ಸುಮಲತಾ ಅವರು ಮಂಡ್ಯ ಕ್ಷೇತ್ರ ಬಿಟ್ಟು ಹೋಗಲ್ವಂತೆ: ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರಾ?
2024ರ ಲೋಕಸಭೆ ಚುನಾವಣೆ ಗೆದ್ದು ಬೀಗಲು ಬಿಜೆಪಿ ರಣಕಹಳೆ ಮೊಳಗಿಸಿದೆ ಹೀಗಾಗಿಯೇ ಹೊಸ ಹೊಸ ರಣತಂತ್ರ ರೂಪಿಸುತ್ತಿದ್ದಾರೆ ಬಿಜೆಪಿ ನಾಯಕರು. ಅದ್ರಲ್ಲೂ ಬಿಜೆಪಿ ಕೇಂದ್ರ ನಾಯಕರು ಪಕ್ಷ ಬಲಪಡಿಸಲು ಎಲ್ಲಾ ರೀತಿಯ ತಂತ್ರ ರೂಪಿಸುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಹೀಗಿದ್ದಾಗ ಬಿಜೆಪಿ & ಜೆಡಿಎಸ್ ಮೈತ್ರಿಗೆ ಸುಮಲತಾ ಅವರ ಮಾತುಗಳು ಹೊಸ ಸವಾಲು ಎಸೆದಿವೆ!
ಹೌದು ಒಂದ್ಕಡೆ ರಾಜ್ಯದಲ್ಲಿ ಬಿಜೆಪಿ & ಜೆಡಿಎಸ್ ನಡುವೆ ಮೈತ್ರಿ ಬಗ್ಗೆ ಚರ್ಚೆ ನಡೆಯುವಾಗಲೇ ಮಂಡ್ಯ ಸಂಸದೆ ಸುಮಲತಾ ಅವರ ಮಾತುಗಳು ಸಂಚಲನ ಸೃಷ್ಟಿಸಿವೆ. 2024ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಹೀಗೆ ಮೈತ್ರಿಯ ಭಾಗವಾಗಿ ಹಳೇ ಮೈಸೂರು ಭಾಗದ ಕೆಲವು ಕ್ಷೇತ್ರಗಳ ಮೇಲೆ ಜೆಡಿಎಸ್ ಬಿಗಿಪಟ್ಟು ಸಾಧಿಸಿದೆ. ಹೀಗಾಗಿ ಮಂಡ್ಯ & ಹಾಸನ ಸೇರಿದಂತೆ ಇನ್ನು ಕೆಲ ಲೋಕಸಭಾ ಕ್ಷೇತ್ರಗಳು ಜೆಡಿಎಸ್ ಪಾಲಾಗುವ ಸಾಧ್ಯತೆ ಇದೆ. ಹೀಗಿದ್ದಾಗಲೇ ಹಾಲಿ ಮಂಡ್ಯ ಸಂಸದೆ ಸುಮಲತಾ ಅವರು ನೀಡಿರುವ ಹೇಳಿಕೆ ತಲ್ಲಣ ಸೃಷ್ಟಿ ಮಾಡಿದೆ.

ಮಂಡ್ಯ ಬಿಡಲ್ಲ ಅಂತಿದ್ದಾರೆ ಸುಮಲತಾ!
ಈ ಬಗ್ಗೆ ವಿಶೇಷ ಸುದ್ದಿಗೋಷ್ಠಿ ನಡೆಸಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅವರು, ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರವನ್ನು ನಾವು ಬಿಟ್ಟುಕೊಡಲ್ಲ ಎಂದಿದ್ದಾರೆ. ನಾನು ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಲ್ಲಿ ಬಿಜೆಪಿಗೆ ಸಪೋರ್ಟ್ ಮಾಡಿದ್ದೇನೆ. ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಚುನಾವಣೆಯಲ್ಲಿ ಓಡಾಡಿದ್ದೇನೆ. ಹೀಗೆ ಬಿಜೆಪಿ ಪರ ನಿಂತ ನನಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ಆಯ್ಕೆ ಇಲ್ಲ ಎಂದಿದ್ದಾರೆ ಹಾಲಿ ಮಂಡ್ಯ ಸಂಸದೆ ಸುಮಲತಾ.
ಅಂಬರೀಶ್ ಅವರ ಕನಸು ಉಲ್ಲೇಖ
ದಿವಂಗತ ಅಂಬರೀಶ್ ಅವರ ವಿಚಾರವನ್ನು ಕೂಡ ಇದೇ ವೇಳೆ ಪ್ರಸ್ತಾಪ ಮಾಡಿದ ಸಂಸದೆ ಸುಮಲತಾ ಅವರು, ಅಂಬರೀಶ್ ಅವರ ಕನಸು & ಆಸೆಗಳನ್ನ ನಾನು ಪೂರೈಸಬೇಕಾಗಿದೆ. ಅಂಬರೀಶ್ ಅವರ ತವರು ಭೂಮಿ ಮಂಡ್ಯ, ಹೀಗಾಗಿಯೇ ನಾನು ಮಂಡ್ಯ ಬಿಟ್ಟು ಬೇರೆ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ. ನಾನು ಸ್ಪರ್ಧೆ ಮಾಡಿದರೆ ಅದು ಮಂಡ್ಯದಿಂದ ಮಾತ್ರ ಎಂದು ಖಡಕ್ ಆಗಿ ಉತ್ತರಿಸಿದ್ದಾರೆ ಸಂಸದೆ ಸುಮಲತಾ.
ಮರುಕಳಿಸುತ್ತಾ 2019ರ ಲೋಕಸಭೆ ಫೈಟ್?
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ & ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದವು. 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿಗೆ ಇದು ಟಾಸ್ಕ್ ಆಗಿದ್ದಾಗಲೇ ಅಭ್ಯರ್ಥಿಯನ್ನ ಹಾಕದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಖುದ್ದಾಗಿ, ಪ್ರಧಾನಿ ನರೇಂದ್ರ ಮೋದಿ ಬೆಂಬಲವೂ ಸುಮಲತಾ ಅವರಿಗೆ ಸಿಕ್ಕಿತ್ತು ಎಂಬ ಮಾತು ಕೇಳಿಬಂದಿತ್ತು. ಆದ್ರೆ ಈಗ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಫಿಕ್ಸ್ ಆಗಿದ್ದು, ಮಂಡ್ಯ ಕ್ಷೇತ್ರದ ಬಗ್ಗೆ ಕುತೂಹಲ ಡಬಲ್ ಆಗಿದೆ.

ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಸಕ್ಸಸ್ ಆದರೆ ಕೆಲವು ಸ್ಥಾನಗಳನ್ನ ಬಿಜೆಪಿ ಬಿಟ್ಟುಕೊಡಲಿದೆ. ಹೊಂದಾಣಿಕೆ ಪೈಕಿ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ಗೆ ಹೆಚ್ಚಿನ ಸ್ಥಾನವು ಸಿಗುವ ನಿರೀಕ್ಷೆ ಇದೆ. ಈಗಿರುವ ಚರ್ಚೆ ಪ್ರಕಾರ ಸುಮಾರು 3ರಿಂದ 4 ಲೋಕಸಭೆ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿ ಹಾಕಬಹುದು. ಇನ್ನುಳಿದ 24 ಸ್ಥಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬಹುದು. ಪರಿಸ್ಥಿತಿ ಹೀಗಿದ್ದಾಗ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಮೈಸೂರು ಲೋಕಸಭಾ ಕ್ಷೇತ್ರಗಳಲ್ಲಿ ನಡುಕ ಶುರುವಾಗಿದೆ. ಅದರಲ್ಲೂ ಸಂಸದೆ ಸುಮಲತಾ ಅವರು ಮಂಡ್ಯ ಬಿಟ್ಟು ಕೊಡಲ್ಲ, ಎಂದು ಖಡಕ್ ಆಗಿ ಹೇಳಿದ್ದಾರೆ.












Click it and Unblock the Notifications