ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ ಸುಮಲತಾ: ಎಲ್ಲಾ ಗೊಂದಲಗಳಿಗೂ ಏ.3 ರಂದು ತೆರೆ ಬೀಳುತ್ತಾ?
ಬೆಂಗಳೂರು, ಏಪ್ರಿಲ್ 01: ಲೋಕಸಭಾ ಚುನಾವಣೆ ಹಿನ್ನೆಲೆ ಮೈತ್ರಿಯಾಗಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸುಮಲತಾ ಅವರ ನಿರ್ಧಾರವೇ ದೊಡ್ಡ ತಲೆನೋವಾಗಿದೆ. ಮಂಡ್ಯದಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಹಾಲಿ ಮಂಡ್ಯ ಸಂಸದೆ ಸುಮಲತಾ ಅವರ ಮುಂದಿನ ತೀರ್ಮಾನವೇ ಗೊಂದಲವಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಏಪ್ರಿಲ್ 3 ರಂದು ಮಂಡ್ಯದಲ್ಲಿಯೇ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತೇನೆ, ನನ್ನ ಜೊತೆಗೆ ದರ್ಶನ ಇರುತ್ತಾರೆ, ಮಂಡ್ಯ ಜಿಲ್ಲೆಯ ನಮ್ಮ ಬೆಂಬಲಿಗರು, ಅಂಬರೀಶ್ ಅವರ ಅಭಿಮಾನಿಗಳು ಇಲ್ಲಿಗೆ ಬಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ ಎಂದು ಸುಮಲತಾ ಹೇಳಿದರು.

ಮೊದಲಿನಿಂದಲೂ ಸಹ ನಾನು ಜನಾಭಿಪ್ರಾಯ ಸಂಗ್ರಹಿಸಿಯೇ ಮುಂದಿನ ಹೆಜ್ಜೆ ಇಟ್ಟಿದ್ದೇನೆ. ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾನು ಕೂಡ ನಮ್ಮ ಆಪ್ತ ವಲಯದಲ್ಲಿ ಚರ್ಚೆ ಮಾಡಿ ನನ್ನ ನಿರ್ಧಾರವನ್ನು ಮಂಡ್ಯದಲ್ಲಿಯೇ ಘೋಷಣೆ ಮಾಡುತ್ತೇನೆ ಎಂದು ಮತ್ತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸುಳಿವು ನೀಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.
ನಾನು ಪಕ್ಷಕ್ಕಿಂತ ಅಂಬರೀಶ್ ಅವರ ಅಭಿಮಾನಿಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ . ಕಳೆದ ವರ್ಷ ಅವರ ಪರವಾಗಿ ದರ್ಶನ್ ಹಾಗೂ ಯಶ್ ಪ್ರಚಾರ ಮಾಡಿದ್ದರು. ಈ ಬಾರಿ ತಮ್ಮ ನಿರ್ಧಾರ ತಿಳಿಸುವಾಗ ದರ್ಶನ್ ಜೊತೆಯಲ್ಲಿ ಇರುವುದಾಗಿ ಸುಮಲತಾ ಅಂಬರೀಷ್ ಹೇಳಿಕೆ ಸಾಕಷ್ಟು ಕುತೂಹಲ ಮೂಡಿಸಿದೆ.
ಮೊನ್ನೆಯವರೆಗೂ ನಮ್ಮ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎಂಬ ವಿಶ್ವಾಸ ಇತ್ತು. ಬಿಜೆಪಿ ನಾಯಕರು ಕೂಡ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ ಎಂಬುದು ನನಗೆ ಗೊತ್ತಿದೆ. ಆದರೆ, ಬಿಜೆಪಿ ಈಗ ತೆಗೆದುಕೊಂಡಿರೋ ನಿರ್ಧಾರದಲ್ಲಿ ನಮ್ಮ ಭವಿಷ್ಯ ಏನು? ಎಂದು ಪ್ರಶ್ನಿಸಿದ ಸುಮಲತಾ, ನಮ್ಮನ್ನು ನಂಬಿಕೊಂಡಿರೋ ಜನರ ಭವಿಷ್ಯ ಏನು? ಎಂಬುದು ಮುಖ್ಯ ಆಗುತ್ತದೆ. ನಾನು ಬಿಜೆಪಿ ನಾಯಕರ ಜೊತೆ ಮಾತನಾಡಿದಾಗಲೂ ನನಗೆ ನನ್ನ ಭವಿಷ್ಯ ಮುಖ್ಯ ಅಲ್ಲ, ನನ್ನನ್ನು ನಂಬಿಕೊಂಡಿರೋ ಅಭಿಮಾನಿಗಳನ್ನು ಕಾಪಾಡಬೇಕಾದ ಕರ್ತವ್ಯ, ಜವಾಬ್ದಾರಿ ನನ್ನ ಮೇಲಿದೆ ಎಂದು ಸುಮಲತಾ ಅಂಬರೀಶ್ ಹೇಳಿದರು.
2019 ರ ಚುನಾವಣೆಯಲ್ಲಿಯೂ ಇದೇ ರೀತಿಯ ಸವಾಲು ಎದುರಾಗಿತ್ತು. ಆಗ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಆಗ ನಿಮಗೆ ಟಿಕೆಟ್ ಕೊಡುವುದಿಕ್ಕೆ ಆಗಲ್ಲ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಈಗ ಅದೇ ಸವಾಲು ಬದಲಾದ ರೀತಿಯಲ್ಲಿ ನಮ್ಮ ಮುಂದೆ ಬಂದಿದೆ. ಇದನ್ನು ಯಾವ ರೀತಿ ನಾವು ಎದುರಿಸಬೇಕು ಎಂಬ ಪ್ರಶ್ನೆ ನನ್ನ ಮುಂದಿದೆ. ಮುಂದಿನ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಸುಲಭವಾಗಿಲ್ಲ. ಏಪ್ರಿಲ್ 3 ರಂದು ನನ್ನ ನಿರ್ಧಾರವನ್ನ ಮಂಡ್ಯದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜೊತೆಗೆ ಚರ್ಚಿಸಿ ಪ್ರಕಟಿಸುವುದಾಗಿ ಸುಮಲತಾ ಅಂಬರೀಶ್ ತಿಳಿಸಿದರು.












Click it and Unblock the Notifications