Breaking; ಕರ್ನಾಟಕ ರಾಜ್ಯಪಾಲರ ಕಾರು ಚಾಲಕನಿಗೆ ಹೃದಯಾಘಾತ, ನಿಧನ
ಬೆಂಗಳೂರು, ಡಿಸೆಂಬರ್ 11; ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರು ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಾಜ್ಯಪಾಲರನ್ನು ಕರೆದುಕೊಂಡು ಬರದಲು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋದಾಗಲೇ ಈ ಘಟನೆ ನಡೆದಿದೆ.
ರವಿ ಕುಮಾರ್ ಎಸ್. ಕಾಳೆ ಮೃತಪಟ್ಟ ಕಾರು ಚಾಲಕ. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ.
ಶನಿವಾರ ರಾಜ್ಯಪಾಲರು ಬಳ್ಳಾರಿ, ವಿಜಯನಗರ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ ಆದರು. ಮಧ್ಯರಾತ್ರಿ ಬೆಂಗಳೂರಿಗೆ ಅವರು ಆಗಮಿಸಿದರು. ಆಗ ಅವರನ್ನು ರಾಜಭವನಕ್ಕೆ ಕರೆದುಕೊಂಡು ಬರಲು ಕಾರು ಬೆಂಗಾವಲು ಪಡೆ ಜೊತೆ ತೆರಳಿತ್ತು.

ರಾಜ್ಯಪಾಲರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಕಾರು ಹತ್ತಲು ತಯಾರಿ ನಡೆದಿತ್ತು. ಆಗ ಕಾರು ಚಾಲಕ ರವಿ ಕುಮಾರ್ ಎಸ್. ಕಾಳೆಗೆ ಎದೆ ನೋವು ಕಾಣಿಸಿಕೊಂಡಿದೆ. ವಿಐಪಿ ಲಾಂಜ್‌ನಲ್ಲಿದ್ದ ಕಾರಿನಲ್ಲಿಯೇ ಅವರು ಕುಸಿದು ಬಿದ್ದರು. ಕೆಲವೇ ಕ್ಷಣಗಳಲ್ಲಿ ಅವರಿಗೆ ಹೃದಯಾಘಾತವಾಗಿದೆ.
ಕಾರು ಚಾಲಕ ರವಿ ಕುಮಾರ್ ಎಸ್. ಕಾಳೆಯನ್ನು ಆಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಆದರೆ ಆಸ್ಪತ್ರೆಗೆ ಹೋಗುವಷ್ಟರಲ್ಲಿಯೇ ಅವರು ಮೃತಪಟ್ಟಿದ್ದಾರೆ.
ಶುಕ್ರವಾರ ಮತ್ತು ಶನಿವಾರ ರಾಜ್ಯಪಾಲರು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದರು. ಶನಿವಾರ ಅವರು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಉದ್ಘಾಟಿಸಿ ಅಧ್ಯಕ್ಷೀಯ ಭಾಷಣ ಮಾಡಿದರು.
ಶುಕ್ರವಾರ ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯ ಆಡಳಿತ ಭವನ ಆವರಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರಥಮ ಚಿಕಿತ್ಸೆಯಲ್ಲಿ ನಿರತ ತರಬೇತುದಾರರ ಸಾಮಾಜಿಕ ತುರ್ತು ಪ್ರತಿಕ್ರಿಯೆ ಸ್ವಯಂ ಸೇವಕರ ತಂಡಕ್ಕೆ ಚಾಲನೆ ನೀಡಿದರು.












Click it and Unblock the Notifications