ಚಿಕ್ಕಮಗಳೂರು, ಹುಬ್ಬಳ್ಳಿ ಮತ್ತು ಶಿವಮೊಗ್ಗ ರೈಲು ಪ್ರಯಾಣಿಕರ ಗಮನಕ್ಕೆ, ಪ್ರಾಯೋಗಿಕ ನಿಲುಗಡೆ
ಬೆಂಗಳೂರು, ನವೆಂಬರ್ 17: ನೈಋತ್ಯ ರೈಲ್ವೆ ಕೆಲವು ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಾಯೋಗಿಕವಾಗಿ ನಿಲುಗಡೆ ನೀಡಿ ಆದೇಶವನ್ನು ಹೊರಡಿಸಿದೆ. ಪ್ರಯಾಣಿಕರ ಬೇಡಿಕೆಯಂತೆ ಈ ನಿಲುಗಡೆಯನ್ನು ನೀಡಲಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಈ ಪ್ರಾಯೋಗಿಕ ನಿಲುಗಡೆಗಳಿಗೆ ನವೆಂಬರ್ 16ರಂದು ಚಾಲನೆಯನ್ನು ನೀಡಿದ್ದಾರೆ. ಪ್ರಯಾಣಿಕರು ಈ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬೆಂಗಳೂರು ನಗರದ ಮಲ್ಲೇಶ್ವರದ ಸಂಪಿಗೆ ರೋಡ್ ಮತ್ತು ತಿಪಟೂರು ರೈಲು ನಿಲ್ದಾಣದಲ್ಲಿ ಕೆಲವು ಎಕ್ಸ್‌ಪ್ರೆಸ್ ರೈಲುಗಳ ಹೆಚ್ಚುವರಿ ನಿಲುಗಡೆಗೆ ಅವಕಾಶವನ್ನು ನೀಡಲಾಗಿದೆ. ರೈಲು ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಈ ಪ್ರಾಯೋಗಿಕ ನಿಲುಗಡೆಯನ್ನು ಮುಂದುವರೆಸಲು ಕ್ರಮ ಕೈಗೊಳ್ಳಲಾಗುತ್ತದೆ.

ಈ ಕುರಿತು ನೈಋತ್ಯ ರೈಲ್ವೆ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದು, ಯಶವಂತಪುರ ಮತ್ತು ಚಿಕ್ಕಮಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16240/16239 ಅನ್ನು ಸಂಪಿಗೆ ರೋಡ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ನಿಲುಗಡೆ ಮಾಡಲಾಗುತ್ತಿದೆ ಎಂದು ಹೇಳಿದೆ.
ಕೆಎಸ್‌ಆರ್ ಬೆಂಗಳೂರು ಮತ್ತು ಎಸ್‌ಎಸ್‌ಎಸ್ ಹುಬ್ಬಳ್ಳಿ ನಡುವೆ ಚಲಿಸುವ ರೈಲು ಸಂಖ್ಯೆ 12079/ 12080 ಮತ್ತು ಕೆಎಸ್‌ಆರ್ ಬೆಂಗಳೂರು ಮತ್ತು ಶಿವಮೊಗ್ಗ ಟೌನ್ ನಡುವೆ ಚಲಿಸುವ ರೈಲು ಸಂಖ್ಯೆ 12089/ 12090 ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲುಗಳನ್ನು ತಿಪಟೂರು ನಿಲ್ದಾಣದಲ್ಲಿ ಪ್ರಾಯೋಗಿಕ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
ಪ್ರಾಯೋಗಿಕ ನಿಲುಗಡೆಯ ಸಮಯ
* ನವೆಂಬರ್ 15 ರಿಂದ ಫೆಬ್ರವರಿ 15, 2025ರವರೆಗೆ ರೈಲು ಸಂಖ್ಯೆ 16240 ಯಶವಂತಪುರ-ಚಿಕ್ಕಮಗಳೂರು ಎಕ್ಸ್‌ಪ್ರೆಸ್ ಸಂಜೆ 05:04ಕ್ಕೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಸಂಜೆ 05:05ಕ್ಕೆ ಹೊರಡಲಿದೆ.
* ನವೆಂಬರ್ 16ರಿಂದ ಫೆಬ್ರವರಿ 15, 2025ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 16239 ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ಬೆಳಗ್ಗೆ 11:13ಕ್ಕೆ ಸಂಪಿಗೆ ರೋಡ್ ನಿಲ್ದಾಣವನ್ನು ತಲುಪಿ ಬೆಳಗ್ಗೆ 11:14ಕ್ಕೆ ಹೊರಡಲಿದೆ.
* ನವೆಂಬರ್ 16ರಿಂದ ಮೇ 15, 2025ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12079 ಕೆಎಸ್‌ಆರ್ ಬೆಂಗಳೂರು-ಎಸ್‌ಎಸ್‌ಎಸ್ ಹುಬ್ಬಳ್ಳಿ ಜನಶತಾಬ್ದಿ ಎಕ್ಸ್‌ಪ್ರೆಸ್ ಬೆಳಗ್ಗೆ 07:49ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ಬೆಳಗ್ಗೆ 07:50ಕ್ಕೆ ಹೊರಡಲಿದೆ.
* ನವೆಂಬರ್ 15ರಿಂದ ಮೇ 15, 2025ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12080 ಎಸ್‌ಎಸ್‌ಎಸ್ ಹುಬ್ಬಳ್ಳಿ - ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ ಸಂಜೆ 06:34ಕ್ಕೆ ತಿಪಟೂರು ನಿಲ್ದಾಣಕ್ಕೆ ಬಂದು ಸಂಜೆ 06:35ಕ್ಕೆ ಹೊರಡಲಿದೆ.
* ನವೆಂಬರ್ 15ರಿಂದ ಮೇ 15, 2025ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12089 ಕೆಎಸ್‌ಆರ್ ಬೆಂಗಳೂರು-ಶಿವಮೊಗ್ಗ ಟೌನ್ ಜನಶತಾಬ್ದಿ ಎಕ್ಸ್‌ಪ್ರೆಸ್ ಸಂಜೆ 07:09ಕ್ಕೆ ತಿಪಟೂರು ನಿಲ್ದಾಣವನ್ನು ತಲುಪಿ ಸಂಜೆ 07:10ಕ್ಕೆ ಹೊರಡಲಿದೆ.
* ನವೆಂಬರ್ 16ರಿಂದ ಮೇ 15, 2025ರವರೆಗೆ ಜಾರಿಗೆ ಬರುವಂತೆ ರೈಲು ಸಂಖ್ಯೆ 12090 ಶಿವಮೊಗ್ಗ ಟೌನ್ - ಕೆಎಸ್‌ಆರ್ ಬೆಂಗಳೂರು ಜನಶತಾಬ್ದಿ ಎಕ್ಸ್‌ಪ್ರೆಸ್ ಬೆಳಗ್ಗೆ 07:14ಕ್ಕೆ ತಿಪಟೂರು ನಿಲ್ದಾಣಕ್ಕೆ ಬಂದು ಬೆಳಗ್ಗೆ 07:15ಕ್ಕೆ ಹೊರಡಲಿದೆ.
ಈ ಹೆಚ್ಚುವರಿ ನಿಲುಗಡೆಯು ಸಂಪಿಗೆ ರೋಡ್ ಮತ್ತು ತಿಪಟೂರಿನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವನ್ನು ಒದಗಿಸುತ್ತದೆ ಮತ್ತು ಈ ಪ್ರದೇಶದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications