ಎಂಬ ಪರಿಸ್ಥಿತಿಯಲ್ಲಿ ಈ ರಾಜ್ಯ ಸರಕಾರ ಇದೆ. ಸಚಿವರು ತಮ್ಮ ಅಸಹಾಯಕತೆಯನ್ನು ತೋರ್ಪಡಿಸುತ್ತಿದ್ದಾರೆ ಎಂದು ತಿಳಿಸಿದರು.

ಕೊಬ್ಬರಿ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿಜೀ ಅವರ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ಸಭೆ ಅಭಿನಂದಿಸಿದೆ. ಮಾನ್ಯ ರಾಜ್ಯಾಧ್ಯಕ್ಷರು ದೆಹಲಿಗೆ ಭೇಟಿ ನೀಡಿದಾಗ ಮಾನ್ಯ ಪ್ರಧಾನಮಂತ್ರಿಗಳಿಗೆ ಇದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಆ ಭಾಗದ ಜಿಲ್ಲೆಯ ಶಾಸಕರಾದ ಸುರೇಶ್ ಗೌಡ, ಪ್ರೀತಂ ಗೌಡ, ಮಸಾಲೆ ಜಯರಾಂ, ಬೆಳ್ಳಿ ಪ್ರಕಾಶ್, ಉಳ್ಳಾಡಿ ಸುರೇಶ್, ಸಂಸದರು- ಇವರೆಲ್ಲರೂ ಕೂಡ ರಾಜ್ಯಾಧ್ಯಕ್ಷರಿಗೆ ಮನವರಿಕೆ ಮಾಡಿಕೊಟ್ಟಿದ್ದರು.
ರಾಜ್ಯಾಧ್ಯಕ್ಷರು ಪ್ರಧಾನಮಂತ್ರಿಯವರಿಗೆ ಇಲ್ಲಿನ ರೈತರ ಸ್ಥಿತಿಗತಿಯನ್ನು ಮನವರಿಕೆ ಮಾಡಿಕೊಟ್ಟಿದ್ದರ ಪರಿಣಾಮವಾಗಿ ಕೊಬ್ಬರಿ ಬೆಂಬಲ ಬೆಲೆ ಘೋಷಣೆ ಆಗಲು ಸಾಧ್ಯವಾಗಿದೆ. ಇದಕ್ಕಾಗಿ ರಾಜ್ಯಾಧ್ಯಕ್ಷರು, ಆ ಭಾಗದ ಶಾಸಕರು, ಸಂಸದರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರಕಾರವು ಕಳೆದ 10 ವರ್ಷಗಳಲ್ಲಿ ಕೊಬ್ಬರಿಯ ಎಂಎಸ್‍ಪಿ ಬೆಲೆಯನ್ನು ಕ್ವಿಂಟಲ್‍ಗೆ ರೂ. 5250, ಕಿರಣಿ ಕೊಬ್ಬರಿಗೆ ಎಂಎಸ್‍ಪಿ ಬೆಲೆ 5500 ರೂ.ಗೆ ಏರಿಸಿರುವುದು ಆ ಭಾಗದ ತೆಂಗು ಬೆಳೆಗಾರರಲ್ಲಿ ದೊಡ್ಡ ಪ್ರೀತಿ, ವಿಶ್ವಾಸ ಹುಟ್ಟಿಸಿದೆ. ಬಿಜೆಪಿಯ ಕೇಂದ್ರ ಸರಕಾರ ಯಾವತ್ತೂ ರೈತರ ಪರವಾಗಿ, ತೆಂಗು ಬೆಳೆಗಾರರ ಪರವಾಗಿ ನಿಲ್ಲುತ್ತದೆ ಎಂದು ಸಾಬೀತಾಗಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ಎಲ್ಲ ಪ್ರಮುಖರ ಸಭೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಇಡೀ ರಾಜ್ಯದಲ್ಲಿ ಬಿಜೆಪಿಯ ಎಲ್ಲ ರೀತಿಯ ಬೆಳವಣಿಗೆಗಳ ಬಗ್ಗೆ ಸುದೀರ್ಘವಾದ ಚರ್ಚೆ ಆಗಿದೆ. ಎಲ್ಲ ಹಿರಿಯರು ಕೂಡ ಒಟ್ಟಾಗಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಕುರಿತು ಕಾರ್ಯತಂತ್ರವನ್ನು ರೂಪಿಸಲಾಗಿದೆ.
ಒಟ್ಟಾರೆ ಎಲ್ಲ ಬೆಳವಣಿಗೆಗಳನ್ನು ರಾಜ್ಯದ ಪ್ರಮುಖರು ಮತ್ತು ಕೇಂದ್ರದ ಪ್ರಮುಖರು ಅತ್ಯಂತ ಸೂಕ್ಷ್ಮವಾಗಿ ಗಮನಿಸುತ್ತ, ಎಲ್ಲ ವಿಚಾರಕ್ಕೂ ಸಮರ್ಪಕ ತೀರ್ಮಾನವನ್ನು ಎಲ್ಲ ಹಂತದಲ್ಲಿ ತೆಗೆದುಕೊಳ್ಳಲಿದ್ದಾರೆ ಎಂದು ನುಡಿದರು. 28ಕ್ಕೆ 28 ಲೋಕಸಭಾ ಕ್ಷೇತ್ರಗಳ ಗುರಿ ಎಲ್ಲರ ಮುಂದಿದೆ. ಎಲ್ಲ ಮಾಜಿ ಮುಖ್ಯಮಂತ್ರಿಗಳು, ಎಲ್ಲ ಪ್ರಮುಖರು ತಮ್ಮ ಸಲಹೆ ಸೂಚನೆ, ಮಾರ್ಗದರ್ಶನ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರೆಲ್ಲರೂ ಕೂಡ ಒಟ್ಟಾಗಿ ತಂಡಗಳನ್ನು ರಚಿಸಿಕೊಂಡು ರಾಜ್ಯಾದ್ಯಂತ ಪ್ರವಾಸ ಮಾಡುವ ತೀರ್ಮಾನ ಕೈಗೊಳ್ಳಳಾಗಿದೆ ಎಂದು ಹೇಳಿದರು.












Click it and Unblock the Notifications