ರಾಜ್ಯದಲ್ಲಿ ರಾಜಕೀಯ ದೊಂಬರಾಟ: ಕಾಂಗ್ರೆಸ್ ವಿರುದ್ಧ ಸುಧಾಕರ್ ವಾಗ್ದಾಳಿ
ಬೆಂಗಳೂರು, ಏಪ್ರಿಲ್ 18: ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಕಾಂಗ್ರೆಸ್ ಆಗ್ರಹ ಮಾಡಿದೆ. ರಾಜ್ಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದೆ. ಈ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ರಾಜಕೀಯ ದೊಂಬಾರಾಟ ನಡೆಸುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಆರೋಪ ಮಾಡಿದ್ದಾರೆ.
Recommended Video
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸುಧಾಕರ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. "ಇತ್ತೀಚೆಗೆ ಸುಳ್ಳುಗಳ ಕಂತೆಯನ್ನೇ ಸತ್ಯ ಎಂದು ಬಿಂಬಿಸುವ ರಾಜಕೀಯ ದೊಂಬರಾಟ ರಾಜ್ಯದಲ್ಲಿ ನಡೆಯುತ್ತಿದೆ. ಆಧಾರ ರಹಿತ, ದಾಖಲೆಗಳೇ ಇಲ್ಲದ ಆರೋಪಗಳ ಮೂಲಕ ಸರ್ಕಾರದ ವರ್ಚಸ್ಸಿಗೆ ಮಸಿ ಬಳೆಯುವ ಮತ್ತು ಸಚಿವರ ತೇಜೋವಧೆ ಮಾಡುವ ಹುನ್ನಾರ ನಡೆದಿದೆ," ಎಂದು ಆರೋಪ ಮಾಡಿದ್ದಾರೆ.
"ಇದಕ್ಕಾಗಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಆರ್‌ಟಿಐ ಕಾರ್ಯಕರ್ತರ ಸೋಗಿನಲ್ಲಿರುವ ಕೆಲವರ ಮೂಲಕ ದೂರುಗಳನ್ನು ಕೊಡಿಸಿ ದೊಡ್ಡ ಹಗರಣ, ಭ್ರಷ್ಟಾಚಾರ ನಡೆದಿದೆ ಎಂದು ಬಿಂಬಿಸುವ ಕಸರತ್ತು ನಡೆಯುತ್ತಿದೆ," ಎಂದು ತಿಳಿಸಿದ್ದಾರೆ.

"ದಾಖಲೆಗಳು ಇದ್ದರೆ ಎಸಿಬಿ, ಲೋಕಾಯಕ್ತಕ್ಕೆ ದೂರು ನೀಡಿ"
"ಇವರ ಆರೋಪಗಳಲ್ಲಿ ಸತ್ಯಾಂಶ ಇದ್ದಲ್ಲಿ, ದಾಖಲೆಗಳು ಇದ್ದಲ್ಲಿ ಎಸಿಬಿ, ಲೋಕಾಯುಕ್ತ ಇಲ್ಲವೇ ಕೋರ್ಟ್‌ಗಳಿಗೆ ದೂರು ನೀಡಬಹುದು. ಆದರೆ ಇವರಿಗೆ ಸತ್ಯ ಬೇಕಾಗಿಲ್ಲ. ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವುದು ಇವರ ಏಕೈಕ ಉದ್ದೇಶ. ರಚನಾತ್ಮಕ ಪ್ರತಿಪಕ್ಷವಾಗಿ ವಿಫಲರಾಗಿರುವ ಕಾಂಗ್ರೆಸ್ ನಾಯಕರ ಕುತಂತ್ರ ರಾಜಕಾರಣ ಇದು," ಎಂದು ಕಿಡಿಕಾರಿದರು. "ಪ್ರತಿಭಟನೆ ಹೆಸರಿನಲ್ಲಿ ಪ್ರತಿದಿನ ಬೀದಿ ನಾಟಕ ಆಡುತ್ತಿದ್ದಾರೆ. ಹಿಂದೆ ಇವರು ಅಧಿಕಾರದಲ್ಲಿದ್ದಾಗ ಹಗರಣಗಳ ಕೆಸರಿನಲ್ಲೇ ಮುಳುಗಿ ಹೋಗಿದ್ದರು. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಈಗ ಬೇರೆಯವರ ತಟ್ಟೆಯಲ್ಲಿ ನೋಣ ಹುಡುಕುವ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ," ಎಂದು ವಾಗ್ದಾಳಿ ನಡೆಸಿದರು.

ಮೂರು ವರ್ಷ ನಿದ್ರೆಯಲ್ಲಿದ್ದ ಕಾಂಗ್ರೆಸ್!
"ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಕಾಂಗ್ರೆಸ್ ನಾಯಕರು ನಿದ್ರಾವಸ್ಥೆಯಲ್ಲಿದ್ದರು. ಚುನಾವಣೆಗೆ ಇನ್ನೇನು ಒಂದು ವರ್ಷ ಇದೆ ಅನ್ನುವಾಗ ಹೇಗಾದರೂ ಅಧಿಕಾರಕ್ಕೆ ಬರಬೇಕು ಎಂದು ಇಂಥ ವಾಮಮಾರ್ಗ ಹಿಡಿದಿದ್ದಾರೆ," ಎಂದು ಸುಧಾಕರ್ ದೂರಿದ್ದಾರೆ. "ಮೌಲ್ಯಾಧಾರಿತ ರಾಜಕಾರಣಕ್ಕೆ, ಆರೋಗ್ಯಕರ ಸ್ಪರ್ಧೆಗೆ ಕರ್ನಾಟಕ ದೇಶಕ್ಕೆ ಮಾದರಿಯಾಗಿತ್ತು. ಕೀಳು ಮಟ್ಟದ ಕುತಂತ್ರಿ ರಾಜಕಾರಣದ ಮೂಲಕ ಅಂತಹ ಉನ್ನತ ಪರಂಪರೆಗೆ ಕಾಂಗ್ರೆಸ್ ನಾಯಕರು ತಿಲಾಂಜಲಿ ಇಡುತ್ತಿದ್ದಾರೆ," ಎಂದು ಹೇಳಿದ್ದಾರೆ.

ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ
"ಒಳ್ಳೇ ಕೆಲಸ ಮಾಡುತ್ತಿರುವ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲು ಕಾಂಗ್ರೆಸ್ಸಿಗರಿಗೆ ಯಾವ ನೈತಿಕತೆಯಿದೆ? ಹಗರಣಗಳ ಭೂತವನ್ನೇ ಬೆನ್ನಿಗೆ ಕಟ್ಟಿಕೊಂಡಿರುವ ಇವರ ಬಯಲಾಟವನ್ನು ರಾಜ್ಯದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನಾದರೂ ಆತ್ಮಾವಲೋಕನ ಮಾಡಿಕೊಂಡು ರಚನಾತ್ಮಕ ಚಟುವಟಿಕೆಗಳ ಮೂಲಕ ಜನರ ಮುಂದೆ ಹೋಗಲಿ," ಎಂದು ಟ್ವೀಟ್ ಮಾಡಿದ್ದಾರೆ. "ಅಧಿಕಾರಕ್ಕೆ ಬಂದೆ ಬಿಟ್ಟೆವು ಎಂಬ ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರ ಜತೆ ಕೆಲ ಹಿತಶತ್ರುಗಳು ಕೈಜೋಡಿಸಿ ಷಡ್ಯಂತ್ರ ನಡೆಸಿರುವ ಎಲ್ಲ ಮಾಹಿತಿಯಿದೆ. ಇವರ ಮುಖವಾಡಗಳನ್ನು ಕಳಚಿ ಬೆತ್ತಲು ಮಾಡುವ ದಿನ ದೂರವಿಲ್ಲ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
|
ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಪ್ರತಿಭಟನೆ
ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಎ1 ಆರೋಪಿ ಕೆ.ಎಸ್.ಈಶ್ವರಪ್ಪ ವಿರುದ್ಧ ಭ್ರಷ್ಟಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹ ಮಾಡಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ರೂವಾರಿ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಹಾಗೂ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕೆಂದು ಆಗ್ರಹಿಸಿ ಚಿಕ್ಕಮಗಳೂರಿನ ಆಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಹೈಕೋರ್ಟ್ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.












Click it and Unblock the Notifications