ಅಬ್ಬಾ... ಎಂಥಾ ಬಿಸಿಲು!: ಉರಿ ಉರಿ ಬಿಸಿಲಿಗೆ ಬೆವರಿದ ಬೆಂಗಳೂರು- ಕರಾವಳಿಯಲ್ಲಿ ಉಷ್ಣ ಅಲೆ ಬಗ್ಗೆ ಐಎಂಡಿ ಸುಳಿವು
ಬೆಂಗಳೂರು ಏಪ್ರಿಲ್ 13: ರಾಜ್ಯದಲ್ಲಿ ಬೇಸಿಗೆಯ ಬಿಸಿಲಿಗೆ ಜನ ಬೇಸತ್ತಿದ್ದಾರೆ. ಉರಿ ಉರಿ ಬಿಸಿಲಿನಿಂದಾಗಿ ಮನೆ ಬಿಟ್ಟು ಹೊರಬಾರದಂತ ಸ್ಥಿತಿ ನಿರ್ಮಾಣವಾಗಿದೆ. ಸುಡು ಬಿಸಿಲಿಗೆ ಛತ್ರಿ, ದುಪ್ಪಟ್ಟ, ಕ್ಯಾಪ್‌ಗಳ ಮೊರೆ ಹೋಗುತ್ತಿದ್ದಾರೆ ಜನ. ಇತ್ತೀಚೆಗೆ ತಾಪಮಾನ ಎಷ್ಟಾಗಿದೆ ಅಂದರೆ ಸುಟ್ಟು ಹೋಗುವ ಭೀತಿ ಬೆಂಗಳೂರಿಗೆ ಜನಕ್ಕೆ ಶುರುವಾಗಿದೆ.
ರಾಜ್ಯದಲ್ಲಿ ಬೇಸಿಗೆ ಉತ್ತುಂಗದ ದಿನಗಳು ಸಮೀಪಿಸುತ್ತಿವೆ. ಮುಂದಿನ ಎರಡು ವಾರಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ 'ಉಷ್ಣ ಅಲೆ' ಸಾಧ್ಯತೆ ಇದೆ ಎಂದು ಹವಾಮಾನಶಾಸ್ತ್ರಜ್ಞರು ಸುಳಿವು ನೀಡಿದ್ದಾರೆ. ಈ ವೇಳೆ ತಾಪಮಾನ ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಲಿದೆ ಎಂದು ಸೂಚನೆ ನೀಡಲಾಗಿದೆ. ತಾಪಮಾನ ಮೂರು ಡಿಗ್ರಿ ಸೆಲ್ಸಿಯಸ್ ಏರಿಕೆಯಾಗುವ ಸಾಧ್ಯತೆಯಿದ್ದು, 38-39 ಡಿಗ್ರಿ ಸೆಲ್ಸಿಯಸ್‌ಗೆ ತಲುಪುತ್ತದೆ ಎಂದು ಸೂಚನೆ ನೀಡಲಾಗಿದೆ. ಅದೇ ರೀತಿ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಾದರಸದ ಮಟ್ಟವು 43-44 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಸಾಧ್ಯತೆಯಿದೆ.

ಈಗಾಗಲೇ ತೀವ್ರ 'ಶಾಖದ ಅಲೆ' ಪರಿಸ್ಥಿತಿಯಲ್ಲಿ ತತ್ತರಿಸಿರುವ ಕರ್ನಾಟಕದ ಹಲವು ಭಾಗಗಳಲ್ಲಿ ಗರಿಷ್ಠ 36-37 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಕಳೆದೆರಡು ದಿನಗಳಿಂದ ಉತ್ತರ ಕರ್ನಾಟಕ ಭಾಗದ ಕಲಬುರಗಿ ಮತ್ತು ಪಕ್ಕದ ಜಿಲ್ಲೆಗಳಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಟಿದೆ.
ಮೈಸೂರು ಮತ್ತು ದಕ್ಷಿಣ ಒಳನಾಡಿನ ಇತರ ಜಿಲ್ಲೆಗಳಂತಹ ಸ್ಥಳಗಳು 36-37 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನವನ್ನು ಕಾಣುತ್ತಿವೆ. ಇದು ಈ ಪ್ರದೇಶದ ಸಾಮಾನ್ಯ ತಾಪಮಾನಕ್ಕಿಂತ 2-3 ಡಿಗ್ರಿ ಹೆಚ್ಚು ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಎ ಪ್ರಸಾದ್ ವಿವರಿಸಿದರು.

"ಕರಾವಳಿ ಕರ್ನಾಟಕ ಜಿಲ್ಲೆಗಳಲ್ಲಿ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ. ಈ ಜಿಲ್ಲೆಗಳಲ್ಲಿ ಬೇಸಿಗೆಯಲ್ಲಿ ಸಾಮಾನ್ಯ ತಾಪಮಾನ 33-35 ಡಿಗ್ರಿ ಸೆಲ್ಸಿಯಸ್ ನಡುವೆ ಇದ್ದರೆ, ಇದು 37-38 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ಸಾಧ್ಯತೆಯಿದೆ. ಜೊತೆಗಿದು ಶಾಖದ ಅಲೆಯ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ಕರಾವಳಿಯಲ್ಲಿ ಹೆಚ್ಚಿದ ತಾಪಮಾನ ಜನರಲ್ಲಿ ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ" ಎಂದು ಪ್ರಸಾದ್ ಸ್ಪಷ್ಟಪಡಿಸಿದರು.
ಹೆಚ್ಚಿದ ತಾಪಮಾನಕ್ಕೆ ಕಾರಣಗಳನ್ನು ಪಟ್ಟಿಮಾಡುತ್ತಾ, ಪ್ರಸಾದ್ ವಿವರಿಸಿದರು: 'ಕರಾವಳಿ ಪ್ರದೇಶಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ 3 ಡಿಗ್ರಿ ಮತ್ತು ರಾಜ್ಯದ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ 2 ಡಿಗ್ರಿಗಳಷ್ಟು ತಾಪಮಾನ ಹೆಚ್ಚಿರುವುದು ಪ್ರಮುಖ ಕಾರಣವಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಕೆಲವೇ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ತರುವಾಯ ತಾಪಮಾನ ಆತಂಕಕಾರಿಯಾಗಿ ಏರುತ್ತದೆ. ಇದರ ಪರಿಣಾಮವಾಗಿ 'ಶಾಖದ ಅಲೆ' ಪರಿಸ್ಥಿತಿಗಳು ಉಂಟಾಗುತ್ತವೆ' ಎಂದಿದ್ದಾರೆ.

45 ಡಿಗ್ರಿ ಸೆಲ್ಸಿಯಸ್ ತಾಪಮಾನದ ಮಟ್ಟ ದಾಟಿದರೆ ಮಾತ್ರ ಉತ್ತರ ಕರ್ನಾಟಕದ ಒಳನಾಡಿನಲ್ಲಿ 'ಶಾಖದ ಅಲೆ' ಉಂಟಾಗಲು ಸಾಧ್ಯ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 'ಸದ್ಯ ಇದು 44 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟುವ ನಿರೀಕ್ಷೆಯಿದೆ. ಇದು 45 ಡಿಗ್ರಿ ದಾಟಿದರೆ ಮತ್ತು ಎರಡು ದಿನಗಳವರೆಗೆ ಸ್ಥಿರವಾಗಿದ್ದರೆ, ನಾವು ಶಾಖದ ಅಲೆಯ ಸ್ಥಿತಿಯನ್ನು ಪರಿಗಣಿಸಬೇಕಾಗಬಹುದು' ಎಂದು ಐಎಂಡಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು.
ಬೆಂಗಳೂರು ಮತ್ತು ದಕ್ಷಿಣ-ಆಂತರಿಕ ಕರ್ನಾಟಕದ ಇತರ ಪ್ರದೇಶಗಳಲ್ಲಿ ಸಾಮಾನ್ಯ ತಾಪಮಾನಕ್ಕಿಂತ 2 ಡಿಗ್ರಿಗಳಷ್ಟು ತಾಪಮಾನ ಹೆಚ್ಚಾಗಲಿದೆ. ಬೆಂಗಳೂರು ನಗರ 2 ಡಿಗ್ರಿ ಹೆಚ್ಚಳದೊಂದಿಗೆ ಮುಂದಿನ ಕೆಲವು ದಿನಗಳಲ್ಲಿ 37-38 ಡಿಗ್ರಿ ಸೆಲ್ಸಿಯಸ್ ತಾಪಮಾನಕ್ಕೆ ಸಾಕ್ಷಿಯಾಗಲಿದೆ ಎಂದು ಪ್ರಸಾದ್ ಹೇಳಿದರು.












Click it and Unblock the Notifications