ಕರ್ನಾಟಕದ ಈ ಭಾಗದಲ್ಲಿ ದಿಢೀರ್ ಆರ್ಥಿಕ ಸಂಕಷ್ಟ, ಕಾರಣವೇನು ?
ದೇಶದಲ್ಲೇ ಆರ್ಥಿಕವಾಗಿ ಬಲಿಷ್ಠವಾಗಿರುವ ರಾಜ್ಯಗಳ ಸಾಲಿನ ಕರ್ನಾಟಕವೂ ಇದೆ. ಆದರೆ ಇದೀಗ ಕರ್ನಾಟಕದ ಪ್ರಮುಖ ಪ್ರದೇಶವೊಂದಕ್ಕೆ ಆರ್ಥಿಕ ಸಂಕಷ್ಟ ಎದುರಾಗಿದೆ. ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನ ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ, ಕರ್ನಾಟಕದ ಈ ಭಾಗದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವುದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರ್ಥಿಕ ನೀತಿ ಏನು ಕಾರಣವಲ್ಲ. ಇನ್ನೇನು ಕಾರಣ ಹಾಗೂ ಕರ್ನಾಟಕದ ಯಾವ ಭಾಗದಲ್ಲಿ ಆರ್ಥಿಕ ಸಂಕಷ್ಟ ಎದುರಾಗುವ ಆತಂಕ ಎದುರಾಗಿದೆ ಎನ್ನುವ ವಿವರ ಇಲ್ಲಿದೆ.
ಆರ್ಥಿಕ ಸಂಕಷ್ಟದಲ್ಲಿ ಬಳಲಲಿರುವ ಕರಾವಳಿ ಕರ್ನಾಟಕ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಬಗ್ಗೆ ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ (Deekshith Konaje) ಅವರು ವಿಶೇಷವಾದ ಬರಹವೊಂದನ್ನು ಹಂಚಿಕೊಂಡಿದ್ದಾರೆ. ಮೇ ತಿಂಗಳಿನಲ್ಲಿ ಶುರುವಾದ ಮಳೆ ಆಗಸ್ಟ್ ಅಂತ್ಯದವರೆಗೂ ಮುಂದುವರಿದಿದೆ. ನಮ್ಮಲ್ಲಿ ತೆಂಗು,ಅಡಿಕೆ ಹಾಗೂ ಮಲ್ಲಿಗೆ ಕೃಷಿ ಇದೆ. ತೆಂಗಿಗೆ ಅಷ್ಟೇನೂ ಸಮಸ್ಯೆ ಇಲ್ಲ ಆದರೆ ಅಡಿಕೆ ಸತ್ಯನಾಶ, ಮಲ್ಲಿಗೆಯೂ ಬರೋಲ್ಲ, ಭತ್ತ ಮಾಡುವುದನ್ನು ಬಿಟ್ಟು ಕೆಲ ವರ್ಷ ಆಯಿತು. ಆದರೆ, ಮಾಡಿದವರ ಪರಿಸ್ಥಿತಿ ದಯನೀಯ. ಇದು ಕರಾವಳಿಗರ ಕೃಷಿ ಬದುಕಿನ ಕಥೆ , ನಮ್ಮ ಮನೆ ಮಾತ್ರವಲ್ಲ ಕರಾವಳಿಯಾದ್ಯಂತ ಬರೀ ಕೃಷಿಯನ್ನು ನೆಚ್ಚಿಕೊಂಡವರ ಪರಿಸ್ಥಿತಿ ದೇವರಿಗೆ ಪ್ರೀತಿ ಎಂದಿದ್ದಾರೆ.

ಮೇಲಿನದ್ದು ಪ್ರಕೃತಿ ಕೊಟ್ಟ ಹೊಡೆತವಾದರೆ ಇನ್ನೊಂದೆಡೆ ಸರಕಾರ ಕೆಂಪುಕಲ್ಲಿಗೆ ದುಬಾರಿ ರೇಟು ನಿಗದಿ ಮಾಡಿದ ಕಾರಣಕ್ಕೆ ನಿರ್ಮಾಣ ಕಾಮಗಾರಿ ಕುಂಟುತ್ತಿದೆ. ಹೀಗಾಗಿ ಮೇಸ್ತ್ರಿ, ಹೆಲ್ಪರ್ ಮಾತ್ರವಲ್ಲದೇ ಹಾರ್ಡ್ವೇರ್ ಶಾಪ್ ,ದಿನಸಿ ಸಾಮಾಗ್ರಿಗಳ ವ್ಯಾಪಾರಸ್ಥರು ಸಮೇತ ಹೊಡೆತ ತಿನ್ನುತ್ತಿದ್ದಾರೆ. ನಾನು ಹೇಳುವುದು ಸುಳ್ಳೆಂದು ಅನಿಸಿದರೆ ಊರಿನ ಸಣ್ಣಪುಟ್ಟ ವರ್ತಕರ ಜೊತೆ ಚರ್ಚಿಸಿ ನೋಡಿ. ಮತ್ತೊಂದೆಡೆ ಪೋಲಿಸ್ ಕಮಿಷನರ್ ಅವರ ಆದೇಶದಿಂದ ಕಾರ್ಯಕ್ರಮಗಳಲ್ಲಿ ಎರಡು ಸ್ಪೀಕರ್ ಗಿಂತ ಜಾಸ್ತಿ ಬಳಸುವಂತಿಲ್ಲ. ಹತ್ತುಗಂಟೆಯ ಮೇಲೆ ಬಳಸುವಂತಿಲ್ಲ. ಹಾಗಾಗಿ ಧ್ವನಿ ಹಾಗೂ ಬೆಳಕು ಸಂಬಂಧಿತ ವ್ಯಾಪಾರದವರಿಗೂ ಹೊಡೆತ. ಈ ಕಾಲಮಿತಿಯ ಕಾರ್ಯಕ್ರಮದಿಂದಾಗಿ ನಾಟಕ ಪ್ರದರ್ಶನಗಳು ಅಥವಾ ಇನ್ಯಾವುದೋ ಸಾಂಸ್ಕೃತಿಕ ಕಾರ್ಯಕ್ರಮ ನಡೆಯದೇ ಕಲಾವಿದರ ಬದುಕೂ ಬೀದಿಗೆ ಬೀಳುವಂತಿದೆ.
ಬೆಚ್ಚಗಿನ ರೂಮಲ್ಲಿ ಕೂತು ಕೆಲಸ ಮಾಡುವ ನಮ್ಮಂತವರಿಗೆ ಹೊರಗೆ ಕೆಲಸಮಾಡುವ ಜನರ ಕಷ್ಟ ಹೇಗೆ ಅರಿವಾಗಬೇಕು ಅಲ್ಲವಾ. ಇದರ ಮೇಲೆ ಕರಾವಳಿ 7 ಗಂಟೆಯ ಮೇಲೆ ಸಾಯುತ್ತದೆ ಎನ್ನುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ ಇನ್ಮುಂದೆ ಬೆಳಗ್ಗೆಯೇ ಕರಾವಳಿ ಸಾಯುತ್ತದೆ ಅದಕ್ಕೆ ಕಾರಣೀಕರ್ತರು ನಿಮ್ಮ ಸರಕಾರ. ಡಾ.ಜಿ ಪರಮೇಶ್ವರ್ ಅವರೇ ನಿಮ್ಮ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಪೋಲೀಸರಿಗೆ ಜನಸ್ನೇಹಿಯಾಗಿ ಕೆಲಸ ಮಾಡುವ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದು ಮನವಿ ಮಾಡಿದ್ದಾರೆ.
ಕರಾವಳಿಯ ಶಾಸಕರೇ ನಿದ್ದೆ ಬಿಡಿ ಸ್ವಲ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರಾವಳಿಯ ಸಮಸ್ಯೆಗಳ ಕುರಿತಾಗಿ ಬೆಳಕು ಚೆಲ್ಲಿ. ಈ ಸಮಸ್ಯೆಗಳು ಸರಿಯಾಗದೇ ಇದ್ದಲ್ಲಿ ಮಕ್ಕಳ ಫೀಸು ಕಟ್ಟಲಾಗದೇ, ಬ್ಯಾಂಕಿನ ಇಎಂಐ ಕಟ್ಟಲಾಗದೇ, ಮನೆಯವರಿಗೆ ಹೊಟ್ಟೆಗೂ ಆಹಾರ ನೀಡಲಾಗದೇ ಕರಾವಳಿ ಜನ ಸಾಯುತ್ತಾರೆ ಎಂದು ಅವರು ನೋವು ತೋಡಿಕೊಂಡಿದ್ದಾರೆ. ಇದೀಗ ಈ ಬರಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.












Click it and Unblock the Notifications