Budget 2024: ಕೇಂದ್ರ ಬಜೆಟ್, ಧರ್ಮಸ್ಥಳದ ಭಕ್ತರಿಗೆ ಸಿಹಿಸುದ್ದಿ?

ಬೆಂಗಳೂರು, ಜುಲೈ 22: ಲೋಕಸಭೆಯ ಬಜೆಟ್ ಅಧಿವೇಶನ ಸೋಮವಾರ ಆರಂಭವಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಅನ್ನು ಮಂಗಳವಾರ ಮಂಡಿಸಲಿದ್ದಾರೆ.

ಈ ವರ್ಷದ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡನೆ ಮಾಡಲಾಗಿತ್ತು. ಆದರೆ ಈಗ ಲೋಕಸಭೆ ಚುನಾವಣೆ ಮುಗಿದು, ಪ್ರಧಾನಿ ನರೇಂದ್ರ ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ.

Survey For New Railway Line Btween Kolluru Dharmasthala And Kukke Subramanya

ಸಾಮಾನ್ಯ ಮತ್ತು ರೈಲ್ವೆ ಬಜೆಟ್ ಒಟ್ಟಿಗೆ ಮಂಡಿಸಲಾಗುತ್ತದೆ. ರೈಲ್ವೆ ಬಜೆಟ್ ಮೇಲೆ ಕರ್ನಾಟಕಕ್ಕೆ ಅಪಾರವಾರ ನಿರೀಕ್ಷೆ ಇದೆ. ಕಾರಣ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ ವಿಧಾನಸಭೆಯಿಂದ ಆಯ್ಕೆಯಾದವರು. ಅಲ್ಲದೇ ತುಮಕೂರು ಸಂಸದ ವಿ. ಸೋಮಣ್ಣ ರೈಲ್ವೆ ಖಾತೆಯ ರಾಜ್ಯ ಸಚಿವರು. ಆದ್ದರಿಂದ ರಾಜ್ಯಕ್ಕೆ ಹಲವು ಕೊಡುಗೆ ನಿರೀಕ್ಷೆ ಮಾಡಲಾಗಿದೆ.

ಧರ್ಮಸ್ಥಳದ ಭಕ್ತರಿಗೆ ಸಿಹಿಸುದ್ದಿ?: ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕದ ಕರಾವಳಿ ಭಾಗದ ಪ್ರಸಿದ್ಧ ಧಾರ್ಮಿಕ ಕೇಂದ್ರ ಧರ್ಮಸ್ಥಳದ ಭಕ್ತರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ. ಕಳೆದ ವಾರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದರು. ಜಿಲ್ಲೆಗೆ ಸಂಬಂಧಿಸಿದ ರೈಲು ಯೋಜನೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿದ್ದು, ಜನಪ್ರತಿನಿಧಿಗಳ ಮನವಿ ಸ್ವೀಕಾರ ಮಾಡಿದ್ದರು.

ಬೆಳ್ತಂಗಡಿಯಲ್ಲಿ ಅಭಿನಂದನೆ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ್ದ ವಿ. ಸೋಮಣ್ಣ, "ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಶಾಸಕ ಹರೀಶ್ ಪೂಂಜ ಅವರ ಬೇಡಿಕೆಯಂತೆ ಕೊಲ್ಲೂರು-ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ ರೈಲು ಯೋಜನೆ ಸಮೀಕ್ಷೆ ಕಾರ್ಯ ಆರಂಭಿಸಲಾಗುತ್ತದೆ" ಎಂದು ಹೇಳಿದ್ದರು.

"ಬಹುವರ್ಷದ ಬೇಡಿಕೆಯಾದ ಕಡೂರು-ಮೂಡಿಗೆರೆ ರೈಲ್ವೆ ಮಾರ್ಗವನ್ನು ಮುಂದುವರೆಸಿದ್ದೇವೆ. ಭಕ್ತರ ಅನುಕೂಲಕ್ಕಾಗಿ ಧಾರ್ಮಿಕ ಕೇಂದ್ರವನ್ನು ಕೇಂದ್ರವಾಗಿಟ್ಟುಕೊಂಡು ದೆಹಲಿಗೆ ತೆರಳಿ ಕೊಲ್ಲೂರು-ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ ಬೆಸೆಯಲು ರೈಲ್ವೆ ಮಾರ್ಗದ ವಿಸ್ತೃತ ಯೋಜನೆಯನ್ನು ಶೀಘ್ರವೇ ಕಾರ್ಯರೂಪಕ್ಕೆ ತರಲಾಗುತ್ತದೆ" ಎಂದು ತಿಳಿಸಿದ್ದರು.

ಶಾಸಕ ಹರೀಶ್ ಪೂಂಜ ಮಾತನಾಡಿ, "ಬೆಳ್ತಂಗಡಿ ರೈಲ್ವೆ ಸಂಪರ್ಕದಿಂದ ವಂಚಿತವಾಗಿರುವ ತಾಲೂಕು. ಕೊಲ್ಲೂರು ಮಾರ್ಗವಾಗಿ ಕಾರ್ಕಳ, ಹೆಬ್ರಿ, ಬೈಂದೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸಂಪರ್ಕ ಮತ್ತು ಹಾಸನ, ಬೇಲೂರು, ಬೈರಾಪುರ, ಶಿಶಿಲ, ಉಪ್ಪಿನಂಗಡಿ, ಬಿ. ಸಿ. ರೋಡ್ ಸಂಪರ್ಕಿಸಲು ಸಮೀಕ್ಷೆ ನಡೆಸಿ, ಯೋಜನೆ ಅನುಷ್ಠಾನಗೊಳಿಸಿದರೆ ಅನುಕೂಲವಾಗಲಿದೆ" ಎಂದರು.

ಈ ಹೊಸ ಮಾರ್ಗ ಮಾತ್ರವಲ್ಲದೇ ಕರ್ನಾಟಕ ಕರಾವಳಿ ಭಾಗಕ್ಕೆ ಪ್ರತ್ಯೇಕ ರೈಲ್ವೆ ವಲಯ ಬೇಕು ಎಂದು ಸಹ ಬೇಡಿಕೆ ಇಡಲಾಗಿದೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಈ ಕುರಿತು ಸಚಿವ ವಿ. ಸೋಮಣ್ಣಗೆ ಮನವಿಯನ್ನು ಸಲ್ಲಿಸಿದ್ದಾರೆ. ಪಾಲ್ಘಾಟ್, ಮೈಸೂರು ಮತ್ತು ಕೊಂಕಣ ರೈಲ್ವೆಗೆ ಮಂಗಳೂರು ಸಂಪರ್ಕ ಕೊಂಡಿಯಾಗಿದೆ. ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನ ಮಾಡಬೇಕು, ಕರ್ನಾಟಕ ಕರಾವಳಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸೃಜಿಸಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಸಚಿವ ವಿ. ಸೋಮಣ್ಣ, "ಸಕಲೇಶಪುರ ಮಾರ್ಗವಾಗಿ ಕುಕ್ಕೆ ಸುಬ್ರಮಣ್ಯ ಸಂಪರ್ಕ ಕಲ್ಪಿಸುವ ರೈಲು ಮಾರ್ಗದಲ್ಲಿ ಪ್ರಯಾಣಕ್ಕೆ 3 ಗಂಟೆ ಕಾಲ ಬೇಕಾಗುತ್ತದೆ. ಈ ಅವಧಿಯನ್ನು ಕಡಿಮೆ ಮಾಡಲು ಹೊಸ ರೈಲು ಮಾರ್ಗಕ್ಕೆ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್‌ನಲ್ಲಿ ರೈಲ್ವೆ ಇಲಾಖೆ ಅನುದಾನ ಹಂಚಿಕೆ, ಹೊಸ ಘೋಷಣೆಗಳ ಪ್ರಮುಖ ಅಂಶಗಳನ್ನು ಮಾತ್ರ ಓದುತ್ತಾರೆ. ಬಳಿಕ ರೈಲ್ವೆ ವಿಭಾಗದ ಅಧಿಕಾರಿಗಳು ಪಿಂಕ್ ಮೂಲಕ ವಿಭಾಗಕ್ಕೆ ಸಿಕ್ಕಿರುವ ಹೊಸ ರೈಲುಗಳು, ಹೊಸ ಮಾರ್ಗದ ಸಮೀಕ್ಷೆ, ಅನುದಾನದ ಮಾಹಿತಿಯನ್ನು ವಿವರಿಸುತ್ತಾರೆ.

ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕ ಕರಾವಳಿ ಭಾಗದ ಪ್ರಮುಖ ಬೇಡಿಕೆಯಾದ ಕೊಲ್ಲೂರು-ಧರ್ಮಸ್ಥಳ-ಕುಕ್ಕೆ ಸುಬ್ರಮಣ್ಯ ರೈಲು ಯೋಜನೆ ಸಮೀಕ್ಷೆ ಕಾರ್ಯಕ್ಕೆ ಅನುಮೋದನೆ ಸಿಗಲಿದೆಯೇ? ಎಂದು ಕಾದು ನೋಡಬೇಕಿದೆ.

ರಾಜಧಾನಿ ಬೆಂಗಳೂರು ಮತ್ತು ಕರಾವಳಿ ಸಂಪರ್ಕಿಸಲು ಹೊಸ ರೈಲು ಬೇಕು. ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಸಂಪರ್ಕ ಬೇಕು ಎಂಬ ಬೇಡಿಕೆಯೂ ಇದೆ. ಈ ಕುರಿತು ಸಹ ಬಜೆಟ್‌ನಲ್ಲಿ ಘೋಷಣೆ ನಿರೀಕ್ಷೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+