New Railway Line: ಗದಗ-ಯಲವಿಗಿ ರೈಲ್ವೆ ಮಾರ್ಗ ಯೋಜನೆ ಅಪ್ಡೇಟ್ಸ್, ಹೈದರಾಬಾದ್‌ಗೆ ಸಂಪರ್ಕ..
ಬೆಂಗಳೂರು, ಮೇ 23: ಗದಗನಿಂದ ಹುಬ್ಬಳ್ಳಿಗೆ 1884 ರಲ್ಲಿ ಮೊದಲ ರೈಲು ಆರಂಭವಾಗಿದೆ. ಸುದೀರ್ಘವಾದ ಪ್ರಯಾಣ ಇತಿಹಾಸ ಹೊಂದಿರುವ ಗದಗ ರೈಲು ನಿಲ್ದಾಣ ಮೇಲ್ದರ್ಜೆಗೆ ಏರಿದೆ. ನಿತ್ಯ ಈ ರೈಲ್ವೆ ನಿಲ್ದಾಣದಿಂದ 5000 ಕ್ಕೂ ಹೆಚ್ಚು ಪ್ರಯಾಣಿಸುತ್ತಾರೆ. ಇತ್ತ ಗದಗ-ವಾಡಿ ರೈಲ್ವೆ ಲೈನ್ ಯೋಜನೆ ನಡೆಯುತ್ತಿದೆ. ಜೊತೆಗೆ ಗದಗನಿಂದ -ಯಲವಿಗಿಗೆ (gadag yalvigi railway line) ಹೊಸ ರೈಲು ಮಾರ್ಗ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಮಾಜಿ ಸಿಎಂ, ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಹೊಸ ರೈಲ್ವೆ ಯೋಜನೆಗಳ ಅಪ್ಡೇಟ್ ನೀಡಿದ್ದಾರೆ.
ನೈರುತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ಏರ್ಪಡಿಸಿದ್ದ ಅಮೃತ ಭಾರತ ಯೋಜನೆ ಅಡಿಯಲ್ಲಿ ನವಿಕರಣಗೊಂಡಿರುವ ಗದಗ ರೈಲ್ವೆ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಅವರು ಮಾತನಾಡಿದರು. ವಿಕಸಿತ ಭಾರತ ಮಾಡಲು ರೈಲ್ವೆ ಪಾತ್ರ ದೊಡ್ಡದು ಎಂದರು.

ಗದಗ ವಾಡಿ ರೈಲ್ವೆ ಲೈನ್ ಯೋಜನೆ ನಡೆಯುತ್ತಿದೆ. ಅದು ಪೂರ್ಣವಾದರೆ ಹೈದರಾಬಾದ್ ಸಂಪರ್ಕ ಅನುಕೂಲವಾಗಲಿದೆ. ಇನ್ನೊಂದು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಒತ್ತಾಸೆಯಿಂದ ಗದಗ- ಯಲವಿಗೆವರೆಗೆ ಹೊಸ ಮಾರ್ಗ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗದಗ- ಯಲವಿಗೆವರೆಗೆ ರೈಲ್ವೆ ಸಂಪರ್ಕ ಜೊಡಣೆಯಾದರೆ ಹಾವೇರಿ, ಗದಗ ಮೂಲಕ ಹೈದರಾಬಾದ್ ಹೋಗಲು ಸಹಾಯವಾಗುತ್ತದೆ. ನರೇಂದ್ರ ಮೋದಿ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಬ್ರಾಡ್‌ಗೆಜ್, ಡಬಲ್ ಗೇಜ್, ಎಲೆಕ್ಟ್ರಿಪಿಕೇಶನ್ ಮತ್ತು ಸಿಗ್ನಲ್ ಗಳನ್ನು ಆಧುನಿಕರಣ ಮಾಡಲಾಗಿದೆ. ಅತಿ ವೇಗದ ಸುಮಾರು 500 ಕ್ಕೂ ಹೆಚ್ಚು ವಂದೇ ಭಾರತ ರೈಲುಗಳು ದೇಶದಲ್ಲಿ ಸಂಚರಿಸುವ ಮೂಲಕ ರೈಲ್ವೆಯಲ್ಲಿ ದೊಡ್ಡ ಕ್ರಾಂತಿಯಾಗಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ರೈಲು ಮತ್ತು ರಸ್ತೆ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ. ಐತಿಹಾಸಿಕ ಗದಗಿನ ರೈಲ್ವೆ ನಿಲ್ದಾಣ ಅಭಿವೃದ್ಧಿಗೆ ಸುಮಾರು 23 ಕೋಟಿ ರೂಪಾಯಿಗೂ ಹೆಚ್ಚು ಹಣ ಖರ್ಚು ಮಾಡಿದ್ದು ಸಂತಸ ತಂದಿದೆ. ಗದಗ ಐತಿಹಾಸಿಕ ನಾಡು ಪುಣ್ಯಾಶ್ರಮ, ಕುಮರವ್ಯಾಸರ ನಾಡು, ಮುದ್ರಣ ಕಾಶಿಯಾಗಿ ಪ್ರಸಿದ್ದಿ ಪಡೆದಿದೆ. ಬೆಟಗೇರಿ ಕೈಮಗ್ಗಗಳಿಗೆ ಪ್ರಸಿದ್ದಿಯಾಗಿದೆ. ಕೈಗಾರಿಕೆ, ವಾಣಿಜ್ಯ ಮತ್ತು ಪ್ರವಾಸೋದ್ಯಮಕ್ಕೆ ಬಹಳ ದೊಡ್ಡ ಇಂಬು ಕೊಡುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬೊಮ್ಮಾಯಿ ಧನ್ಯವಾದ ಹೇಳಿದರು.
ಗದಗ ನಿಲ್ದಾಣವನ್ನು ಅಮೃತ್ ಯೋಜನೆ ಅಡಿಯಲ್ಲಿ ಮೇಲ್ದರ್ಜೆಗೆ ಏರಿಸಲಾಗಿದೆ. ಎಸ್ಕಲೇಟರ್, ಲಿಪ್ಟ್, ಓವರ್ ಬ್ರಿಡ್ಜ್, ಫುಟ್ ಓವರ್ ಬ್ರಿಡ್ಜ್, ಶೌಚಾಲಯ, ಪ್ರಯಾಣಿಕರಿಗೆ ಎಲ್ಲ ರೀತಿಯ ಸವಲತ್ತು ನೀಡಲಾಗಿದೆ. ಪ್ರಯಾಣಿಕ ಸ್ನೇಹಿ ನಿಲ್ದಾಣವಾಗಿ ಮಾಡಲಾಗಿದೆ. ವಾಣಿಜ್ಯಾಭಿವೃದ್ದಿ ಮಾಡುವುದು, ನಮ್ಮ ಭಾರತವನ್ನು ವಿಕಸಿತ ಭಾರತ ಮಾಡುವಲ್ಲಿ ರೈಲ್ವೆ ಪ್ರಮುಖ ಪಾತ್ರ ವಹಿಸುತ್ತದೆ. ಇದನ್ಮು ಅರಿತು ರೈಲ್ವೆ ಮತ್ತು ರಸ್ತೆಗಳ ಅಭಿವೃದ್ಧಿ ಮಾಡುತ್ತಿರುವುದು ಶ್ಲಾಘನೀಯ ಕೇಂದ್ರ ಸರ್ಕಾರದ ಕಾರ್ಯ ಬಣ್ಣಿಸಿದರು.












Click it and Unblock the Notifications