ಸೂರ್ಯ ವರ್ಷವಿಡೀ ಬೆಳಗುತ್ತಾನೆ, ರಾಜ್ಯಕ್ಕೆ ಗ್ರಹಣ ಕಾಂಗ್ರೆಸ್: ತೇಜಸ್ವಿ ಸೂರ್ಯ ಕೌಂಟರ್
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯಾ ಅವರು ಆಡಿದ್ದ ಮಾತುಗಳು ಚರ್ಚೆಗೆ ಗ್ರಾಸವಾಗಿತ್ತು. ದಕ್ಷಿಣದಲ್ಲಿ ಇದಾನಲ್ಲ, ಅಮವಾಸ್ಯೆ ತೇಜಸ್ವಿ ಸೂರ್ಯ ಕೇಂದ್ರದಿಂದ ಅನುದಾನ ತರಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು. ಇದಕ್ಕೆ ತೇಜಸ್ವಿ ಸೂರ್ಯ ತಮ್ಮದೇ ಸ್ಟೈಲಲ್ಲಿ ತಿರುಗೇಟು ನೀಡಿದ್ದಾರೆ. ಸಿದ್ಧರಾಮಯ್ಯನವರೇ, ಸೂರ್ಯ ಅಮಾವಾಸ್ಯೆಯಲ್ಲಿಯೂ ಇರುತ್ತಾನೆ. ಹುಣ್ಣಿಮೆಯಲ್ಲಿ ಕೂಡ ಸೂರ್ಯ ಇರುತ್ತಾನೆ. ಸೂರ್ಯ ವರ್ಷದ 365 ದಿನವೂ ಪ್ರಕಾಶಿಸ್ತಾನೆ. ಅಮವಾಸ್ಯೆಯಂದು ಇಲ್ಲದಿರುವುದು ಚಂದ್ರ ಮಾತ್ರ ಎಂದು ಕೌಂಟರ್ ಕೊಟ್ಟಿದ್ದಾರೆ.
ನೀವು ಚಂದ್ರನನ್ನು ಪೂಜೆ ಮಾಡುವವರ ಸಹವಾಸ ಮಾಡಿ, ಬಹುಶಃ ಸೂರ್ಯ ಮತ್ತು ಚಂದ್ರರ ನಡುವಿನ ವ್ಯತ್ಯಾಸವೇ ನಿಮಗೆ ಗೊತ್ತಾಗುತ್ತಿಲ್ಲವೆಂದು ತೋರುತ್ತಿದೆ. ಇನ್ನಾದರೂ ವೈಯಕ್ತಿಕ ಟೀಕೆ ಮಾಡುವುದನ್ನು ಬಿಟ್ಟು, ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಿ, ರಾಜ್ಯದ ಜನಕ್ಕೆ ಒಳ್ಳೆಯ ಆಡಳಿತ ಕೊಡುವ ಕಡೆ ಗಮನಹರಿಸಿ ಎಂದು ಸಲಹೆ ನೀಡಿದ್ದಾರೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಕರ್ನಾಟಕಕ್ಕೆ ಹಿಡಿದಿರುವ ದೊಡ್ಡ ಗ್ರಹಣ. ರಾಜ್ಯದಲ್ಲಿ ಭ್ರಷ್ಟಾಚಾರ, ಅಭಿವೃದ್ಧಿ ಕುಂಠಿತ, ಮತ್ತು ಆಡಳಿತ ವೈಫಲ್ಯಗಳು ತಾಂಡವವಾಡುತ್ತಿವೆ. ಜನಸಾಮಾನ್ಯರ ಹಿತಾಸಕ್ತಿ ಮರೆತು ಕೇವಲ ತುಷ್ಟೀಕರಣದ ರಾಜಕಾರಣ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನ ಹಾಗೂ ರಾಜ್ಯದ ರಸ್ತೆಗಳ ದುಸ್ಥಿತಿ, ಮಿತಿಮೀರಿದ ಬೆಲೆ ಏರಿಕೆ, ಪರ ರಾಜ್ಯಗಳಿಗೆ ವಲಸೆ ಹೋಗುತ್ತಿರುವ ಕಂಪನಿಗಳು, ರೈತರ ಆತ್ಮಹತ್ಯೆ, ಸಂಪೂರ್ಣ ಹದಗೆಟ್ಟಿರುವ ಕಾನೂನು ಹಾಗೂ ಸುವ್ಯವಸ್ಥೆ, ಇವೆಲ್ಲವುಗಳ ಬಗ್ಗೆ ಕಾಳಜಿ ವಹಿಸಬೇಕಾದ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರದ ಮಂತ್ರಿಗಳು ತಮ್ಮ ಇಲಾಖೆಗಳಿಗೆ ಸಂಬಂಧವೇ ಇರದ ವಿಷಯಗಳ ಬಗ್ಗೆಯೇ ಮಾತನಾಡಿ, ಜನತೆಯ ಸಹನೆ ಪರೀಕ್ಷಿಸುತ್ತಿರುವುದು ಅಕ್ಷಮ್ಯ ಎಂದು ಕಿಡಿಕಾರಿದ್ದಾರೆ.
ಕಳೆದ 2.5 ವರ್ಷಗಳಿಂದ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಯಾವ್ಯಾವ ಕಾರ್ಯಗಳಿಗೋಸ್ಕರ ಖರ್ಚು ಮಾಡಲಾಗಿದೆ ಎಂಬುದರ ಕುರಿತು ಮುಂದಿನ ಅಧಿವೇಶನದಲ್ಲಿ ಶ್ವೇತಪತ್ರ ಹೊರಡಿಸಿ, ಜನತೆಯ ಮುಂದೆ ಸತ್ಯಾಂಶ ತಿಳಿಸಲಿ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಕೂಡ ಹೆಣಗಾಡುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಹೊಣೆಗಾರಿಕೆ ಮರೆತು, ಬೆಂಗಳೂರಿನ ಗುಂಡಿ ಮುಚ್ಚಲು ಸಹ ಇನ್ಯಾರನ್ನೋ ದೂರುತ್ತಿರುವುದು ವಿಪರ್ಯಾಸ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅಂದಿದ್ದೇನು?
ಇತ್ತೀಚೆಗೆ ಗಾಂಧಿನಗರದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಅವರು ರಾಜ್ಯದಿಂದ ಆರಿಸಿ ದೆಹಲಿಗೆ ಕಳುಹಿಸಿರುವ ರಾಜ್ಯದ ಸಂಸದರು ಕರ್ನಾಟಕಕ್ಕೆ ಸಿಗಬೇಕಿರುವ ಹಣವನ್ನು ಕೇಂದ್ರದ ಬಳಿ ಕೇಳಲ್ಲ ಎಂದು ಆರೋಪಿಸಿದ್ದರು. ಸಂಸದ ಪಿಸಿ ಮೋಹನ್ ಕೇಳಿಲ್ಲ, ಅವನು ಯಾರು ಸೌತ್ ಅಲ್ಲಿ ಇದಾನಲ್ಲ, ಅಮಾವಾಸ್ಯೆ ತೇಜಸ್ವಿ ಸೂರ್ಯ, ಆತ ಕೂಡ ಕೇಂದ್ರದ ಬಳಿ ಹಣ ಕೇಳಲೇ ಇಲ್ಲ. ಆಯಮ್ಮ ಶೋಭಾ ಕರಂದ್ಲಾಜೆ ಕೂಡ ಹಣ ತರೋದಿಲ್ಲ. ಕೇಂದ್ರದ ಮಂತ್ರಿ ಆಗಿರುವ ಕುಮಾರಸ್ವಾಮಿ ಕೂಡ ಕೇಂದ್ರದ ಬಳಿ ಹಣ ಕೇಳಿಲ್ಲ. ಹೀಗಾಗಿ ಕುಮಾರಸ್ವಾಮಿ ಸೇರಿ ಎಲ್ಲ ಸಂಸದರನ್ನು ಸೋಲಿಸಬೇಕು ಎಂದಿದ್ದರು. ಇದಕ್ಕೆ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.












Click it and Unblock the Notifications