ಶುಕ್ರವಾರ ಚಾ.ನಗರ-ಮೈಸೂರಿನಲ್ಲಿ ಹಾಲು ವಿತರಕರ ಮುಷ್ಕರ
ಚಾಮರಾಜನಗರ, ಫೆ.5 : ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಗಳಲ್ಲಿ ಶುಕ್ರವಾರ ಹಾಲಿನ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ನಂದಿನಿ ಹಾಲಿನ ವಿತರಕರು ಕೆಎಂಎಫ್ ವಿರುದ್ಧ ಒಂದು ದಿನದ ಮುಷ್ಕರ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.
ಕೆಎಂಎಫ್ ನಿರ್ದೇಶದಂತೆ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವಿತರಕರಿಂದ ಒಡೆದು ಹೋದ ಹಾಲಿನ ಪ್ಯಾಕೆಟ್‌ಗಳನ್ನು ವಾಪಸ್ ಪಡೆಯುವುದನ್ನು ಸ್ಥಗಿತಗೊಳಿಸಿದೆ. [ತಮಿಳುನಾಡಿನಲ್ಲೂ ನಂದಿನಿ ಹಾಲು ಸಿಗುತ್ತೆ]

ಇದರಿಂದ ವಿತರಕರಿಗೆ ಪ್ರತಿದಿನ ನಷ್ಟ ಉಂಟಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದಾಗ ಸಮಸ್ಯೆ ಬಗರಹರಿಸುವ ಭರವಸೆ ನೀಡಿದ್ದರು. ಆದರೆ, ಒಂದು ತಿಂಗಳಾದರೂ ಪರಿಸ್ಥಿತಿ ಬದಲಾಗಿಲ್ಲ. ಆದ್ದರಿಂದ ವಿತರಕರು ಶುಕ್ರವಾರ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. [ಮಾರುಕಟ್ಟೆಗೆ ಬರಲಿದೆ ಕೆಎಂಎಫ್ ಕುಡಿಯುವ ನೀರು]
ಒಟ್ಟು 80 ಲೀಟರ್ ಹಾಲಿನ ಪ್ಯಾಕೆಟ್‌ನಲ್ಲಿ ಒಂದು ಪ್ಯಾಕ್ ಸಾಗಣೆ ಮಾಡುವಾಗ ಒಡೆದು ಹೋಗಿರುವ ಸಾಧ್ಯತೆ ಇದೆ. ಇದನ್ನು ಒಕ್ಕೂಟ ವಾಪಸ್ ಪಡೆಯದಿದ್ದರೆ ನಾವು ನಷ್ಟ ಭರಿಸಬೇಕಾಗುತ್ತದೆ ಎಂಬುದು ವಿತರಕರ ಆರೋಪವಾಗಿದೆ.
ಆದರೆ, ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ರಾಜಶೇಖರಮೂರ್ತಿ ಅವರು, ನಾವು ಒಡೆದ ಪ್ಯಾಕೆಟ್ ವಾಪಸ್ ಪಡೆಯುವುದನ್ನು ಸ್ಥಗಿತಗೊಳಿಸಿಲ್ಲ. ವಿತರಕರ ನಡುವಿನ ಗೊಂದಲದಿಂದಾಗಿ ಇಂತಹ ಸಮಸ್ಯೆ ಉಂಟಾಗಿದೆ. ಇದನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ವಿತರಕರು ಮತ್ತು ಒಕ್ಕೂಟದ ನಡುವಿನ ಗೊಂದಲದಿಂದಾಗಿ ಎರಡು ಜಿಲ್ಲೆಗಳಲ್ಲಿ ಶುಕ್ರವಾರ ಹಾಲಿನ ಪೂರೈಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇಂದು ವಿತರಕರೊಡನೆ ಒಕ್ಕೂಟ ಸಭೆ ನಡೆಸಲಿದ್ದು, ಸಭೆ ಸಫಲವಾದರೆ ಮುಷ್ಕರ ವಾಪಸ್ ಪಡೆಯುವ ಸಾಧ್ಯತೆ ಇದೆ.












Click it and Unblock the Notifications