ಮಂಡ್ಯ ಬಿಟ್ಟು ಕೊಟ್ಟ ಸುಮಲತಾಗೆ ಬಂಪರ್ ಗಿಫ್ಟ್ ಕೊಟ್ಟ ಹೈಕಮಾಂಡ್ ?
ಬೆಂಗಳೂರು, ಜೂನ್ 01: ಕಳೆದ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಸುಮಲತಾ ಅಂಬರೀಶ್ ಅವರಿಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಕ್ಕಿಲ್ಲ. 2024 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯಾದ ಹಿನ್ನೆಲೆ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ಕೈ ತಪ್ಪಿದ್ದು, ಇದೀಗ ಬಿಜೆಪಿ ಹೈಕಮಾಂಡ್ ಬಂಪರ್ ಆಫರ್ ನೀಡಲು ಮುಂದಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಗೆ ಮೂರು ಪಕ್ಷದಲ್ಲೂ ಭರ್ಜರಿ ಸಿದ್ದತೆ ಜೋರಾಗಿ ನಡೆಯುತ್ತಿದೆ. ಯಾರಿಗೆ ಟಿಕೆಟ್ ಸಿಗುತ್ತೆ? ಯಾರು ಮೇಲ್ಮನೆ ಪ್ರವೇಶಿಸುತ್ತಾರೆ ಎನ್ನುವ ಕುತೂಹಲ ಮೂಡಿಸಿದೆ. ಕಾಂಗ್ರೆಸ್ನಲ್ಲಿ ಏಳು ಸ್ಥಾನಕ್ಕೆ ಆಕಾಂಕ್ಷಿ ಪಟ್ಟಿ ಹನುಮಂತನ ಬಾಲದಂತೆ ಇದ್ದರೆ, ಇತ್ತ ಬಿಜೆಪಿ ತನ್ನ ಪಾಲಿನ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಮಂಡ್ಯ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದಕ್ಕೆ ಹೈಕಮಾಂಡ್, ಸುಮಲತಾ ಅವರನ್ನು ವಿಧಾನಪರಿಷತ್ ಆಯ್ಕೆ ಮಾಡಿದೆ ಎನ್ನಲಾಗಿದೆ. ಜೂನ್ 3ರಂದು ವಿಧಾನಸಬೆಯಿಂದ ವಿಧಾನ ಪರಿಷತ್‌ಗೆ ಒಟ್ಟು 13 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ. ಒಟ್ಟು 13 ಸ್ಥಾನಗಳ ಪೈಕಿ ಬಿಜೆಪಿಗೆ ಮೂರು ಸ್ಥಾನಗಳು ಸಿಗಲಿದ್ದು, ಆ ಮೂವರು ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಿದ್ದು, ಇದರಲ್ಲಿ ಸುಮಲತಾ ಅಂಬರೀಶ್ ಹೆಸರು ಇರುವುದು ತಿಳಿದುಬಂದಿದೆ. ಇಂದು (ಜೂನ್ 01) ಅಧಿಕೃತ ಪಟ್ಟಿ ಪ್ರಕಟವಾಗುವ ಸಾಧ್ಯತೆಗಳಿವೆ.
ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಅಭ್ಯರ್ಥಿಗಳ ಆಯ್ಕೆ ಕುರಿತು ರಾಜ್ಯ ಕೋರ್ ಕಮಿಟಿಯಲ್ಲಿ ಚರ್ಚಿಸಿದ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ರವಾನಿಸುವಂತೆ ಬಿಜೆಪಿ ಹೈಕಮಾಂಡ್ ಸೂಚಿಸಿತ್ತು. ಅದರಂತೆ ರಾಜ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಚರ್ಚಿಸಲಾದ 15ಕ್ಕೂ ಹೆಚ್ಚು ಹೆಸರುಗಳನ್ನು ಕೇಂದ್ರಕ್ಕೆ ಕಳುಹಿಸಿಕೊಡಲಾಗಿದ್ದು, ಅದರಂತೆ ಸಂಸದೆ ಸುಮಲತಾ ಅಂಬರೀಶ್, ಪರಿಷತ್ ಸದಸ್ಯ ಎನ್. ರವಿಕುಮಾರ್ ಹಾಗೂ ಎಂ. ನಾಗರಾಜು ಅವರಿಗೆ ಪರಿಷತ್ ಟಿಕೆಟ್ ಬಹುತೇಕ ಫಿಕ್ಸ್ ಎನ್ನಲಾಗಿದೆ. ಇಂದು ರಾತ್ರಿ ಒಳಗೆ ಅಧಿಕೃತವಾಗಿ ಹೈಕಮಾಂಡ್ ಘೋಷಿಸಲಿದೆ ಎಂದು ಹೇಳಲಾಗಿದೆ
ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕೊನೆ ಕ್ಷಣದ ವರೆಗೂ ಸುಮಲತಾ ಅಂಬರೀಶ್ ಹೋರಾಟವನ್ನ ನಡೆಸಿದ್ರು, ಮೈತ್ರಿಯಾದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡಬೇಕಾಯಿತು. ಮಂಡ್ಯ ಕ್ಷೇತ್ರದ ಬಿಟ್ಟು ಕೊಟ್ಟ ಹಿನ್ನೆಲೆ ಮುಂದಿನ ದಿನಗಳಲ್ಲಿ ಉತ್ತಮ ಸ್ಥಾನವನ್ನ ನೀಡುವ ಭರವಸೆಯನ್ನ ಬಿಜೆಪಿ ಹೈಕಮಾಂಡ್ ನೀಡಿತ್ತು. ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವಂತೆಯೂ ರಾಜ್ಯ ನಾಯಕರು ಕೇಂದ್ರದ ಮುಖಂಡರಿಗೆ ಮನವಿ ಮಾಡಿದ್ದಾರೆ. ಹೀಗಾಗಿ ಮಂಡ್ಯ ಕ್ಷೇತ್ರವನ್ನು ತ್ಯಾಗ ಮಾಡಿದ ಸುಮಲತಾ ಅಂಬರೀಶ್ ಹೆಸರು ಮುನ್ನೆಲೆಗೆ ತಂದಿದೆ ಎಂದು ತಿಳಿದುಬಂದಿದೆ.
ಇನ್ನೂ ವಿಧಾನಸಭೆ ಚುನಾವಣೆಯಲ್ಲಿ ಸೋಲುಕಂಡಿರುವ ಸಿಟಿ ರವಿ ಹಾಗೂ ಮಾಧುಸ್ವಾಮಿ ಅವರನ್ನು ವಿಧಾನ ಪರಿಷತ್‌ಗೆ ಕಳುಹಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಬಗ್ಗೆ ಪರೋಕ್ಷವಾಗಿ ಇತ್ತೀಚೆಗೆ ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರೇ ಹೇಳಿದ್ದರು. ಅಲ್ಲದೇ ಕೋರ್ ಕಮಿಟಿ ಸಭೆಯಲ್ಲೂ ಸಹ ಪಟ್ಟಿಯಲ್ಲಿ ಸಿಟಿ ರವಿ ಹಾಗೂ ಲೋಕಸಭಾ ಟಿಕೆಟ್ ವಂಚಿತ ಸದಾನಂದಗೌಡ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರ ಹೆಸರುಗಳನ್ನು ಸಹ ಹೈಕಮಾಂಡ್ಗೆ ಕಳುಹಿಸಲಾಗಿದೆ.
ಎನ್ ರವಿ ಕುಮಾರ್ ಅವರ ಪಕ್ಷ ಸಂಘಟನೆ ಹಾಗೂ ಪಕ್ಷ ನೀಡುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವುದರಿಂದ ಅವರಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಮಾಹಿತಿ ಪ್ರಕಾರ ಸಿ ಟಿ ರವಿ ಹಾಗೂ ಮಾಧುಸ್ವಾಮಿ ಅವರಿಗೆ ಅವಕಾಶ ಸಿಗುವುದು ಅನುಮಾನವಾಗಿದ್ದು, ಎನ್ ರವಿ ಕುಮಾರ್, ಸುಮಲತಾ ಅಂಬರೀಶ್ ಮತ್ತು ಎಂ. ನಾಗರಾಜು ಹೆಸರುಗಳನ್ನ ಹೈಕಮಾಂಡ್ ಫೈನಲ್ ಮಾಡಿದೆ ಎಂದು ತಿಳಿದು ಬಂದಿದೆ.












Click it and Unblock the Notifications