ಉಕ್ರೇನ್‌ನಿಂದ ವಾಪಸ್ ಆದವರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ
ಬೆಂಗಳೂರು, ಫೆಬ್ರವರಿ 28; ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿಗಳು ಅವರ ಪ್ರದೇಶಗಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗಿದೆ.
ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ರಾಜ್ಯದ ವಿಮಾನ ನಿಲ್ದಾಣದೊಳಗಿನ ನೋಡೆಲ್ ಅಧಿಕಾರಿಗಳು, ರಸ್ತೆ ಸಾರಿಗೆ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯ ಸಾಧಿಸು ಇದನ್ನು ಕಾರ್ಯರೂಪಕ್ಕೆ ತರಬೇಕು ಎಂದು ಸೂಚನೆ ನೀಡಲಾಗಿದೆ.
ಉಕ್ರೇನ್‌ನಿಂದ ಹಿಂದಿರುಗಿದ ನಮ್ಮ ಜನರು, ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಪರಿಸ್ಥಿತಿ ಗಮನಿಸಿ ಕೆಎಸ್ಆರ್‌ಟಿಸಿ ಈ ಕುರಿತು ತೀರ್ಮಾನ ಕೈಗೊಂಡಿದೆ. ಕರ್ನಾಟಕದ ಹತ್ತಿರದ ವಿಮಾನ ನಿಲ್ದಾಣದಿಂದ ರಾಜ್ಯದೊಳಗಿನ ಅವರ ಸ್ಥಳೀಯ ಸ್ಥಳಗಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಶನಿವಾರ ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದ ರಾಜ್ಯದ 12 ವಿದ್ಯಾರ್ಥಿಗಳು ಭಾನುವಾರ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕಂದಾಯ ಸಚಿವ ಆರ್. ಅಶೋಕ ಸೇರಿದಂತೆ ವಿವಿಧ ನಾಯಕರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.
ನವೆದೆಹಲಿಗೆ ಆಗಮಿಸಿದ ವಿದ್ಯಾರ್ಥಿಗಳ ವಾಸ್ತವ್ಯಕ್ಕೆ ಕರ್ನಾಟಕ ಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಂದ ಅವರು ಬೆಂಗಳೂರಿಗೆ ಆಗಮಿಸಲು ಟಿಕೆಟ್ ಬುಕ್ ಮಾಡಿಕೊಡಲಾಗುತ್ತಿದೆ. ಇಂದು ಕರ್ನಾಟಕದ ನಾಲ್ವರು ವಿದ್ಯಾರ್ಥಿಗಳು ಭಾರತಕ್ಕೆ ಆಗಮಿಸುವ ನಿರೀಕ್ಷೆ ಇದೆ.
ಉಕ್ರೇನ್‌ನಿಂದ ಹಿಂದಿರುಗಿದ ನಮ್ಮ ಜನರು, ವಿಶೇಷವಾಗಿ ವಿದ್ಯಾರ್ಥಿ ಸಮುದಾಯದ ಪರಿಸ್ಥಿತಿಯನ್ನು ಪರಿಗಣಿಸಿ, ಕರ್ನಾಟಕದ ಹತ್ತಿರದ ವಿಮಾನ ನಿಲ್ದಾಣದಿಂದ ರಾಜ್ಯದೊಳಗಿನ ಅವರ ಸ್ಥಳೀಯ ಸ್ಥಳಗಳಿಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣವನ್ನು ನೀಡಲು ನಿರ್ಧರಿಸಲಾಗಿದೆ.
— KSRTC (@KSRTC_Journeys) February 28, 2022
(1/2)
ಬೆಂಗಳೂರು ನಗರದ 135 ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ 406 ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಇದುವರೆಗೆ 30 ವಿದ್ಯಾರ್ಥಿಗಳನ್ನು ಮಾತ್ರ ರಕ್ಷಣೆ ಮಾಡಲಾಗಿದೆ. ಸರ್ಕಾರ ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರಿಗೆ ನೆರವು ನೀಡಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಆರ್. ಮನೋಜ್ ರಂಜನ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದೆ.
ವಿವಿಧ ಜಿಲ್ಲೆಗಳಲ್ಲಿ ಸಹಾಯವಾಣಿಯನ್ನು ತೆರೆಯಲಾಗಿದೆ. ಪೋಷಕರು ಸಹಾಯವಾಣಿಯನ್ನು ಸಂಪರ್ಕಿಸಿ ತಮ್ಮ ಮಕ್ಕಳು ಉಕ್ರೇನ್‌ನಲ್ಲಿ ಸಿಲುಕಿದ್ದರೆ ಮಾಹಿತಿ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಫೆಬ್ರವರಿ 27ರ ಭಾನುವಾರ ಬುಕಾರೆಸ್ಟ್‌ನಿಂದ 250 ಮತ್ತು 198, ಬುಡಾಪೆಸ್ಟ್‌ನಿಂದ 240 ಭಾರತೀಯರನ್ನು ಕರೆತರಲಾಗಿದೆ. ಕೇಂದ್ರ ಸರ್ಕಾರ 'ಆಪರೇಷನ್ ಗಂಗಾ' ಹೆಸರಿನಲ್ಲಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಿ, ಏರ್ ಇಂಡಿಯಾ ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರುತ್ತಿದೆ.
ಕರ್ನಾಟಕದ ವಿದ್ಯಾರ್ಥಿಗಳ ರಕ್ಷಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, "ಉಕ್ರೇನ್‌ನಲ್ಲಿ ಉಳಿದಿರುವ ವಿದ್ಯಾರ್ಥಿಗಳನ್ನು ರಾಜ್ಯಕ್ಕೆ ಸುರಕ್ಷಿತವಾಗಿ ಕರೆತರಲು ಕ್ರಮಕೈಗೊಳ್ಳುತ್ತಿರುವುದಾಗಿ" ಹೇಳಿದ್ದಾರೆ.
"ಪಶ್ಚಿಮ ಭಾಗದಲ್ಲಿದ್ದ ವಿದ್ಯಾರ್ಥಿಗಳು ರೊಮೆನಿಯಾ ಮೂಲಕ ಭಾರತಕ್ಕೆ ಮರಳಿದ್ದಾರೆ. ಮುಂಬೈ ಹಾಗೂ ನವದೆಹಲಿಗೆ ಆಗಮಿಸಿರುವ ವಿದ್ಯಾರ್ಥಿಗಳನ್ನು ಬೆಂಗಳೂರಿಗೆ ಕರೆತರಲಾಗುತ್ತಿದೆ. ವಿಪತ್ತು ನಿರ್ವಹಣಾ ಇಲಾಖೆಯಿಂದಲೇ ವಿದ್ಯಾರ್ಥಿಗಳ ಪ್ರಯಾಣ ಹಾಗೂ ಇನ್ನಿತರ ವೆಚ್ಚಗಳನ್ನು ಭರಿಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಉಕ್ರೇನ್‌ನಿಂದ ಇನ್ನುಳಿದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರ ವಿದೇಶಾಂಗ ಸಚಿವರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯದ ಸಹಾಯವಾಣಿಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿವೆ" ಎಂದು ಮುಖ್ಯಮಂತ್ರಿಗಳು ಹೇಳಿದರು.
"ಹಲವಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆಗೆ ಚರ್ಚಿಸಲಾಗಿದೆ. ಉಕ್ರೇನ್‌ನ ಕಾರ್ಕೈವ್‌ನಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಸಿಲುಕಿದ್ದು, ಅದೇ ಪ್ರದೇಶದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಅಲ್ಲಿನ ಮೆಟ್ರೋ, ಬಂಕರ್ ಗಳಲ್ಲಿ ಬಹಳಷ್ಟು ಜನರನ್ನು ಇರಿಸಿರುವುದು ಆತಂಕದ ವಿಷಯ. ವಿದ್ಯಾರ್ಥಿಗಳ ಸುರಕ್ಷತೆಯ ಜೊತೆಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನು ಪೂರೈಸಲು ಕೇಂದ್ರ ವಿದೇಶಾಂಗ ಸಚಿವರನ್ನು ಮನವಿ ಮಾಡಲಾಗಿದೆ" ಎಂದರು.
"ಯುದ್ಧದ ಪರಿಸ್ಥಿತಿ ತಿಳಿಗೊಳ್ಳುವ ತನಕ ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ ನೀಡುವ ಜೊತೆಗೆ ಅವರನ್ನು ಭಾರತಕ್ಕೆ ಕರೆತರುವ ಬಗ್ಗೆಯೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ರಾಜ್ಯದ ಅಧಿಕಾರಿಗಳು ಈ ನಿಟ್ಟಿನಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದಾರೆ" ಎಂದು ತಿಳಿಸಿದರು.












Click it and Unblock the Notifications