ಪಿಎಸ್ಐ ಕೊಂದ ಮಧು ಬಗ್ಗೆ ಎಸ್ಐ ದೇವರಾಜ್
ಬೆಂಗಳೂರು/ತರೀಕೆರೆ, ಅ.20; ದೊಡ್ಡಬಳ್ಳಾಪುರ ಪೊಲೀಸ್ ಠಾಣೆಯ ಪಿಎಸ್ ಐ ಜಗದೀಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮಧು ಹಾಗೂ ಹರೀಶ್ ಅವರ ಬಂಧನವಾಗಿದೆ. ಆರೋಪಿ ಮಧು ಈ ಮುಂಚೆ ತರೀಕೆರೆಯ ಇನ್ಸ್ ಪೆಕ್ಟರ್ ಹತ್ಯೆಗೂ ಮುಂದಾಗಿದ್ದ ಘಟನೆ ಬೆಳಕಿಗೆ ಬಂದಿದೆ.
ನೆಲಮಂಗಲ ಇನ್ಸ್‌ಪೆಕ್ಟರ್ ಪರಮೇಶ್ವರ್ ನೇತೃತ್ವದ ರಾಜ್ಯದ ಪೊಲೀಸರ ತಂಡ ನಾಗ್ಪುರಕ್ಕೆ ತೆರಳಿದ್ದು, ಆರೋಪಿಗಳನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಕರ್ನಾಟಕ ಸರ್ಕಾರ 10 ಲಕ್ಷ ರೂಪಾಯಿ ಬಹುಮಾನವನ್ನು ಘೋಷಣೆ ಮಾಡಿದೆ. [ನಾಗ್ಪುರದಲ್ಲಿ ಮಧು, ಹರೀಶ್ ಬಂಧನ]
ನಾಗ್ಪುರ ಕ್ರೈಂ ಬ್ರಾಂಚ್, ಭಯೋತ್ಪಾದಕ ನಿಗ್ರಹ ದಳ ಹಾಗೂ ರೈಲ್ವೆ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ ಜಗದೀಶ್ ಹತ್ಯೆ ಮಾಡಿದ್ದ ಹರೀಶ್ ಬಾಬು (48) ಮತ್ತು ಮಧು (26) ಅವರನ್ನು ಸೋಮವಾರ ಸಂಜೆ ನಾಗ್ಪುರ ರೈಲು ನಿಲ್ದಾಣದಲ್ಲಿ ಬಂಧಿಸಿದ ಸುದ್ದಿ ಓದಿರುತ್ತೀರಿ.

ಆರೋಪಿಗಳ ಬಗ್ಗೆ ಕಥೆಗಳು: ಆರೋಪಿಗಳಾದ ಹರೀಶ್ ಬಾಬು ಹಾಗೂ ಮಧು ಬಗ್ಗೆ ಅನೇಕ ಕಥೆಗಳು ಹುಟ್ಟಿಕೊಂಡಿವೆ. ಹರೀಶ್ ಬಾಬುವನ್ನು ಮಧು ತಂದೆ ಎಂದು ತಿಳಿಯಲಾಗಿತ್ತು. ಅದರೆ, ಮಧು ತಂದೆ ಕೃಷ್ಣಪ್ಪ ಎಂಬುವರು ಈಗಾಗಲೇ ಮೃತಪಟ್ಟಿದ್ದಾರೆ. ಮಧು ತಾಯಿ ತಿಮ್ಮಪ್ಪ ಅಲಿಯಾಸ್ ತಿಮ್ಮಿಯ ಆಪ್ತ ಸಖನೇ ಹರೀಶ್ ಬಾಬು ಎಂದು ತಿಳಿದು ಬಂದಿದೆ.
ಕದ್ದ ಮಾಲನ್ನು ತಿಮ್ಮಿ ಕೈಗೆ ಕೊಡುತ್ತಿದ್ದರು. ಆಕೆ ಚಿತ್ರದುರ್ಗ, ದಾವಣಗೆರೆ ಬಳಿಯ ಸೇಠ್ ಗಳ ಅಂಗಡಿಯಲ್ಲಿ ಗಿರವಿ ಇಟ್ಟು ಹಣ ಪಡೆಯುತ್ತಿದ್ದಳು. ಎಲ್ಲರೂ ಉತ್ತಮ ಎಸ್ಕೇಪ್ ಆರ್ಟಿಸ್ಟ್ ಗಳು ತಲಾ 40ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ಇವರ ಮೇಲೆ ಬುಕ್ ಆಗಿವೆ.
ಪಿಎಸ್ ಐ ಜಗದೀಶ್ ಹತ್ಯೆಗೆ ಧೈರ್ಯ ಬಂದಿದ್ದು ಹೇಗೆ? : ಪೊಲೀಸ್ ಮೇಲೆ ಕೈ ಮಾಡಿ ಹತ್ಯೆ ಮಾಡುವ ಧೈರ್ಯ ಅಥವಾ ಪ್ರಯತ್ನವನ್ನು ಈ ಮುಂಚೆ ಕೂಡಾ ಮಧು ಮಾಡಿದ್ದ. ಹೀಗಾಗಿ ಜಗದೀಶ್ ಹತ್ಯೆ ಮೊದಲ ಕೇಸಲ್ಲ ಎಂದು ತಮ್ಮ ಮೇಲೆ ನಡೆದ ಹಲ್ಲೆಯನ್ನು ತರೀಕೆರೆ ಸರ್ಕಲ್ ಇನ್ಸ್ ಪೆಕ್ಟರ್ ದೇವರಾಜ್ ವಿವರಿಸಿದ್ದಾರೆ.
ಶಿವರಾತ್ರಿ(ಫೆ.17) ದಿನದಂದು ಮಧು, ಚಂದ್ರಶೇಖರ್ ಹಾಗೂ ಷಂಶುದ್ದೀನ್ ಎಂಬುವರು ತರೀಕೆರೆ ತಾಲೂಕಿನ ಕೋಡಿ ಕ್ಯಾಂಪ್ ಬಳಿಯ ಮನೆಯೊಂದರಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅದರೆ, ರಾತ್ರಿ ಬೀಟ್ ನಲ್ಲಿದ್ದ ದೇವರಾಜ್ ಗೆ ಇವರ ಸುಳಿವು ಸಿಕ್ಕಿ ಚೇಸ್ ಮಾಡಿದ್ದಾರೆ.
ಮಧು ಬೀಸಿದ್ದ ಚಾಕು ದೇವರಾಜ್ ಅವರ ಬೆಲ್ಟಿಗೆ ತಗುಲಿದ್ದರಿಂದ ಹೆಚ್ಚಿನ ಗಾಯಗಳಾಗದೆ ಬಚಾವಾಗಿದ್ದರು.ಅಲ್ಲದೆ, ಮಧು ಹಾಗೂ ಚಂದ್ರಶೇಖರ್ ರನ್ನು ಹಿಡಿದು ಚಿಕ್ಕಮಗಳೂರಿನ ಜೈಲಿಗೆ ತಳ್ಳಿದ್ದರು. ಷಂಶುದ್ದೀನ್ ಪರಾರಿಯಾಗಿದ್ದ. ನ್ಯಾಯಾಲಯದಿಂದ ಜಾಮೀನು ಪಡೆದು ಹೊರ ಬಂದ ಮಧು ಮತ್ತೆ ಕಳ್ಳತನದ ಕಸುಬು ಶುರು ಮಾಡಿಕೊಂಡ. ಹೊಸ ತಂಡ ಕಟ್ಟಿ ಮನೆ ಕಳ್ಳತನದ ಬದಲಿಗೆ ವಾಹನ ಕಳ್ಳತನಕ್ಕೆ ಮುಂದಾದ.
ಈಗ ಪಿಎಸ್ ಐ ಜಗದೀಶ್ ಹತ್ಯೆ ಪ್ರಕರಣದ ಆರೋಪಿಗಳಾದ ಮಧು ಹಾಗೂ ಹರೀಶ್ ಬಾಬು ಅವರನ್ನು ಹುಡುಕಲು ಹೊರಟ ನೆಲಮಂಗಲ ಇನ್ಸ್‌ಪೆಕ್ಟರ್ ಪರಮೇಶ್ವರ್ ನೇತೃತ್ವದ ರಾಜ್ಯದ ಪೊಲೀಸರ ತಂಡದಲ್ಲಿ ಇನ್ಸ್ ಪೆಕ್ಟರ್ ದೇವರಾಜ್ ಕೂಡಾ ಇದ್ದಾರೆ.












Click it and Unblock the Notifications