Anganawadi: ಬಿಸಿಲಿನ ತಾಪಮಾನ ಹೆಚ್ಚಳ; 8 ಜಿಲ್ಲೆಗಳಲ್ಲಿ ಅಂಗನವಾಡಿ ಸಮಯ ಬದಲಾವಣೆ
ಬೆಂಗಳೂರು, ಏಪ್ರಿಲ್.02: ರಾಜ್ಯದಲ್ಲಿ ಬಿಸಿಲು ಕಡಿಮೆಯಾಗುವ ಯಾವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೇ ವೇಳೆ ಜನ ಮನೆಯಿಮದ ಹೊರ ಬರುವುದೇ ಕಷ್ಟವಾಗಿದೆ. ಇಂತಹ ಸಮಯದಲ್ಲಿ ಚಿಕ್ಕ ಮಕ್ಕಳನ್ನು ಬಿಸಿಲಿಗೆ ಬಿಡುವುದು ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿಯೇ ಮಕ್ಕಳಿಗಾಗಿ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಅಂಗನವಾಡಿ ಸಮಯ ಬದಲಾವಣೆ ಮಾಡಲಾಗಿದೆ.
ಬಿಸಿಲು ಹೆಚ್ಚಿರುವ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್ ವಿಜಯಪುರ ಮತ್ತು ಬಾಗಲಕೋಟೆ, ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಜಿ ಸಿ ಪ್ರಕಾಶ್ ಆದೇಶ ಹೊರಡಿಸಿದ್ದಾರೆ.

ಬಿಸಿಲಿನ ತಾಪಮಾನ ಹೆಚ್ಚುತ್ತಿರುವುದರಿಂದ ಏಪ್ರಿಲ್ ಮತ್ತು ಮೇ - 2024ರ ಮಾಹೆಗಳಲ್ಲಿ ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಪರಿಷ್ಕರಿಸುವ ಕುರಿತು ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರ ಪ್ರಕಾರ, ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಏಪ್ರಿಲ್ ಮತ್ತು ಮೇ-2024ರ ತಿಂಗಳಲ್ಲಿ ಕಲಬುರಗಿ, ಬಳ್ಳಾರಿ, ಯಾದಗಿರಿ, ಕೊಪ್ಪಳ, ರಾಯಚೂರು, ಬೀದರ್, ವಿಜಯಪುರ ಮತ್ತು ಬಾಗಲಕೋಟೆ, ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಬೆಳಗ್ಗೆ 08:00 ಗಂಟೆಯಿಂದ ಮಧ್ಯಾಹ್ನ 12.00 ಗಂಟೆಯವರೆಗೆ ತಾತ್ಕಾಲಿಕವಾಗಿ ಪರಿಷ್ಕರಿಸಲಾಗಿದೆ. ಬದಲಾದ ವೇಳಾಪಟ್ಟಿಯಂತೆ ಐಸಿಡಿಎಸ್ ಸೇವೆಗಳನ್ನು ನಿಯಮಾನುಸಾರ ಯಾವುದೇ ಅಡೆತಡೆ ಇಲ್ಲದೆ ಅಂಗನವಾಡಿ ಫಲಾನುಭವಿಗಳಿಗೆ ತಲುಪಿಸಲು ಅಗತ್ಯ ಕ್ರಮವಹಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಜಿ ಸಿ ಪ್ರಕಾಶ್ ಸುತ್ತೋಲೆ ಹೊರಡಿಸಿದ್ದಾರೆ.

ರಾಜ್ಯದಲ್ಲಿ ಮುಂದುವರೆಯಲಿದೆ ಶುಷ್ಕ ಹವಾಮಾನ ಮತ್ತು ಶಾಖದ ಅಲೆ
ಭಾರತದ ಹವಾಮಾನ ಇಲಾಖೆ (ಐಎಂಡಿ) ಏಪ್ರಿಲ್ 5 ರವರೆಗೆ ಕರ್ನಾಟಕದ ಉತ್ತರ ಜಿಲ್ಲೆಗಳಲ್ಲಿ ಶಾಖದ ಅಲೆ ಮತ್ತು ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಒಣ ಹವಾಮಾನದ ಮುನ್ಸೂಚನೆಯನ್ನು ನೀಡಿದೆ. ಐಎಂಡಿ ಪ್ರಕಾರ, ದಕ್ಷಿಣ ತಮಿಳುನಾಡಿನಿಂದ ಪೂರ್ವ ವಿದರ್ಭದವರೆಗೆ ಕೆಲವು ಗಾಳಿ ಮತ್ತು ಹವಾಮಾನ ಪರಿಸ್ಥಿತಿಯಿಂದಾಗಿ, ಕರ್ನಾಟಕ ಏಪ್ರಿಲ್ 6 ರಿಂದ 8 ರವರೆಗೆ ಲಘು ಮಳೆಯಾಗುವ ಸಾಧ್ಯತೆಯಿದೆ ಎಂದಿದೆ.
ಉತ್ತರ ಕರ್ನಾಟಕದಲ್ಲಿ ಶಾಖದ ಅಲೆ ಹೆಚ್ಚಾಗಲಿದೆ. ಐಎಂಡಿ ಪ್ರಕಾರ, ರಾಜ್ಯದ ಬಾಗಲಕೋಟೆ, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಳ್ಳಾರಿ, ಬೆಳಗಾವಿ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸಲಿದೆ ಎಂದಿದೆ. ಹೀಗಾಗಿ ಎಂಟು ಜಿಲ್ಲೆಗಳ ಅಂಗನವಾಡಿ ಕೇಂದ್ರಗಳ ಸಮಯ ಬದಲಾವಣೆ ಮಾಡಲಾಗಿದೆ.











Click it and Unblock the Notifications