ಎಲ್ಲರೆದುರೇ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಆಕ್ಷನ್ ತಗೊಳ್ಳಿ ಎಂದ ಸಚಿವ!
ಕರ್ನಾಟಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಸರಿಯಾಗಿ ಕನ್ನಡ ಬರೋದಿಲ್ಲ ಎನ್ನುವ ಆರೋಪವಿದೆ. ಬಿಜೆಪಿ ನಾಯಕರು ಕೂಡ ಬಗ್ಗೆ ಹಲವು ಬಾರಿ ಆರೋಪ ಮಾಡಿ, ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇಂದು ವಿದ್ಯಾರ್ಥಿಯೊಬ್ಬ ಇದೇ ಮಾತನ್ನು ಖುದ್ದು ಮಧು ಬಂಗಾರಪ್ಪ ಅವರ ಮುಂದೆ ಹೇಳುವ ಮೂಲಕ ಮುಜುಗರವಾಗುವಂತೆ ಮಾಡಿದ್ದಾನೆ.
ಇಂದು ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಸಂಗ ನಡೆದಿದೆ. ಸಚಿವ ಮಧು ಬಂಗಾರಪ್ಪ ಅವರು ಕಾರ್ಯಕ್ರಮವನ್ನುದ್ದೇಶಿ ಮಾತನಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದು ಜೋರಾಗಿ ಕೂಗಿದ್ದಾನೆ.

ಇದರಿಂದ ಮಧು ಬಂಗಾರಪ್ಪ ಅವರು ಮುಜುಗರಕ್ಕೀಡಾದರು. ಬಳಿಕ ನಗುತ್ತಲೇ ಅವರು ಲೇ..ಯಾರೋ ಅದು? ನಾನೇನು ಉರ್ದುವಿನಲ್ಲಾ ಮಾತಾಡ್ತಿದೀನಿ? ಎಂದು ಹೇಳಿದರು. ಬಳಿಕ ಕೋಪಗೊಂಡು ಮಾಧ್ಯಮದವರೂ ಇದನ್ನೇ ತೋರಿಸುತ್ತಿದ್ದಾರೆ. ಮೊದಲು ಆ ಹೇಳಿಕೆ ನೀಡಿದವನು ಯಾರೆಂದು ಪತ್ತೆ ಹಚ್ಚಿ, ಆಕ್ಷನ್ ತಗೊಳ್ಳಿ ಎಂದು ಅಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನೀಟ್ ಜೆಇಇ, ಸಿಇಟಿ ಪರೀಕ್ಷೆಗಳ ಉಚಿತ ಕೋಚಿಂಗ್ ತರಬೇತಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.

ವಿದ್ಯಾರ್ಥಿ ಹೇಳಿಕೆಗೆ ಫುಲ್ ಗರಂ ಆದ ಮಧು ಬಂಗಾರಪ್ಪ, ನಾನು ಕನ್ನಡದಲ್ಲೇ ಮಾತನಾಡಿದ್ದು ಎಂದು ಗಲಿಬಿಲಿಗೊಂಡರು. ನಂತರ ಪಕ್ಕದಲ್ಲಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸಿಂಧೂ ಬಿ ರೂಪೇಶ್ ಮತ್ತು ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಅವರಿಗೆ ಅದು ಯಾರು ನೋಡಿ, ರೆಕಾರ್ಡ್ ಮಾಡಿ ಅವರ ಮೇಲೆ ಆಕ್ಷನ್ ಕೈಗೊಳ್ಳಿ ಎಂದು ಆದೇಶಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಆದರೆ, ಶಿಕ್ಷಣ ಸಚಿವರ ಬಗ್ಗೆ ಮಾತನಾಡಿದ ವಿದ್ಯಾರ್ಥಿ ಯಾರು ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಸಚಿವರ ಸೂಚನೆ ಮೇರೆಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಯನ್ನು ಪತ್ತೆ ಹಚ್ಚುವ ಕೆಲಸದಲ್ಲಿದ್ದಾರೆ.

ವಿದ್ಯಾರ್ಥಿಗೂ ವಾಕ್ ಸ್ವಾತಂತ್ರ್ಯವಿದೆ ಎಂದ ಯತ್ನಾಳ್
ವಿದ್ಯಾರ್ಥಿ ಮೇಲೆ ಕ್ರಮಕ್ಕೆ ಸೂಚಿಸಿರುವ ಸಚಿವರ ನಡೆಯನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡಿಸಿದ್ದಾರೆ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ ಎಂಬುದು ರಾಜ್ಯಕ್ಕೆ ತಿಳಿದಂತಹ ವಿಚಾರ. ವಿದ್ಯಾರ್ಥಿ ಒಬ್ಬ ಸಚಿವರಿಗೆ ಕನ್ನಡ ಬರೋದಿಲ್ಲ ಅಂತ ಹೇಳಿದ್ದಕ್ಕೆ ಅವನ ಮೇಲೆ ಕ್ರಮ ಕೈಗೊಳ್ಳುವಂತೆ ಮಾಧ್ಯಮಗಳ ಎದುರೇ ಸಚಿವರು ಹೇಳಿದ್ದು ಇವರು ಎಷ್ಟು ಅಪ್ರಾಮಾಣಿಕರು ಎಂಬುದು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಶಿಕ್ಷಣ ಸಚಿವರು ಕನ್ನಡವನ್ನು ಸ್ಫುಟವಾಗಿ ಮಾತನಾಡಲು, ಬರೆಯಲು, ಓದಲು, ಸಂವಹನ ಮಾಡಲು ಕಲಿಯಬೇಕು. ವಿದ್ಯಾರ್ಥಿಗಳಾಗಲಿ, ಪತ್ರಕರ್ತರಿಂದಾಗಲಿ ರಚನಾತ್ಮಕ ಟೀಕೆಗಳನ್ನು ಸ್ವೀಕರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿಗಳಿಗೂ ಸೇರಿದಂತೆ ಎಲ್ಲರಿಗೂ ವಾಕ್ ಸ್ವಾತಂತ್ರ್ಯವಿರುತ್ತದೆ. ಇದನ್ನು ದಮನಿಸುವುದು ಹೇಯ ಹಾಗೂ ಖಂಡನೀಯ. ಸಚಿವರ ಅಸಮರ್ಥತೆಯನ್ನು ಪ್ರಶ್ನಿಸಿದ ವಿದ್ಯಾರ್ಥಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಯತ್ನಾಳ್ ಎಚ್ಚರಿಸಿದ್ದಾರೆ.











Click it and Unblock the Notifications