ಎಜೆನ್ಸಿಯಿಂದ ಆಗಿರುವ ಪ್ರಮಾದ, ಉದ್ದೇಶ ಪೂರ್ವಕ ಮಾಡಿಲ್ಲ: ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ
ಬೆಂಗಳೂರು, ಜು. 20: "ಇಂಡಿಯನ್ ಎಕ್ಸಪ್ರೆಸ್ ಆಂಗ್ಲ ದಿನ ಪತ್ರಿಕೆಯ ದೆಹಲಿ ಅವೃತಿಯಲ್ಲಿ ಜುಲೈ 19 ರಂದು ಪ್ರಕಟವಾಗಿರುವ ಜಾಹೀರಾತಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರ ಪ್ರಕಟವಾಗದಿರುವುದು ಜಾಹೀರಾತು ಏಜೆನ್ಸಿಯಿಂದ ಆಗಿರುವ ಪ್ರಮಾದವಾಗಿದೆ" ಎಂದು ಸಚಿವ ಶಶಿಕಲಾ ಜೊಲ್ಲೆ ಸ್ಪಷ್ಟನೆ ಕೊಟ್ಟಿದ್ದಾರೆ.
"ಕೇಂದ್ರ ಸರ್ಕಾರವು ನೂತನವಾಗಿ ಕೇಂದ್ರದಲ್ಲಿ ಸಹಕಾರ ಇಲಾಖೆಯನ್ನು ಆರಂಭಿಸಿರುವುದಕ್ಕೆ ಶ್ರೀ ಬಿರೇಶ್ವರ ಕೊ ಆಪರೇಟಿವ್ ಸೊಸೈಟಿ ಲಿ. ನವರು ಜಾಹೀರಾತು ನೀಡಿದ್ದಾರೆ." ಎಂದಿದ್ದಾರೆ.
"ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ನೆಚ್ಚಿನ ನಾಯಕರಾಗಿದ್ದು, ಅವರ ಬಗ್ಗೆ ಅಪಾರ ಗೌರವ ಮತ್ತು ಅಭಿಮಾನ ಹೊಂದಿದವಳಾಗಿದ್ದೇನೆ.

ಜಾಹಿರಾತಿನಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಭಾವಚಿತ್ರ ಪ್ರಕಟಿಸದಿರುವುದು ನನಗೂ ವಯಕ್ತಿಕವಾಗಿ ಬೇಸರ ತರಿಸಿದೆ. ಈ ವಿಷಯದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದು ಬೇಡ ಎಂದು ವಿನಂತಿಸಿಕೊಳ್ಳುತ್ತೇನೆ. ಇನ್ನು ಮುಂದೆ ಈ ರೀತಿಯ ಅಚಾತುರ್ಯ ನಡೆಯದಂತೆ ಕ್ರಮ ವಹಿಸಲು ಸಂಬಂಧ ಪಟ್ಟವರಿಗೆ ಸೂಚಿಸಿದ್ದೇನೆ" ಎಂದು ಸಚಿವೆ ಜೊಲ್ಲೆ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬದಲಾಯಿಸಲು ಹೈಕಮಾಂಡ್ ತೀರ್ಮಾನಿಸಿದೆ ಎಂಬ ಚರ್ಚೆಗಳು ಜೋರಾಗಿಯೆ ನಡೆಯುತ್ತಿವೆ. ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಅವರ ಭಾವಚಿತ್ರವನ್ನು ಮಾತ್ರ ಬಿಟ್ಟು ಜಾಹೀರಾತು ಕೊಟ್ಟಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜಾಹೀರಾತಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ರಾಜ್ಯದ ಬಿಜೆಪಿ ನಾಯಕರ ಭಾವಚಿತ್ರಗಳನ್ನು ಬಳಸಲಾಗಿತ್ತು. ಆದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭಾವಚಿತ್ರವನ್ನು ಮಾತ್ರಹಾಕದಿರುವುದು ಸಹಜವಾಗಿಯೇ ಕತೂಹಲ ಮೂಡಿಸಿತ್ತು. ಇದೀಗ ಅದು ಜಾಹೀರಾತು ಸಂಸ್ಥೆಯ ತಪ್ಪಿನಿಂದ ಆಗಿದೆ ಎಂಬ ಸ್ಪಷ್ಟನೆ ಬಂದಿದೆ.












Click it and Unblock the Notifications