ಕರ್ನಾಟಕದಲ್ಲಿ ತೈವಾನ್ ದೇಶದ ಕಂಪನಿಯ ಕಾರ್ಖಾನೆ ಸ್ಥಾಪನೆಗೆ ಸಜ್ಜು: ಭಾರೀ ಬಂಡವಾಳ ಹೂಡಿಕೆ
ಬೆಂಗಳೂರು, ಆಗಸ್ಟ್ 21: ಕರ್ನಾಟಕ ರಾಜ್ಯದಲ್ಲಿ 200 ಕೋಟಿ ರೂ. ಬಂಡವಾಳ ಹೂಡಿಕೆಗೆ ತೈವಾನ್ ಮೂಲದ ಬೆಸ್ಟೆಕ್ ಪವರ್ ಎಲೆಕ್ಟ್ರಾನಿಕ್ಸ್ ಕಂಪನಿ ಆಸಕ್ತಿ ಹೊಂದಿದೆ. ಈ ಕಂಪನಿಯು ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ಸುತ್ತಮುತ್ತ ಕಾರ್ಖಾನೆ ಸ್ಥಾಪಿಸಲು ಸಜ್ಜಾಗಿದ್ದು, ನಮ್ಮ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದರು.
ಮಂಗಳವಾರ ತೈವಾನ್ ದೇಶದ ಬೆಸ್ಟೆಕ್ ಉದ್ಯಮ ಸಮೂಹದ ಅಧ್ಯಕ್ಷ ಮೈಕ್ ಚೆನ್ ಮತ್ತು ಉಪಾಧ್ಯಕ್ಷ ತೆರೇಸಾ ಡಾಂಗ್ ಸಚಿವರುನ್ನು ಭೇಟಿ ಮಾಡಿದರು. ಕಂಪನಿಯ ಈ ಯೋಜನೆಯಿಂದ ರಾಜ್ಯದಲ್ಲಿ 5,000 ಉದ್ಯೋಗಗಳು ಸೃಷ್ಟಿಯಾಗಲಿವೆ. ಮೂಲಸೌಕರ್ಯ ಅಭಿವೃದ್ಧಿ ಬಳಿಕ ಮೂರು ವರ್ಷಗಳಲ್ಲಿ ಕಂಪನಿಯು ಯೋಜನೆಗೆ ಹಂತಹಂತವಾಗಿ ಬಂಡವಾಳ ಹೂಡಲಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬೆಸ್ಟೆಕ್ ಕಂಪನಿಯು ಅಡಾಪ್ಟರ್, ಸಿ-ಪಿನ್, ಇ.ವಿ. ಮತ್ತು ಲ್ಯಾಪ್‌ಟಾಪ್ ಚಾರ್ಜರ್, ಕೇಬಲ್ ಇತ್ಯಾದಿಗಳನ್ನು ಉತ್ಕೃಷ್ಟ ಗುಣಮಟ್ಟದೊಂದಿಗೆ ತಯಾರಿಸಲಿದೆ. ಈ ಮೂಲಕ ಕಂಪನಿಯು ವಾರ್ಷಿಕವಾಗಿ 2,500 ಕೋಟಿ ರೂಪಾಯಿ ವಹಿವಾಟು ನಡೆಸಲಿದೆ ಎಂದು ಹೇಳಿದರು.
₹2,280 ಕೋಟಿ ಮೊತ್ತದ ಯೋಜನೆಗಳಿಗೆ ಒಪ್ಪಿಗೆ
ರಾಜ್ಯದಲ್ಲಿ ಇತ್ತೀಚೆಗೆ ಸಚಿವ ಎಂಬಿ ಪಾಟೀಲ್ ನೇತೃತ್ವದಲ್ಲಿ ನಡೆದ 147ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ₹2,280.52 ಕೋಟಿ ಮೊತ್ತದ ಬಂಡವಾಳ ಹೂಡಿಕೆಯ ಒಟ್ಟು 20 ಯೋಜನೆಗಳಿಗೆ ಅನುಮೋದನೆ ನೀಡಲಾಯಿತು. ಈ ಯೋಜನೆಗಳಿಂದ ಭವಿಷ್ಯದಲ್ಲಿ ರಾಜ್ಯದಲ್ಲಿ 3,457 ಉದ್ಯೋಗ ಅವಕಾಶಗಳು ಸೃಷ್ಟಿ ಆಗಲಿವೆ.

ಟೊಯೊಟಾ ಕಿರ್ಲೊಸ್ಕರ್ ಮೋಟರ್ಸ್ ಲಿಮಿಟೆಡ್‌ನ (ಟಿಕೆಎಂಎಲ್) ಇನೊವಾ ಹೈಕ್ರಾಸ್ ಕಾರಿನ ಬೇಡಿಕೆ ಪೂರೈಸಲು ಅಗತ್ಯವಾದ ಬಿಡಿಭಾಗಗಳನ್ನು ತಯಾರಿಸಲು ಬಿಡದಿಯಲ್ಲಿ ₹450 ಕೋಟಿ ವೆಚ್ಚದಲ್ಲಿ ಟೊಯೊಟೆಟ್ಸು ಇಂಡಿಯಾ ಆಟೊ ಪಾರ್ಟ್ಸ್ ಪ್ರೈವೇಟ್ ಲಿಮಿಟೆಡ್ ಘಟಕ ಸ್ಥಾಪಿಸಲು ಶನಿವಾರ ಇಲ್ಲಿ ನಡೆದ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯು ಒಪ್ಪಿಗೆ ನೀಡಿದೆ.
ಅನುಮೋದಿತ ಪ್ರಮುಖ ಯೋಜನೆಗಳು
ಈ ಎಲ್ಲ ಯೋಜನೆಗಳಲ್ಲಿ ರಾಮನಗರ, ಕೋಲಾರ, ಬೆಳಗಾವಿ, ತುಮಕೂರು, ಧಾರವಾಡ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಈ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರುವ ಯೋಜನೆಗಳು ಸೇರಿವೆ. ಯೋಜನೆಗಳಲ್ಲಿ ಮುಂಬೈನ ಐಎಲ್‌ವಿ ಸೌತ್ ವೇರ್‌ಹೌಸಿಂಗ್ ಪಾರ್ಕ್ಸ್ ಪ್ರೈವೇಟ್ ಲಿಮಿಟೆಡ್‌ನ ₹423 ಕೋಟಿ ಮೊತ್ತದ ಕೈಗಾರಿಕಾ ಪಾರ್ಕ್ ಸ್ಥಾಪನೆ ಆಗಲಿದೆ.
ಬೆಳಗಾವಿಯ ಮೃಣಾಲ್ ಷುಗರ್ಸ್ ಲಿಮಿಟೆಡ್, ಧಾರವಾಡ ಜಿಲ್ಲೆಯಲ್ಲಿ ₹386.86 ಕೋಟಿ ವೆಚ್ಚದ ಸಕ್ಕರೆ ಕಾರ್ಖಾನೆ ಸ್ಥಾಪನೆಯಾಗಲಿದೆ. ತುಮಕೂರು ಜಿಲ್ಲೆಯ ವಸಂತನರಸಾಪುರದಲ್ಲಿ ₹ 210 ಕೋಟಿ ಮೊತ್ತದ ವಾಹನ ಬಿಡಿಭಾಗ ತಯಾರಿಕಾ ಘಟಕಗಳ ಸ್ಥಾಪನೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ.












Click it and Unblock the Notifications