Sumalatha: ಸಂಸದೆ ಸುಮಲತಾ ದಿಢೀರ್ ಪ್ರಧಾನಿ ಮೋದಿ ಭೇಟಿ ಮಾಡಿದ್ದೇಕೆ?
ಒಂದ್ಕಡೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಬಗ್ಗೆ ಚರ್ಚೆ ನಡೆಯುವಾಗ ದೆಹಲಿಯಲ್ಲಿ ಇಂದು ಮಹತ್ವದ ಬೆಳವಣಿಗೆ ನಡೆದಿದೆ. 2024ರ ಲೋಕಸಭೆ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಕಾಂಗ್ರೆಸ್ ಎದುರಿಸಲು ಬಿಜೆಪಿ & ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎನ್ನಲಾಗಿದೆ. ಈಗಾಗಲೇ ಒಂದೆರಡು ಸುತ್ತಿನ ಮಾತುಕತೆ ಕೂಡ ನಡೆದಿದೆ. ಆದರೆ ಇದೇ ವೇಳೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ದಿಢೀರ್ ಪ್ರಧಾನಿ ಭೇಟಿ ಮಾಡಿದ್ದಾರೆ.
ಅಕಸ್ಮಾತ್ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಸಕ್ಸಸ್ ಆದರೆ ಕೆಲವು ಸ್ಥಾನಗಳನ್ನು ಬಿಜೆಪಿ ಬಿಟ್ಟುಕೊಡಲಿದೆ. ಹೊಂದಾಣಿಕೆ ಪೈಕಿ ಹಳೇ ಮೈಸೂರು ಭಾಗದಲ್ಲೇ ಜೆಡಿಎಸ್‌ಗೆ ಹೆಚ್ಚಿನ ಸ್ಥಾನ ಸಿಗುವ ನಿರೀಕ್ಷೆ ಇದೆ. ಈಗಿರುವ ಚರ್ಚೆ ಪ್ರಕಾರ ಸುಮಾರು 4 ಲೋಕಸಭೆ ಸ್ಥಾನಕ್ಕೆ ಜೆಡಿಎಸ್ ಅಭ್ಯರ್ಥಿಗಳನ್ನ ಹಾಕಬಹುದು ಹಾಗೇ ಇನ್ನುಳಿದ 24 ಸ್ಥಾನದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡಬಹುದು. ಪರಿಸ್ಥಿತಿ ಹೀಗಿದ್ದಾಗ ಮಂಡ್ಯ ಲೋಕಸಭಾ ಕ್ಷೇತ್ರ ಮತ್ತು ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ನಡುಕ ಶುರುವಾಗಿದೆ. ಇದೇ ವೇಳೆ ಮಂಡ್ಯ ಸಂಸದೆ ಸುಮಲತಾ ಅವರು ಪ್ರಧಾನಿ ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.

ಕಳೆದ ಬಾರಿ ಸುಮಲತಾಗೆ ಬೆಂಬಲ
2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕೆ ಇಳಿದಿದ್ದವು. 2019ರಲ್ಲಿ ಮಂಡ್ಯ ಕ್ಷೇತ್ರದಿಂದ ಮಾಜಿ ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಜೆಡಿಎಸ್ & ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಆಗಿದ್ದರು. ಬಿಜೆಪಿಗೆ ಇದು ದೊಡ್ಡ ಟಾಸ್ಕ್ ಆಗಿದ್ದಾಗಲೇ ಅಭ್ಯರ್ಥಿಯನ್ನೇ ಹಾಕದೆ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರಿಗೆ ಬೆಂಬಲ ನೀಡಿತ್ತು. ಖುದ್ದು ಪ್ರಧಾನಿ ನರೇಂದ್ರ ಮೋದಿ ಬೆಂಬಲವೂ ಸುಮಲತಾ ಅವರಿಗೆ ಸಿಕ್ಕಿತ್ತು ಎಂಬ ಮಾತು ಇದೆ. ಆದ್ರೆ ಈಗ ಜೆಡಿಎಸ್ & ಬಿಜೆಪಿ ಮಧ್ಯೆ ಮೈತ್ರಿ ಫಿಕ್ಸ್ ಆಗೋದ್ರೆ ಮಂಡ್ಯ ಲೋಕಸಭಾ ಕ್ಷೇತ್ರದ ಪರಿಸ್ಥಿತಿ ಉಲ್ಟಾ ಆಗಲಿದೆ.
ದಿಢೀರ್ ಪ್ರಧಾನಿ ಭೇಟಿ ಮಾಡಿದ ಸಂಸದೆ
ಇನ್ನು ತಾವು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವ ಕುರಿತು ಬರೆದುಕೊಂಡಿರುವ ಸಂಸದೆ ಸುಮಲತಾ ಅವರು, ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 73ನೇ ಜನ್ಮ ದಿನದ ಶುಭಾಶಯಗಳನ್ನು ಹೇಳಿದೆ. ಮತ್ತು ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದೆ. ಈ ಸಂದರ್ಭದಲ್ಲಿ ನನ್ನ ಕ್ಷೇತ್ರ ಮಂಡ್ಯ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅದಕ್ಕೆ ಸಂಬಂಧಿಸಿದ ಅನೇಕ ಸಲಹೆ ಸಹಕಾರವನ್ನು ಮಾನ್ಯ ಪ್ರಧಾನ ಮಂತ್ರಿಗಳು ನೀಡಿದರು ಎಂದಿದ್ದಾರೆ.
ನಮ್ಮೆಲ್ಲರ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಮಾನ್ಯ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ 73ನೇ ಜನ್ಮ ದಿನದ ಶುಭಾಶಯಗಳನ್ನು ಹೇಳಿದೆ. ಮತ್ತು ಇತ್ತೀಚೆಗಷ್ಟೇ ನಡೆದ G20 ಶೃಂಗಸಭೆಯ ಯಶಸ್ಸಿಗೆ ಅಭಿನಂದನೆಗಳನ್ನು ತಿಳಿಸಿದೆ.
— Sumalatha Ambareesh 🇮🇳 ಸುಮಲತಾ ಅಂಬರೀಶ್ (@sumalathaA) September 19, 2023
ಈ ಸಂದರ್ಭದಲ್ಲಿ ನನ್ನ ಕ್ಷೇತ್ರ ಮಂಡ್ಯ ಮತ್ತು ಕರ್ನಾಟಕದ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಅದಕ್ಕೆ… pic.twitter.com/GFDsjZy0ZP
ಅಲ್ಲದೆ, ಸಾಕಷ್ಟು ಒತ್ತಡ ಮತ್ತು ಬಿಡುವಿಲ್ಲದ ಕೆಲಸಗಳ ನಡುವೆಯೂ ಕಡಿಮೆ ಸಮಯದಲ್ಲಿ ನನ್ನ ಭೇಟಿಗೆ ಅವಕಾಶ ನೀಡಿದ ಮಾನ್ಯ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಕಠಿಣ ಪರಿಶ್ರಮ ಮತ್ತು ದೇಶದ ಬಗೆಗಿನ ದೂರದೃಷ್ಟಿ ಯಾವಾಗಲೂ ನಮಗೆ ಸ್ಫೂರ್ತಿ ಹಾಗೂ ಮಾದರಿ. ಧನ್ಯವಾದಗಳು ಸರ್ ಎಂದು ಟ್ವಿಟ್ಟರ್‌ನಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪೋಸ್ಟ್ ಹಾಕಿರುವುದು ಕುತೂಹಲ ಕೆರಳಸಿದೆ.
ಒಟ್ನಲ್ಲಿ ಈಗಾಗಲೇ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ತಮ್ಮ ಬೆಂಬಲ ಘೋಷಿಸಿ, ಈ ಬಾರಿ ಲೋಕಸಭೆ ಚುನಾವಣೆಗೆ ಅಬ್ಬರದ ಸಿದ್ಧತೆ ನಡೆಸಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಅದರಲ್ಲೂ ಜೆಡಿಎಸ್ ಮತ್ತು ಬಿಜೆಪಿ ನಡುವೆ ಮೈತ್ರಿ ನಡೆದರೆ ಸಂಸದೆ ಸುಮಲತಾ ಅವರಿಗೆ ಬಿಜೆಪಿಯ ಬೆಂಬಲ ಅಥವಾ ಬಿಜೆಪಿ ಟಿಕೆಟ್ ಸಿಗುವುದು ಡೌಟ್. ಆಗ ಮಂಡ್ಯ ಕ್ಷೇತ್ರವನ್ನ ಜೆಡಿಎಸ್ ತಮ್ಮ ಅಭ್ಯರ್ಥಿಗೆ ಕೇಳುವ ನಿರೀಕ್ಷೆ ಇದೆ. ಹೀಗಾಗಿ ಸಂಸದೆ ಸುಮಲತಾ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದು ಸಂಚಲನವನ್ನೇ ಸೃಷ್ಟಿಮಾಡಿದೆ.












Click it and Unblock the Notifications