ಇಂದು ಮಾಜಿ ಸಚಿವ ಬಿ.ನಾಗೇಂದ್ರ ಜಾಮೀನು ವಿಚಾರಣೆ ಏನಾಯ್ತು?
ವಾಲ್ಮೀಕಿ ಹಗರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಕಾಂಗ್ರೆಸ್ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಕೋರ್ಟ್‌ನಲ್ಲಿ ರಿಲೀಫ್ ಸಿಕ್ಕಿದೆ. ಇಂದು ಪ್ರಕರಣದ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ನ್ಯಾಯಾಲಯವು ಬಿ.ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ನಾಗೇಂದ್ರ ಅವರಿಗೆ 2 ಲಕ್ಷದ ಬಾಂಡ್, ಇಬ್ಬರ ಶ್ಯೂರಿಟಿ ನೀಡಲು ಕೋರ್ಟ್ ಸೂಚಿಸಿದೆ. ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಾಗೇಂದ್ರ ಅವರ ಬಂಧನವಾಗಿತ್ತು. ಈ ಆರೋಪದ ಮೇರೆಗೆ ಆಗ ಸಚಿವ ಸ್ಥಾನದಲ್ಲಿದ್ದ ಅವರು ರಾಜೀನಾಮೆ ನೀಡಿದ್ದರು.

ವಾಲ್ಮೀಕಿ ನಿಗಮ ಹಗರಣದಲ್ಲಿ ನಾಗೇಂದ್ರ ಅವರ ಹೆಸರು ಕೇಳಿಬಂದಿತ್ತು. ಬಳಿಕ ಇದಕ್ಕೆ ಸಂಬಂಧಿಸಿ ಸಾಕ್ಷಿಗಳು ಸಿಕ್ಕ ಹಿನ್ನೆಲೆ ನಾಗೇಂದ್ರ ಅವರನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶಾನಾಲಯದ (ಇಡಿ) ಅಧಿಕಾರಿಗಳು ಇತ್ತೀಚೆಗೆ ಚಾರ್ಜ್‌ಶೀಟ್ ಕೂಡ ಸಲ್ಲಿಸಿದ್ದರು.
ಬರೋಬ್ಬರಿ 187 ಕೋಟಿ ರೂಪಾಯಿಯಷ್ಟು ಹಗರಣ ನಡೆದಿದೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿ ನಾಲ್ಕು ಸಾವಿರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿತ್ತು. ಇನ್ನು ಇಡಿ ಚಾರ್ಜ್‌ಶೀಟ್‌ನಲ್ಲಿ ನಾಗೇಂದ್ರ ಎ1 ಆರೋಪಿಯಾಗಿದ್ದರು. ಬಳಿಕ ಜಾಮೀನು ಕೋರಿ ನಾಗೇಂದ್ರ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ವಿಚಾರಣೆ ನಡೆಸಿದ ಕೋರ್ಟ್, ನಾಗೇಂದ್ರ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದರಿಂದಾಗಿ ನಾಗೇಂದ್ರ ಅವರಿಗೆ ಬಿಗ್ ತುಸು ರಿಲೀಫ್ ಸಿಕ್ಕಂತಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವು ಇತ್ತೀಚೆಗೆ ಗಂಭೀರ ತಿರುವು ಪಡೆದುಕೊಂಡಿತ್ತು. ಈ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಮುಖ್ಯಪಾತ್ರಧಾರಿ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಹೇಳಿತ್ತು. ಅಲ್ಲದೇ ಮೊಬೈಲ್ ನಾಶ ಮಾಡಿದ್ದರ ಬಗ್ಗೆಯೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿತ್ತು.
ಈ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರೇ ಮಾಸ್ಟರ್ ಮೈಂಡ್ ಎಂದು ಇಡಿ ಹೇಳಿತ್ತು. ಅಲ್ಲದೇ ಈ ನಿಗಮದ ಹಣವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳಿಗೆ ಬಳಸಲಾಗಿದೆ ಎನ್ನುವ ಗಂಭೀರ ಅಂಶವನ್ನೂ ಚಾರ್ಜ್‌ಶೀಟ್‌ನಲ್ಲಿ ಇಡಿ ಉಲ್ಲೇಖಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವು ಬರೋಬ್ಬರಿ ಸುಮಾರು 89.62 ಕೋಟಿ ರೂ ಎನ್ನಲಾಗಿದೆ. ಇಷ್ಟು ಮೊತ್ತದ ಹಣವನ್ನು ರಾಜ್ಯದ ಈ ನಿಗಮದ ಖಾತೆಗಳಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣದ ಬೇರೆ ಬೇರೆ ನಕಲಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ನಂತರ ಶೆಲ್ ಘಟಕಗಳ ಮೂಲಕ ಹಣ ಹಂಚಿಕೆ ಮಾಡಲಾಗಿದೆ. 2024ರ ಮೇ ತಿಂಗಳಲ್ಲಿ ನಿಗಮದ ಉದ್ಯೋಗಿ ಚಂದ್ರಶೇಖರ್ ಆತ್ಮಹತ್ಯೆ ಮಾಡಿಕೊಂಡ ನಂತರ ಈ ಹಗರಣ ಬೆಳಕಿಗೆ ಬಂದಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿತ್ತು.
ಬಿ.ನಾಗೇಂದ್ರ ಅವರು ಪ್ರಭಾವ ಬಳಸಿ, ನಿಗಮದ ಹಣವನ್ನು ಯಾವುದೇ ಅನುಮತಿಯಿಲ್ಲದೆ ಎಂ.ಜಿ ರಸ್ತೆಯ ಶಾಖೆಗೆ ವರ್ಗಾಯಿಸಲಾಗಿದೆ. 187 ಕೋಟಿ ರೂಪಾಯಿ ಹಾಗೂ ಗಂಗಾ ಕಲ್ಯಾಣ ಯೋಜನೆಯಡಿ ರಾಜ್ಯ ಖಜಾನೆಯಿಂದ 43.33 ಕೋಟಿ ರೂಪಾಯಿಗಳನ್ನು ಯಾವುದೇ ನಿಯಮ ಪಾಲಿಸದೆ ಠೇವಣಿ ಮಾಡಲಾಗಿದೆ. ನಂತರ ಈ ಹಣವನ್ನು ಅನೇಕ ಖಾತೆಗಳಿಗೆ ವರ್ಗಾವಣೆ ಮಾಡಿ, ನಗದು ಪರಿವರ್ತನೆ ಮಾಡಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದರು.












Click it and Unblock the Notifications