ಮತ್ತೆ ಬಂತು ಚುನಾವಣೆ, ಜನರೇ ಮತ ಹಾಕಲು ಸಿದ್ಧರಾಗಿ!
ಬೆಂಗಳೂರು, ಮೇ 29; ಕರ್ನಾಟಕ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡು ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಈಗ ಮತ್ತೆ ರಾಜ್ಯದ ಜನರು ಮತದಾನ ಮಾಡಲು ಸಿದ್ಧರಾಗಬೇಕಿದೆ. ಈಗಾಗಲೇ ಮತದಾರರ ಪಟ್ಟಿ ತಯಾರು ಮಾಡಲು ರಾಜ್ಯ ಚುನಾವಣಾ ಆಯೋಗ ಸುತ್ತೋಲೆ ಹೊರಡಿಸಿದೆ.
ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಪ್ರಕಾಶ್ ಎಸ್ ಮರಬಳ್ಳಿ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಸಾರ್ವತ್ರಿಕ ಚುನಾವಣೆ 2023ಕ್ಕೆ ಮತದಾರರ ಪಟ್ಟಿ ತಯಾರಿಸುವ ಮತ್ತು ಮತದಾನ ಕೇಂದ್ರಗಳ ಸ್ಥಾಪನೆ ಬಗ್ಗೆ ಸೂಚನೆಗಳನ್ನು ಸುತ್ತೋಲೆಯಲ್ಲಿ ನೀಡಿದ್ದಾರೆ.

ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ವಿಳಂಬ ಮಾಡಿ ಕರ್ನಾಟಕ ಸರ್ಕಾರ ಈಗಾಗಲೇ ಕರ್ನಾಟಕ ಹೈಕೋರ್ಟ್‌ಗೆ 5 ಲಕ್ಷ ರೂ. ದಂಡವನ್ನು ಪಾವತಿ ಮಾಡಿದೆ. ಸುಮಾರು ಎರಡು ವರ್ಷಗಳಿಂದ ಚುನಾವಣೆ ನಡೆಯದೇ ಸ್ಥಳೀಯ ಸಂಸ್ಥೆಗಳ ಆಡಳಿತ ಅಧಿಕಾರಿಗಳ ಕೈಯಲ್ಲಿ ಇದೆ.
ಕ್ಷೇತ್ರ ಪುನರ್ ವಿಂಗಡನೆ ಅಧಿಸೂಚನೆ; ಕರ್ನಾಟಕ ಸರ್ಕಾರ ಮಾರ್ಚ್ ತಿಂಗಳಿನಲ್ಲಿಯೇ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಕುರಿತು ಕ್ಷೇತ್ರ ಪುನರ್ ವಿಂಗಡಣೆ ಅಧಿಸೂಚನೆ ಪ್ರಕಟಿಸಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಸಹ ಮಾಹಿತಿ ನೀಡಿತ್ತು. ಚುನಾವಣೆ ವಿಳಂಬ ಮಾಡಿದ್ದಕ್ಕೆ ಕೋರ್ಟ್ ವಾಗ್ದಾಳಿ ನಡೆಸಿ ವಿಧಿಸಿದ್ದ 5 ಲಕ್ಷ ರೂ. ದಂಡವನ್ನೂ ಸಹ ಪಾವತಿ ಮಾಡಿ ನ್ಯಾಯಾಲಯ ಆದೇಶವನ್ನು ಸರ್ಕಾರ ಪಾಲನೆ ಮಾಡಿದೆ.

ಈಗ ಚುನಾವಣಾ ಆಯೋಗ ಮತದಾರರ ಪಟ್ಟಿ ತಯಾರಿಗೆ ಸೂಚನೆ ನೀಡಿದೆ. ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ ಪ್ರಕರಣ 165ರ ಪ್ರಕಾರ ಜಿಲ್ಲಾ ಪಂಚಾಯತ್ ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಉಪ ವಿಭಾಗಾಧಿಕಾರಿಗಳು ಸಿದ್ಧಪಡಿಸಬೇಕಾಗಿರುತ್ತದೆ. ಪ್ರಕರಣ 126(3)ರ ಪ್ರಕಾರ ಸಂಬಂಧಪಟ್ಟ ತಾಲ್ಲೂಕು ತಹಸೀಲ್ದಾರರು ತಾಲ್ಲೂಕು ಪಂಚಾಯತಿ ಚುನಾವಣಾ ಕ್ಷೇತ್ರಕ್ಕೆ ಮತದಾರರ ಪಟ್ಟಿಯನ್ನು ತಯಾರಿಸುವ ಅಧಿಕಾರಿಯಾಗಿರುತ್ತಾರೆ.
ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯು ಏಕಕಾಲದಲ್ಲಿ ನಡೆಯುವುದರಿಂದ ಹಾಗೂ ಒಂದೇ ಮತದಾರರ ಪಟ್ಟಿಯನ್ನು ಉಪಯೋಗಿಸುವುದರಿಂದ, ಮತದಾರರ ಪಟ್ಟಿಯು ಸಂಬಂಧಪಟ್ಟ ವಿಭಾಗಾಧಿಕಾರಿಗಳ ಹಾಗೂ ತಾಲ್ಲೂಕು ತಹಸೀಲ್ದಾರರ ಸಹಿ ಪದನಾಮ ಒಳಗೊಂಡಿರತಕ್ಕದ್ದು ಎಂದು ಆಯೋಗ ಸುತ್ತೋಲೆಯಲ್ಲಿ ಹೇಳಿದೆ.
ಮತದಾರರ ಪಟ್ಟಿ ಕಾರ್ಯಕ್ರಮ; ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಕರಡು ಮತದಾರರ ಪಟ್ಟಿಯನ್ನು ಪ್ರಕಟಣೆ ಮಾಡುವ ದಿನಾಂಕ 14/6/2023. ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು 19/6/2023 ಕೊನೆಯ ದಿನಾಂಕವಾಗಿದೆ. ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಲು ಕೊನೆಯ ದಿನಾಂಕ 22/6/2023 ಆಗಿದೆ.
ಆಕ್ಷೇಪಣೆಗಳನ್ನು ಇತ್ಯರ್ಥಪಡಿಸಿದ ಬಳಿಕ ಮುದ್ರಕರಿಂದ ಅಗತ್ಯ ಬದಲಾವಣೆಯನ್ನು ಮಾಡಿಸಿ ಅಂತಿಮ ಚೆಕ್ ಲಿಸ್ಟ್ ಪಡೆದುಕೊಂಡು ಕ್ಷೇತ್ರದ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಪರಿಶೀಲಿಸುವುದು. 27/6/2023ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗ ಸುತ್ತೋಲೆಯಲ್ಲಿ ಹೇಳಿದೆ.
ಈಗಾಗಲೇ ವಿಧಾನಸಭೆ ಚುನಾವಣೆಗೆ ಸಿದ್ಧಪಡಿಸಿರುವ ಚಾಲ್ತಿಯಲ್ಲಿರುವ ವಿಧಾನಸಭಾ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದರಿಂದ, ಕ್ಷೇತ್ರವಾರು ತಯಾರಿಸಲಾದ ಮತದಾರರ ಪಟ್ಟಿಗೆ ನೇರವಾಗಿ ಹೆಸರು ಸೇರ್ಪಡೆ ಮಾಡಲು ಅವಕಾಶವಿರುವುದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳಿಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನದವರೆಗೂ ವಿಧಾನಸಭಾ ಮತದಾರರ ಪಟ್ಟಿಯ ನೋಂದಣಾಧಿಕಾರಿಗಳು ನಿಯಮಾನುಸಾರ ಅಂಗೀಕರಿಸುವ, ಸೇರ್ಪಡೆ, ಬಿಡತಕ್ಕವುಗಳು ಮತ್ತು ತಿದ್ದುಪಡಿಗಳನ್ನು ಅಳವಡಿಸಿಕೊಂಡು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ಕ್ಷೇತ್ರಗಳ ಮತದಾರರ ಪಟ್ಟಿಗೆ ಪೂರಕ ಪಟ್ಟಿಯನ್ನುಸಿದ್ಧಪಡಿಸಿಕೊಳ್ಳುವುದು ಎಂದು ಸೂಚನೆ ನೀಡಲಾಗಿದೆ.
ರಾಜ್ಯ ಚುನಾವಣಾ ಆಯೋಗ ಜೂನ್ 27ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಸೂಚನೆ ನೀಡಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗೆ ಒಟ್ಟಿಗೆ ಚುನಾವಣೆ ನಡೆಯಲಿದೆ. ಜುಲೈನಲ್ಲಿ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ಆಗಸ್ಟ್‌ನಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ.












Click it and Unblock the Notifications